ಬುಧವಾರ, ಏಪ್ರಿಲ್ 14, 2021
31 °C

ಶಿಕ್ಷಣ ಹಾಗೂ ಶಿಕ್ಷೆ !

ಸವಿತಾ ಎಸ್. Updated:

ಅಕ್ಷರ ಗಾತ್ರ : | |

ಶಿಕ್ಷಣ ಹಾಗೂ ಶಿಕ್ಷೆ !

ಅದು ಸರ್ಕಾರಿ ಪ್ರೌಢಶಾಲೆ. ಮಧ್ಯಾಹ್ನ ಊಟದ ವೇಳೆ ಕಾಂಪೌಂಡ್ ಹಾರಿದ್ದ ನಾಲ್ಕು ಮಂದಿ ಹುಡುಗರ ತಂಡ ಪಕ್ಕದ ಅಕ್ವೇರಿಯಂ ಅಂಗಡಿಯನ್ನು ಪ್ರವೇಶಿಸಿತ್ತು.ಅದೇನೋ ಮೋಡಿ ಮಾಡಿ ಡ್ರಾಯರ್‌ನಲ್ಲಿದ್ದ ಸಾವಿರದ ಐನೂರು ರೂಪಾಯಿಯೊಂದಿಗೆ ಯಾವುದೋ ಬಸ್ ಏರಿದ್ದರು. ಸಂಜೆಯಾದರೂ ಮಕ್ಕಳು ಹಿಂದಿರುಗದಿರುವುದನ್ನು ನೋಡಿ ಶಾಲೆಯ ಅಧ್ಯಾಪಕರಿಗೆ ಗಾಬರಿ. ಕೊನೆಗೆ ಪೋಷಕರೇ ಶಾಲೆಗೆ ಬಂದು ಶಿಕ್ಷಕರಿಗೆ ಸಮಾಧಾನ ಹೇಳಬೇಕಾಯಿತು.ನವ್ಯಾ ಶಾಲೆಯಲ್ಲಿ ತುಂಟಿ. ಹೋಮ್‌ವರ್ಕ್ ಮಾಡಿಕೊಂಡು ಬಂದಿಲ್ಲ ಎಂಬ ಕಾರಣಕ್ಕೆ ಶಾಲೆಯಲ್ಲಿ ಶಿಕ್ಷಕಿ ಬೈದರೆಂದು ಪತ್ರ ಬರೆದಿಟ್ಟು ರಾತ್ರೋರಾತ್ರಿ ಮನೆಬಿಟ್ಟಿದ್ದಾಳೆ.

