ಭಾನುವಾರ, ನವೆಂಬರ್ 17, 2019
28 °C

ಶಿಕ್ಷಣ ಹಕ್ಕು ಕಾಯ್ದೆ ದುರ್ಬಳಕೆ: ಆರೋಪ

Published:
Updated:

ಹಾಸನ: `ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರೂಪಿಸಿರುವ ಶಿಕ್ಷಣ ಹಕ್ಕು ಕಾಯ್ದೆ ಜಿಲ್ಲೆಯಲ್ಲಿ ದುರ್ಬಳಕೆಯಾಗುತ್ತಿದೆ. ಅನರ್ಹರು, ಸುಳ್ಳು ದಾಖಲೆ ಒದಗಿಸಿದವರಿಗೆ ಸೀಟುಗಳನ್ನು ಹಂಚಲಾಗುತ್ತಿದೆ' ಎಂದು ಹೋರಾಟಗಾರ ಶ್ರೀನಿವಾಸ ಎಚ್.ಟಿ. ಆರೋಪಿಸಿದ್ದಾರೆ.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, `ಶಿಕ್ಷಣ ಇಲಾಖೆ ಅಧಿಕಾರಿಗಳು ನಗರದ ಪ್ರತಿಷ್ಠಿತ ಶಾಲೆಗಳ ಆಡಳಿತ ಮಂಡಳಿ ಜತೆಗೆ ಶಾಮೀಲಾಗಿ ಬಡವರ ಅವಕಾಶ, ಸೌಲಭ್ಯಗಳನ್ನು ಕಸಿದು ಉಳ್ಳವರಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದಿದ್ದಾರೆ.`ಒಟ್ಟಾರೆಯಾಗಿ ನಗರದಲ್ಲಿ ನೀಡಿರುವ ಸೀಟುಗಳಲ್ಲಿ ಶೇ 60ಕ್ಕಿಂತ ಹೆಚ್ಚುಸೀಟುಗಳು ಉಳ್ಳವರ ಪಾಲಾಗಿವೆ. ಒಬ್ಬನೇ ವ್ಯಕ್ತಿ ಬೇರೆ ಬೇರೆ ವಾರ್ಡ್‌ಗಳಲ್ಲಿ ವಾಸವಿರುವುದಾಗಿ ಪ್ರಮಾಣಪತ್ರಗಳನ್ನು ನೀಡಿ ತನ್ನ ಮಗಳಿಗೆ ಬೇರೆ ಬೇರೆ ಶಾಲೆಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಹೆಚ್ಚಿನ ಅರ್ಜಿಗಳಲ್ಲಿ ವಾಸಸ್ಥಳ ದೃಢೀಕರಣ ಪತ್ರ, ಅರ್ಜಿದಾರರು ನೀಡಿರುವ ವಿಳಾಸ ಹಾಗೂ ವಾರ್ಡ್ ಸಂಖ್ಯೆಗಳು ತಾಳೆಯಾಗುತ್ತಿಲ್ಲ.ಶಾಸಕರ ಮನೆಯ ಹಿಂಭಾಗ ಎಂದು ವಿಳಾಸದಲ್ಲಿ ನಮೂದಿಸಿ 10ನೇ ವಾರ್ಡ್ ಎಂದಿದ್ದಾರೆ. ಇಂಥ ವಿಳಾಸಕ್ಕೂ ನಗರಸಭೆಯವರು ದೃಢೀಕರಣ ಪತ್ರ ನೀಡಿರುವುದು ಅಚ್ಚರಿಯ ವಿಚಾರವಾಗಿದೆ. ಒಂದು ಪ್ರತಿಷ್ಠಿತ ಶಾಲೆಯಲ್ಲಿ ಆ ಶಾಲೆಯ ಪ್ರಾಂಶುಪಾಲರೇ ತಮ್ಮ ಮಗಳಿಗೆ ಆರ್‌ಟಿಇ ಅಡಿ ಸೀಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.ಈ ಎಲ್ಲ ವಿಚಾರಗಳನ್ನು ಡಿಡಿಪಿಐ, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾರೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ವಿವರಗಳೂ ಲಭ್ಯವಾಗಿಲ್ಲ. ಪ್ರತಿಷ್ಠಿತ ಶಾಲೆಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಎಸಗುತ್ತಿದ್ದು, ಎಲ್ಲರ ವಿರುದ್ಧವೂ ದೂರು ದಾಖಲಿಸುತ್ತೇವೆ ಎಂದು ಶ್ರೀನಿವಾಸ್ ನುಡಿದಿದ್ದಾರೆ.ಟಿ.ಜಿ. ಕುಮಾರ್ ಹಾಗೂ ಬಸವರಾಜ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)