ಶನಿವಾರ, ಜನವರಿ 18, 2020
21 °C

ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

ಗುಲ್ಬರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರ, ನೌಕರರ ಮತ್ತು ಆಡಳಿತ ಮಂಡಳಿಗಳ ಸಂಘ ಗುಲ್ಬರ್ಗ ವತಿಯಿಂದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ ಗುರುವಾರ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರ 1995ರ ವರೆಗಿನ ಖಾಸಗಿ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು 2007ರಲ್ಲಿಯೇ ಆದೇಶ ನೀಡಿತ್ತು . ಆದರೆ 2008ರಲ್ಲಿ ನೆರೆ ಹಾವಳಿ ಕಾರಣದಿಂದ ಆರ್ಥಿಕ ಮಿತವ್ಯಯ ಜಾರಿ ಮಾಡಿತು. 2008ರ ಅಕ್ಟೋಬರ್‌ನಿಂದ ಇಲ್ಲಿಯ ವರೆಗೆ ಆರ್ಥಕ ಮಿತವ್ಯಯ ಸಡಿಲಿಸಿಲ್ಲ ಮತ್ತು ಈ ಶಾಲೆಗಳಿಗೆ ಅನುದಾನವನ್ನು ನೀಡುತ್ತಿಲ್ಲ.ಇಂತಹ ಶಾಲೆಗಳಲ್ಲಿ ಸುಮಾರು 18-20 ವರ್ಷಗಳಿಂದ ಸಂಬಳವಿಲ್ಲದೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇತ್ತ ಆಡಳಿತ ಮಂಡಳಿಗಳಿಂದಲೂ ಸಂಬಳವಿಲ್ಲ ಅತ್ತ  ಸರ್ಕಾರದಿಂದಲೂ ಸಂಬಳವಿಲ್ಲದೆ ಎಷ್ಟೋ ಶಿಕ್ಷಕರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಈ ಸಂಬಂಧ ಅನೇಕ ಹೋರಾಟಗಳನ್ನು ನಡೆಸಿದ್ದರೂ ಪ್ರಯೋಜನವಾಗಿಲ್ಲ. ಈ ಅನುದಾನದ ವಿಷಯಕ್ಕೆ ಸಂಬಂಧಿಸಿ 3 ಬಾರಿ ಮಂತ್ರಿ ಮಂಡಲದಲ್ಲಿ ಒಪ್ಪಿಗೆ ನೀಡಿ ಆದೇಶ ಆಗಿದೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಈ ಸಂಬಂಧ ಮುಖ್ಯ ಮಂತ್ರಿಗಳು 2011ರ ನ.10ರಂದು ಹಣಕಾಸು ಇಲಾಖೆಯೊಂದಿಗೆ ಸಭೆ ನಡೆಸಿ ಅನುದಾನ ನೀಡಲು ಸೂಚಿಸಿದರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿತನದ ಪರಮಾವಧಿಯಾಗಿದ್ದು ಇದನ್ನು ಕೂಡಲೇ ಸರಿಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಶಹಬಜಾರ ಸುಲಫಲ ಮಠದ ಶ್ರೀ ಮಹಾಂತ ಶಿವಾಚಾರ್ಯ, ಸೊನ್ನ ವಿರಕ್ತ ಮಠದ ಶಿವಾನಂದ ಮಹಾಸ್ವಾಮಿ, ಗುಲ್ಬರ್ಗ ಶಿಲ್ಪಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಟಿ. ಉತ್ತಮ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಪ್ರತಿಕ್ರಿಯಿಸಿ (+)