ಗ್ರಾಮೀಣ ಪ್ರದೇಶದಲ್ಲಿ ಈಗಲೂ `ಛಡಿ ಛಂ ಛಂ, ವಿದ್ಯಾ ಘಂ ಘಂ~ ಎಂಬ ಮನಸ್ಥಿತಿಯೇ ಮುಂದುವರಿದಿದೆ. ಪೋಷಕರು ಬಂದು, ಶಿಕ್ಷಕರಿಗೆ ಒಂದೆರಡು ಏಟು ಕೊಟ್ಟು ಬುದ್ಧಿ ಹೇಳಿ ಎಂದು ಕೇಳಿಕೊಳ್ಳುವವರೂ ಇದ್ದಾರೆ. ನಗರದಲ್ಲಿ ಮಾತ್ರ ಯಾಕಿದು ತಿರುವು ಮುರುವು?ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು. ಮಕ್ಕಳು ದಾದಿ ಕೈಯಲ್ಲಿ ಅಥವಾ ಪ್ಲೇ ಹೋಮ್‌ಗಳಲ್ಲಿ ಬೆಳೆಯುತ್ತವೆ. ಪಾಲಕರನ್ನು ಹೊರತುಪಡಿಸಿದರೆ ಹೆಚ್ಚು ಹೊತ್ತು ಇರುವುದೇ ಶಿಕ್ಷಕರೊಂದಿಗೆ. ಗದರುವಿಕೆಯನ್ನೂ ತಡೆಯದಷ್ಟು ಸೂಕ್ಷ್ಮರಾದರೆ ಹೇಗೆ? ಉಳಿಪೆಟ್ಟಿಗೂ ಕೊಡಲಿ ಏಟಿಗೂ ವ್ಯತ್ಯಾಸವಿದೆ. ಶಿಕ್ಷಕರು ಕೊಡುತ್ತಿರುವುದು ಏನನ್ನು ಎನ್ನುವುದರ ಮೇಲೆ ಶಿಕ್ಷೆಯೋ ಶಿಸ್ತೋ ಎನ್ನುವುದು ನಿರ್ಧಾರವಾಗುತ್ತದೆ.ನಗರದ ಮಕ್ಕಳು ಅತಿ ಪ್ರೀತಿ, ಅಕ್ಕರೆ ಹಾಗೂ ಮುಚ್ಚಟೆಯಿಂದಲೇ ಬೆಳೆಯುತ್ತಾರೆ. ಅದರಲ್ಲೂ ಒಂದೇ ಮಗು ಅಥವಾ ಒಂದೆರಡು ಮಕ್ಕಳ ಕುಟುಂಬಗಳೇ ಹೆಚ್ಚಾಗಿರುವಾಗ ಸ್ಪರ್ಧಾತ್ಮಕ ಮನೋಭಾವ ಇದ್ದೇ ಇರುತ್ತದೆ.ಹೀಗಿರುವ ಹದಿಹರೆಯದ ಮನಸುಗಳಿಗೆ ಸಣ್ಣಗದರಿಕೆಯೂ ಅವಹೇಳನವೆನಿಸುತ್ತದೆ. ಅಪಮಾನಕರ ಎನಿಸುತ್ತದೆ. ಏಟು ಸಹ ಸಹಪಾಠಿಗಳ ನಡುವೆ ನಿಲ್ಲಿಸುವುದರಿಂದ ಒಳಗೊಳಗೇ ಕುಗ್ಗಿ ಹೋಗುತ್ತಾರೆ. ಪರಿಣಾಮ ಆತ್ಮಹತ್ಯೆಯಂಥ, ಮನೆ ಬಿಟ್ಟು ಹೋಗುವಂಥ ತೀರ್ಮಾನಗಳು.ಶಾಲೆಯಲ್ಲಿ ಶಿಕ್ಷೆ ನಿಷೇಧ ಕಡ್ಡಾಯವಾದ ಬಳಿಕ ಇಂತಹುದೇ ಹತ್ತು ಹಲವು ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿವೆ. ಕೆಲವು ಪೊಲೀಸ್ ಠಾಣೆ ಮೆಟ್ಟಿಲೇರಿದರೆ, ಉಳಿದವು ರಾಜಿ ಪಂಚಾಯಿತಿಯೊಂದಿಗೆ ಮುಕ್ತಾಯವಾಗುತ್ತವೆ. `ಬದಲಾಗುತ್ತಿರುವ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷೆಯ ಪಾತ್ರ~ ಎಂಬ ವಿಷಯವನ್ನಿಟ್ಟುಕೊಂಡು ಸಂಶೋಧನೆ ನಡೆಸಿದ `ಬ್ರೈನ್ ಸೆಂಟರ್~ ಕೆಲವು ಆಘಾತಕಾರಿ ಸಂಗತಿಗಳನ್ನು ಹೊರಹಾಕಿದೆ.ಶಾಲೆಯಲ್ಲಿ ಶಿಕ್ಷೆ ನೀಡಲು ಅವಕಾಶ ಇಲ್ಲವಾದ್ದರಿಂದ ಮಕ್ಕಳಲ್ಲಿ ಶಿಸ್ತು ನಿಯಂತ್ರಣದ ಸಮಸ್ಯೆ ಶೇ 50ರಷ್ಟು ಹೆಚ್ಚಿದೆ ಹಾಗೂ ಶಿಕ್ಷಕರಿಗೆ ತೋರುವ ಗೌರವ ಶೇ 62ರಷ್ಟು ಕಡಿಮೆಯಾಗಿದೆ. ಮಕ್ಕಳ ಹಕ್ಕು ಸಂರಕ್ಷಣಾ ಕಾನೂನು ಮತ್ತು ಮಕ್ಕಳ ಅಭಿವೃದ್ದಿ ಪರಸ್ಪರ ಪೂರಕವಾಗಿಲ್ಲ ಎಂದು ಶೇ 81ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟ್ದ್ದಿದಾರಂತೆ.ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 2000 ಅಧ್ಯಾಪಕರನ್ನು ಈ ಸಂಶೋಧನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಕಳೆದ ಐದು ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯ ಮೌಲ್ಯಗಳಲ್ಲಿ ಬದಲಾವಣೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿತ್ತು.ವಿವೇಚನಾ ರಹಿತ ಶಿಕ್ಷೆ ಪ್ರಕರಣ ಅಲ್ಲಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ `ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಸಂಸ್ಥೆ~ ಶಾಲೆಯಲ್ಲಿ ಮಕ್ಕಳಿಗೆ ನೀಡುವ ದೈಹಿಕ ಶಿಕ್ಷೆಗಳ ಕುರಿತು ಪರೀಕ್ಷಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತು. ಇದರ ಅನ್ವಯ 2007ರ ಸೆಪ್ಟೆಂಬರ್ 1ರಂದು ಐಪಿಸಿ ಸೆಕ್ಷನ್ 323 ಮತ್ತು 504ರ ಅನ್ವಯ `ಮಕ್ಕಳನ್ನು ಹೆದರಿಸುವುದು, ಸಣ್ಣ ಪುಟ್ಟ ಗಾಯ ಮಾಡುವ ಶಿಕ್ಷಕರ ವಿರುದ್ಧ ದೂರು ನೀಡಬಹುದು.ಬೆತ್ತ ಬಳಸುವವರ ವಿರುದ್ಧ 506ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು ಹಾಗೂ 304ರ ಅಡಿಯಲ್ಲಿ ದೋಷಾಸ್ಪದ ರೀತಿಯಲ್ಲಿ ಹತ್ಯೆಯ ಪ್ರಯತ್ನ ಕುರಿತು ಕ್ರಮ ಕೈಗೊಳ್ಳಬಹುದು~ ಎಂಬ ಕಾನೂನು ರೂಪುಗೊಂಡಿತು. ಈ ನಿರ್ಬಂಧನೆ ಉಲ್ಲಂಘಿಸಿದಲ್ಲಿ ಒಂದು ವರ್ಷ ಜೈಲು ಇಲ್ಲವೇ 50,000 ರೂ.ವರೆಗೆ ದಂಡ ಭರಿಸಬೇಕು ಎಂದಿತು.`ಹೀಗೆ ಸಾಂಪ್ರದಾಯಿಕ ಶಿಕ್ಷೆಗಳ ಕ್ರಮಗಳ ವಿರುದ್ಧ ಕಾನೂನು ರಚನೆಯಾಗಿ ಶಾಲಾ ವ್ಯವಸ್ಥೆಯಲ್ಲಿ ಶಿಕ್ಷೆ ನಿಷೇಧವಾದ ಬಳಿಕ `ಶಿಕ್ಷೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ನೈಜ ಸಮಸ್ಯೆಗಳೇನು~ ಎಂಬ ಕುರಿತು `ಬ್ರೈನ್ ಸೆಂಟರ್~ ಸಂಶೋಧನೆ ನಡೆಸಿತು. `ಪಾಠ ನಡೆಸುತ್ತಿರುವಾಗ ಥಟ್ಟನೆ ಎದ್ದು ಹೊರನಡೆಯುವ ಕೊನೆ ಬೆಂಚಿನ ಹುಡುಗನ ಕೈಹಿಡಿದು ನಿಲ್ಲಿಸುವ ಸ್ವಾತಂತ್ರ್ಯವೂ ನಮಗಿಲ್ಲ ಎಂದು ಬೇಸರಿಸುತ್ತಾರೆ ಹೆಬ್ಬಾಳದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಮಂಜುನಾಥ್. ಅವರು ಕರ್ನಾಟಕ ರಾಜ್ಯ ಸಹಶಿಕ್ಷಕರ ಸಂಘದ ಅಧ್ಯಕ್ಷರೂ ಹೌದು.