ಶಿಕ್ಷಣ ಹಕ್ಕು ಕಾಯ್ದೆ; ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

7

ಶಿಕ್ಷಣ ಹಕ್ಕು ಕಾಯ್ದೆ; ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

Published:
Updated:
ಶಿಕ್ಷಣ ಹಕ್ಕು ಕಾಯ್ದೆ; ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಮಡಿಕೇರಿ: ಇದುವರೆಗೆ ಗಗನಕುಸುಮವಾಗಿದ್ದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲೂ (ಅನುದಾನ ರಹಿತ)   ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಬಡ ಮಕ್ಕಳಿಗೆ ಪ್ರವೇಶ ದೊರೆಯಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಶಿಕ್ಷಣ ಹಕ್ಕು ಕಾಯ್ದೆಗೆ ಕೊಡಗು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಜಿಲ್ಲೆಯ ಮೂರು ಶೈಕ್ಷಣಿಕ ವಲಯಗಳ 81 ಅನುದಾನ ರಹಿತ ಶಾಲೆಗಳಲ್ಲಿ ಒಂದನೇ ತರಗತಿಗೆ ನಿಗದಿಗೊಳಿಸಿದ 630 ಸ್ಥಾನಗಳಲ್ಲಿ ಕೇವಲ 223 ವಿದ್ಯಾರ್ಥಿಗಳು (ಶೇ 35) ಮಾತ್ರ ಪ್ರವೇಶ ಪಡೆದುಕೊಂಡಿದ್ದಾರೆ.ಮಡಿಕೇರಿಯಲ್ಲಿ ಶೇ 15ರಷ್ಟು, ಸೋಮವಾರಪೇಟೆಯಲ್ಲಿ ಶೇ 16ರಷ್ಟು ಮಾತ್ರ ಸೀಟುಗಳು ಭರ್ತಿಯಾಗಿದ್ದರೆ, ವಿರಾಜಪೇಟೆಯಲ್ಲಿ ಮಾತ್ರ ಶೇ 77ರಷ್ಟು ಸೀಟುಗಳು ಭರ್ತಿಯಾಗುವ ಮೂಲಕ ಆಶಾಭಾವನೆ ಮೂಡಿಸಿದೆ.ಸರ್ಕಾರದ ಆದೇಶದಂತೆ ಈ ಕಾಯ್ದೆಯಡಿ ಶೇ.25ರಷ್ಟು ಸೀಟುಗಳ ಪೈಕಿ ಪರಿಶಿಷ್ಟ ಜಾತಿಗೆ ಶೇ. 7.5 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 1.5 ರಷ್ಟು ಸೀಟುಗಳು, ಉಳಿದ ಶೇ.16ರಷ್ಟು ಸೀಟುಗಳನ್ನು ಹಿಂದುಳಿದ ವರ್ಗದ ಮಕ್ಕಳಿಗೆ ನೀಡಲಾಗುತ್ತದೆ.ತಾಲ್ಲೂಕುವಾರು ಪ್ರವೇಶ: ಮಡಿಕೇರಿಯ 20 ಖಾಸಗಿ ಶಾಲೆಗಳಲ್ಲಿ 194 ಮಕ್ಕಳಿಗೆ ಪ್ರವೇಶ ನೀಡಲು ಗುರಿ ಹೊಂದಲಾಗಿತ್ತು. ಅದರಲ್ಲಿ ಪ್ರವೇಶ ಪಡೆದಿರುವವರು ಕೇವಲ 30 ಮಕ್ಕಳು (ಶೇ 15). ಇವರ ಪೈಕಿ ನಾಲ್ಕು ಮಕ್ಕಳು ಪರಿಶಿಷ್ಟ ಜಾತಿಗೆ ಹಾಗೂ ಇನ್ನುಳಿದ 26 ಮಕ್ಕಳು ಒಬಿಸಿ ವರ್ಗಕ್ಕೆ ಸೇರಿದವರು. ಪರಿಶಿಷ್ಟ ಪಂಗಡದ ಯಾವೊಬ್ಬ ವಿದ್ಯಾರ್ಥಿಯೂ ಇದರ ಲಾಭ ಪಡೆದಿಲ್ಲ.ತಾಲ್ಲೂಕಿನ 20 ಖಾಸಗಿ ಶಾಲೆಗಳ ಪೈಕಿ 11 ಶಾಲೆಗಳಲ್ಲಿ ಒಬ್ಬರೂ ಪ್ರವೇಶ ಪಡೆದಿಲ್ಲ ಎನ್ನುವುದು ಆಘಾತ ಹುಟ್ಟಿಸುವಂತಹದ್ದು.