ಸೋಮವಾರ, ಮೇ 17, 2021
27 °C

ಶಿಕ್ಷಣ ಹಕ್ಕು ಕಾಯ್ದೆಯನ್ನು ಎತ್ತಿ ಹಿಡಿದ ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಶಿಕ್ಷಣ ಹಕ್ಕು ಕಾಯ್ದೆ 2009ರ ಸಾಂವಿಧಾನಿಕ ಮೌಲ್ಯವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ ಅನುದಾನ ರಹಿತ ಶಾಲೆಗಳೂ ಕೂಡ ಶೇ. 25 ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಿಡಬೇಕೆಂದು ಗುರುವಾರ ಪ್ರಕಟಿಸಿದ ತನ್ನ ಮಹತ್ವದ ಹಾಗೂ ಐತಿಹಾಸಿಕ ಆದೇಶದಲ್ಲಿ ತಿಳಿಸಿದೆ.ಆದರೆ ಅನುದಾನ ರಹಿತ  ಅಲ್ಪಸಂಖ್ಯಾತ ಶಾಲೆಗಳನ್ನು ತನ್ನ ತೀರ್ಪಿನಿಂದ ಸುಪ್ರೀಂಕೋರ್ಟ್ ಹೊರಗಿಟ್ಟಿದೆ.

ಈ ತೀರ್ಪು ಗುರುವಾರದಿಂದಲೇ ಜಾರಿಗೆ ಬರುತ್ತದೆ ಆದರೆ ಹಿಂದೆ ಆಗಿರುವ ದಾಖಲಾತಿಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ನ್ಯಾಯಪೀಠ ತಿಳಿಸಿದೆ.ಅನುದಾನರಹಿತ ಶಾಲೆಗಳ ಒಕ್ಕೂಟ, ಸ್ವತಂತ್ರ ಶಾಲೆಗಳ ಭಾರತೀಯ ಒಕ್ಕೂಟ ಹಾಗೂ ಇನ್ನಿತರ ಖಾಸಗಿ ಶಾಲೆಗಳು ಶಿಕ್ಷಣ ಹಕ್ಕು ಕಾಯ್ದೆ 2009ರ ಸಾಂವಿಧಾನಿಕ ಮೌಲ್ಯವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.ನ್ಯಾಯಮೂರ್ತಿಗಳಲ್ಲೆ ಈ ಅರ್ಜಿಗೆ ಸಂಬಂಧಿಸಿದಂತೆ ವಿಭಿನ್ನ ತೀರ್ಪು ಪ್ರಕಟವಾಗಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಹಾಗೂ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರು ಶಿಕ್ಷಣ ಹಕ್ಕುಕಾಯ್ಕೆ 2009ರ ಸಾಂವಿಧಾನಿಕ ಮೌಲ್ಯವನ್ನು ಎತ್ತಿ ಹಿಡಿದರಲ್ಲದೆ ಅನುದಾನ ರಹಿತ ಅಲ್ಪಸಂಖ್ಯಾತ ಶಾಲೆಗಳನ್ನು ಬಿಟ್ಟು ಉಳಿದೆಲ್ಲಾ ಶಾಲೆಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಶೇ. 25ರಷ್ಟು ಮೀಸಲಾತಿ ನೀಡಬೇಕೆಂದು ಆದೇಶ ನೀಡಿದರು. ಆದರೆ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ಅವರು ಮಾತ್ರ ಶಿಕ್ಷಣ ಹಕ್ಕು ಕಾಯ್ದೆ 2009ರ ಸಾಂವಿಧಾನಿಕ ಮೌಲ್ಯವನ್ನು ರದ್ದುಪಡಿಸಿದರಲ್ಲದೆ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಮೇಲೆ ಬಡವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಪಡಿಸುವಂತಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದರು.ಆದಾಗ್ಯೂ ಬಹುಮತದ ಆಧಾರದ ಮೇಲೆ ಗುರುವಾರದಿಂದಲೇ ಅನುದಾನ ರಹಿತ ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳು ಶೇ. 25 ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಿಡಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.ಸಿಬಲ್ ಸ್ವಾಗತ : ತೀರ್ಪಿಗೆ ಸಂಬಂಧಿಸಿದಂತೆ ಹರ್ಷ ವ್ಯಕ್ತಪಡಿಸಿರುವ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಎಲ್ಲಾ ವಿವಾದಗಳಿಗೂ ನ್ಯಾಯಪೀಠ ತೆರೆ ಎಳೆದಿರುವುದು ಸಂತಸ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಇದೇ ರೀತಿ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಕೂಡ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.