`ಶಾಲೆಯಲ್ಲಿ ಶೇ 80ರಷ್ಟು ಮಕ್ಕಳಿಗೆ ಶಿಕ್ಷೆಯ ಅಗತ್ಯವೇ ಇರುವುದಿಲ್ಲ. ಆದರೆ ಉಳಿದ 20 ಮಕ್ಕಳಿಂದ ತರಗತಿಯ ವಾತಾವರಣವೇ ಹಾಳಾಗಬಾರದ್ಲ್ಲಲ. ಕನಿಷ್ಠ ಒತ್ತಾಯವೂ ಇಲ್ಲದೆ ಮಕ್ಕಳು ಕಲಿಯುವುದಿಲ್ಲ. ಮಕ್ಕಳ ಆತ್ಮಹತ್ಯೆಗೆ ಇಲ್ಲವೇ ಮನೆ ಬಿಟ್ಟು ಹೋಗಲು ಶಾಲೆಯಲ್ಲಿ ಕೊಡುವ ಶಿಕ್ಷೆಯೇ ಕಾರಣವಲ್ಲ. ಮಾಧ್ಯಮಗಳ ಪ್ರಭಾವ, ಹೆತ್ತವರ ನಡವಳಿಕೆಯೂ ಕಾರಣವಿರಬಹುದಲ್ಲಾ~ ಎಂಬ ಪ್ರಶ್ನೆ ಅವರದ್ದು.`ಶಿಕ್ಷೆಯ ಭಯವಿಲ್ಲದೆ ಇಂದು ನಾಲ್ಕರಿಂದ ಆರನೇ ತರಗತಿಯ ಮಕ್ಕಳಲ್ಲಿ ನಕಲಿ ಸಹಿ ಹಾಕುವುದು, ಡೈರಿಯಲ್ಲಿ ತಿದ್ದುವುದು, ಕೆಟ್ಟ ಪದಗಳ ಬಳಕೆ ಗಣನೀಯವಾಗಿ ಹೆಚ್ಚಿದೆ. ಹುಡುಗರಂತೂ ಆರನೇ ತರಗತಿಗೇ ಸಿಗರೇಟು ಹಿಡಿದು ದಮ್ಮೆಳೆಯಲು ಕಲಿಯುತ್ತಿದ್ದಾರೆ, ಗುಂಪುಗಾರಿಕೆಯೂ ಹೆಚ್ಚಿದೆ. ಪ್ರೀತಿ ವಿಶ್ವಾಸದಿಂದ ಮಕ್ಕಳನ್ನು ಸರಿದಾರಿಗೆ ತನ್ನಿ ಎನ್ನುತ್ತಾರೆ ಇಲಾಖೆಯವರು, ಅದನ್ನು ಕೇಳದೇ ಹೋದರೆ ಏನು ಪರಿಹಾರ?~ ಎಂಬ ಪ್ರಶ್ನೆ ಬ್ರೈನ್ ಸೆಂಟರ್ ನಿರ್ದೇಶಕ ಶಶಿಕುಮಾರ್ ಅವರದ್ದು.ಶಿಕ್ಷೆಯ ನಿರ್ಬಂಧನೆಗಳನ್ನು ಬದಲಾಯಿಸಿ, ಶಿಕ್ಷಕರು ಎದುರಿಸುವ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಕಠಿಣ ಶಿಕ್ಷೆ ನೀಡುವ ಶಿಕ್ಷಕರ ಮನಃಸ್ಥಿತಿಯ ಬಗ್ಗೆಯೂ, ಒತ್ತಡ ನಿರ್ವಹಣೆಯ ಬಗ್ಗೆಯೂ ಅಧ್ಯಯನ ನಡೆಯಬೇಕಿದೆ. ವಿದ್ಯಾರ್ಥಿಗಳ ಕಡೆಯಿಂದಷ್ಟೇ ಅಲ್ಲ, ಶಿಕ್ಷಕರ ಕಡೆಯಿಂದಲೂ ಅಧ್ಯಯನ ನಡೆದರೆ, ಸಮಸ್ಯೆಗೆ ಪರಿಹಾರ ದೊರೆಯಬಹುದಾಗಿದೆ ಎಂಬುದು ಶಿಕ್ಷಕ ವಲಯದ ಅಭಿಪ್ರಾಯ.ಶಿಕ್ಷೆ ಬೇಡ

ತಪ್ಪು ಮಾಡಿದಾಗ ವಿದ್ಯಾರ್ಥಿಗೆ ಶಿಕ್ಷೆ ಕೊಡುವುದು ಅನಿವಾರ್ಯವಲ್ಲ. ಬೆತ್ತದೇಟಿನ ಬದಲು ಮಾತಿನ ಚಾಟಿ ಬೀಸಬಹುದು. ಇದಕ್ಕೆ ಶಿಕ್ಷಕರು ಮನಸ್ಸು ಮಾಡಬೇಕು. ವಿದ್ಯಾರ್ಥಿ ತಪ್ಪು ಮಾಡಿದಾಗ, ತಿದ್ದುವುದು ಅವರ ಜವಾಬ್ದಾರಿಯಲ್ಲವೇ. ಕೇವಲ ಹೊಡೆದು ಬುದ್ಧಿ ಹೇಳುವುದದಾರೆ ಅವರೇ ಬೇಕೆ? ಪೋಷಕರೋ ಅಥವಾ ಇನ್ನಾರಾದರೂ ಆ ಕೆಲಸ ಮಾಡುತ್ತಾರಲ್ಲವೇ? 

- ವಿದ್ಯಾರ್ಥಿ ರಾಜೇಶ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.