ಸಿದ್ದಾಪುರದ ಶ್ರೀ ಕೃಷ್ಣ ವಿದ್ಯಾಮಂದಿರ ಶಾಲೆಯಲ್ಲಿ ಅತಿ ಹೆಚ್ಚು ಮಕ್ಕಳು (9) ದಾಖಲಾತಿ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಮಡಿಕೇರಿಯ ರಾಜೇಶ್ವರಿ ಪ್ರಾಥಮಿಕ ಶಾಲೆಯಲ್ಲಿ 4, ಲಿಟಲ್ ಫ್ಲಾವರ್ ವಿದ್ಯಾಸಂಸ್ಥೆಯಲ್ಲಿ 1, ಬೇತು ಗ್ರಾಮದ ಸೆಕ್ರೆಡ್ ಹಾರ್ಟ್ ಶಾಲೆಯಲ್ಲಿ 5, ಕೊರಂಗಾಲದ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ 2, ನಾಪೋಕ್ಲುವಿನ ರಾಮಾ ಟ್ರಸ್ಟ್ ಶಾಲೆಯಲ್ಲಿ 3, ಮೂರ್ನಾಡಿನ ಮಾರುತಿ ಪ್ರಾಥಮಿಕ ಶಾಲೆಯಲ್ಲಿ -1 ವಿದ್ಯಾರ್ಥಿ ಪ್ರವೇಶ ಪಡೆದುಕೊಂಡಿದ್ದಾರೆ.ಸೋಮವಾರಪೇಟೆ: ತಾಲ್ಲೂಕಿನಲ್ಲಿ 169 ಸೀಟುಗಳ ಪೈಕಿ ಕೇವಲ 27 (ಶೇ 16) ಸ್ಥಾನಗಳು ಭರ್ತಿಯಾಗಿವೆ. ಒಟ್ಟು 21 ಶಾಲೆಯಲ್ಲಿ ಕೇವಲ 5 ಶಾಲೆಗಳಲ್ಲಿ ಮಾತ್ರ ಈ ದಾಖಲಾತಿ ಆಗಿರುವುದು. ಬಾಕಿ ಉಳಿದ 16 ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ.ಸೋಮವಾಪೇಟೆಯ ಜ್ಞಾನ ವಿಕಾಸ ಶಾಲೆಯಲ್ಲಿ 12, ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ 4, ಕೂಡಿಗೆಯ ಜ್ಞಾನ ಜ್ಯೋತಿ ಶಾಲೆಯಲ್ಲಿ 2, ಕೊಡ್ಲಿಪೇಟೆಯ ಎಸ್‌ಕೆಎಸ್ ಶಾಲೆಯಲ್ಲಿ 4 ಹಾಗೂ ಎಸ್‌ಎಲ್‌ಎಸ್ ಶಾಲೆಯಲ್ಲಿ 5 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ.ವಿರಾಜಪೇಟೆ: ವಿರಾಜಪೇಟೆಯಲ್ಲಿ ಮಾತ್ರ ಕೊಂಚ ಪರಿಸ್ಥಿತಿ ಸುಧಾರಿಸಿದೆ. ಗುರಿ ನೀಡಲಾಗಿದ್ದ 214 ಸೀಟುಗಳ ಪೈಕಿ 166 ಸೀಟುಗಳು (ಶೇ 77) ಭರ್ತಿಯಾಗಿವೆ. ಇದರಲ್ಲಿ 30 ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದ್ದರೆ, 6 ಮಕ್ಕಳು ಪರಿಶಿಷ್ಟ ಪಂಗಡಕ್ಕೆ ಹಾಗೂ ಇನ್ನುಳಿದ ಮಕ್ಕಳು ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ.ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಪಠ್ಯಕ್ರಮ ಬೋಧಿಸುವ ಗೋಣಿಕೊಪ್ಪಲಿನ ಕಾಲ್ಸ್ ಹಾಗ ಅರಮೇರಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಇವುಗಳನ್ನು ಹೊರತುಪಡಿಸಿದರೆ ಒಟ್ಟು 25 ಶಾಲೆಗಳ ಪೈಕಿ ಬಹುತೇಕ ಎಲ್ಲ ಶಾಲೆಗಳಲ್ಲೂ ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ.ಉಚಿತ ಶಿಕ್ಷಣ:

