ಶನಿವಾರ, ಮೇ 21, 2022
23 °C

ಶಿಕ್ಷಣ ಸಂಸ್ಥೆಗಳ ವಿರುದ್ಧ ಎಬಿವಿಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಒದಗಿಸುವ ನೆಪದಲ್ಲಿ ವಿದ್ಯಾರ್ಥಿ ಮತ್ತು ಪಾಲಕರನ್ನು ದರೋಡೆ ಮಾಡುತ್ತಿವೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.ವಂತಿಗೆ (ಡೊನೆಷನ್) ಹಾವಳಿಯಿಂದಾಗಿ ಶಿಕ್ಷಣವು ದುಬಾರಿಯಾಗಿ ಮಾರ್ಪಟ್ಟಿದ್ದು, ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಕಾಲೇಜುಗಳು ಪರಸ್ಪರ ವಂತಿಗೆ ವಸೂಲಿಗೆ ಪೈಪೋಟಿಗೆ ಇಳಿದಿವೆ. ಇದರಿಂದ ಮೌಲ್ಯಾಧಾರಿತ ಶಿಕ್ಷಣ ಎಂಬುದು ಗಗನಕುಸುಮವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಭಾರಿ ಪ್ರಮಾಣದಲ್ಲಿ ಹಣ ವಸೂಲಿ ಮಾಡಿಕೊಳ್ಳುತ್ತಿರುವ ಅನೇಕ ಕಾಲೇಜುಗಳು ಮೂಲ ಸೌಕರ್ಯವನ್ನು ಹೊಂದಿರದೆ, ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿವೆ. ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳದಿರುವುದು ವಿಷಾದದ ಸಂಗತಿಯಾಗಿದೆ. ಅಧಿಕಾರಿಗಳು ಸಹ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ತಲೆಬಾಗುತ್ತಿದ್ದಾರೆ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ ಎಂದರು.ರಾಜ್ಯ ಸರ್ಕಾರವು ಕೂಡಲೇ ಒಂದು ತನಿಖಾ ಸಮಿತಿಯನ್ನು ರಚಿಸಿ, ವಂತಿಗೆ ಹಾವಳಿಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ವಂತಿಗೆ ವಸೂಲಿ ಹಾವಳಿ ಕಂಡುಬಂದಲ್ಲಿ, ಡಿಡಿಪಿಯು ಅವರನ್ನೆ ಹೊಣೆಯಾಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ಬಡ ಪ್ರತಿಭಾವಂತರನ್ನು ಗುರುತಿಸಿ ಕಾಲೇಜು ಶಿಕ್ಷಣವನ್ನು ಉಚಿತವಾಗಿ ನೀಡುವ ಬಗ್ಗೆ ಚಿಂತನೆ ನಡೆಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರವು ಅಂಕುಶ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಪ್ರವೀಣ ನಾಯಕ, ರಾಜು ತಳವಾರ, ವಿದ್ಯಾನಂದ, ಮಂಜು ಮೀಸೆ, ಆನಂದ ಮಾನೆ, ಕೈಲಾಸ ಪಾಟೀಲ, ಶರಣ ಎಸ್. ಚಿಂಚೋಳಿ, ದೀಪಕ ಶೇಖರ, ಗೌತಮ, ರೇಣುಕಾ, ಶ್ರೀದೇವಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.