ಈ ಕಾಯ್ದೆಯಡಿ ದಾಖಲಾಗುವ ಮಕ್ಕಳಿಗೆ ಶಿಕ್ಷಣವು ಸಂಪೂರ್ಣವಾಗಿ ಉಚಿತವಾಗಿ ದೊರೆಯಲಿದೆ. ಖಾಸಗಿ ಶಾಲೆಗಳು ಈ ಮಕ್ಕಳಿಗೆ ವೆಚ್ಚ ಮಾಡುವ ಹಣವನ್ನು (ಗರಿಷ್ಠ ರೂ 11,848 ಮೀರದಂತೆ) ಕೇಂದ್ರ ಸರ್ಕಾರವೇ ಭರಿಸಲಿದೆ.ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ದೊರೆಯುವ ಎಲ್ಲ ಸೌಲಭ್ಯಗಳೂ ಈ ಮಕ್ಕಳಿಗೆ ದೊರೆಯಲಿವೆ. ಉಚಿತ ಪಠ್ಯಪುಸ್ತಕ, ಉಚಿತ ಸಮವಸ್ತ್ರವೂ ಇದರಲ್ಲಿ ಸೇರಿದೆ.ಭವಿಷ್ಯದಲ್ಲಿ ಉತ್ತಮ ಪ್ರತಿಕ್ರಿಯೆ- ವಿಶ್ವಾಸ:

ಈ ಬಾರಿ ಕಾಯ್ದೆ ಜಾರಿಯು ತರಾತುರಿಯಲ್ಲಿ ಆಗಿರುವ ಕಾರಣ ಹಾಗೂ ಪೋಷಕರಲ್ಲಿ ಗೊಂದಲವಿದ್ದ ಕಾರಣ ನಾವು ನಿರೀಕ್ಷಿಸಿದಷ್ಟು ವಿದ್ಯಾರ್ಥಿಗಳು ಆರ್‌ಟಿಇ ಕಾಯ್ದೆಯಡಿ ಪ್ರವೇಶ ಪಡೆದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಪ್ರಭಾರ) ಮಚ್ಚಾಡೋ ಅವರು `ಪ್ರಜಾವಾಣಿ~ಗೆ ತಿಳಿಸಿದರು.ಇದು ಕಾಯ್ದೆ ಜಾರಿಯ ಮೊದಲ ವರ್ಷವಾಗಿರುವ ಕಾರಣ ಸಹಜವಾಗಿ ಪೋಷಕರಲ್ಲಿ ಆತಂಕವಿದ್ದಿರಬಹುದು. ಇದಲ್ಲದೇ ಇನ್ನಷ್ಟು ಪ್ರಚಾರ ನಡೆಸಲು ಸಮಯಾವಕಾಶದ ಕೊರತೆಯೂ ಇತ್ತು. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಪ್ರಚಾರ ಕೈಗೊಂಡು, ನಿಗದಿತ ಗುರಿಯನ್ನು ತಲುಪಲು ಪ್ರಯತ್ನಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry