ಮಂಗಳವಾರ, ಮೇ 18, 2021
24 °C

ಶಿಕ್ಷೆಯನ್ನು ಕಠಿಣಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರ ಇರುವುದೇ ಸಕಲರಿಗೂ ಸಕಾಲದಲ್ಲಿ ಸೇವೆ ನೀಡಲಿಕ್ಕಾಗಿ. ಸಂವಿಧಾನದ ಬಹುಮುಖ್ಯ ಅಂಗವಾದ ಕಾರ್ಯಾಂಗದ ಉದ್ದೇಶವೇ ಇದು. ಇದಕ್ಕಾಗಿಯೇ ಜನ ನೀಡುವ ತೆರಿಗೆಯ ಬಹುಪಾಲು ಸರ್ಕಾರಿ ನೌಕರರ ಸಂಬಳಕ್ಕಾಗಿ ವ್ಯಯವಾಗುತ್ತಿರುವುದು.ತಮಗೆ ಬೇಕಾದ ಸೇವೆಯನ್ನು ಸರ್ಕಾರದಿಂದ ಪಡೆದುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಹೀಗಿದ್ದಾಗ ಇದಕ್ಕಾಗಿ ಇನ್ನೊಂದು ಕಾಯ್ದೆಯ ಅಗತ್ಯ ಇದೆಯೇ ಎಂಬ ಪ್ರಶ್ನೆ ಸಹಜವಾದುದು. ಆದರೆ ನಮ್ಮ ಸರ್ಕಾರಿ ಇಲಾಖೆಗಳ ಕಾರ್ಯವೈಖರಿಯನ್ನು ನೋಡಿದವರ‌್ಯಾರೂ ಹೊಸ ಕಾಯ್ದೆಯ ಅಗತ್ಯ ಇಲ್ಲ ಎಂದು ಹೇಳಲಾರರು. ನಮ್ಮ ಬಹುತೇಕ ಸರ್ಕಾರಿ ಇಲಾಖೆಗಳು ಭ್ರಷ್ಟಾಚಾರದ ಕೂಪಗಳಾಗಿ ಹೋಗಿವೆ.ಕಾರ್ಯಾಂಗದ ಮೇಲೆ ನಿಗಾ ಇಡಬೇಕಾಗಿರುವ ಶಾಸಕಾಂಗ ಕೂಡಾ ಭ್ರಷ್ಟ ವ್ಯವಸ್ಥೆಯಲ್ಲಿ ಷಾಮೀಲಾಗಿರುವುದರಿಂದ ನಾಗರಿಕರು ಅಸಹಾಯಕರಾಗಿದ್ದಾರೆ. ಅವರ ಪಾಲಿಗೆ ಲಂಚ ನೀಡುವುದು ಅನಿವಾರ್ಯ ಕರ್ಮವಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿರುವ `ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯ್ದೆ~(ಸಕಾಲ) ಸ್ವಾಗತಾರ್ಹವೇ.

 

ಸೇವೆಯನ್ನು ಪಡೆಯಲು ಕಾಲಮಿತಿಯನ್ನು ನಿಗದಿಪಡಿಸಿರುವುದು, ಸೇವೆಯನ್ನು ನೀಡಬೇಕಾಗಿರುವ ಅಧಿಕಾರಿಯನ್ನು ಗುರುತಿಸಿ ಅವರ ಮೇಲೆ ನೇರವಾಗಿ ಹೊಣೆ ಹೊರಿಸಿರುವುದು ಮತ್ತು ನಾಗರಿಕರ ಅನುಕೂಲಕ್ಕಾಗಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಅರ್ಜಿಯ ಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಅವಕಾಶ ಕಲ್ಪಿಸಿರುವುದು ಒಳ್ಳೆಯ ಕ್ರಮ.ವಿಳಂಬ ನೀತಿಯೇ ಭ್ರಷ್ಟರ ಪ್ರಧಾನ `ಕಾರ್ಯತಂತ್ರ~. ಬೇಕಾದ ಸೇವೆ ಸಕಾಲದಲ್ಲಿ ದೊರೆಯದೆ ಇದ್ದಾಗ ಒತ್ತಡಕ್ಕೀಡಾಗುವವರು ಅಸಹಾಯಕತೆಯಿಂದ ಲಂಚ ಕೊಟ್ಟು ಕೆಲಸಮಾಡಿಸಿಕೊಳ್ಳಲು ಹೋಗುತ್ತಾರೆ. ಈ ವಿಳಂಬದ ರೋಗಕ್ಕೆ `ಸಕಾಲ~ದಲ್ಲಿ ಮದ್ದು ಅರೆಯುವ ಪ್ರಯತ್ನ ಮಾಡಲಾಗಿದೆ.

 

ನಿಗದಿತ ಕಾಲಾವಧಿಯಲ್ಲಿ ಸೇವೆಯನ್ನು ನೀಡಲು ವಿಫಲರಾದವರನ್ನು ಶಿಕ್ಷ್ಷಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ ಕರ್ತವ್ಯಭಂಗಕ್ಕಾಗಿ ನಿಗದಿಪಡಿಸಲಾಗಿರುವ ಶಿಕ್ಷೆ ಏನೇನೂ ಸಾಲದು. ಹೊಸ ಕಾಯ್ದೆಯ ಪ್ರಕಾರ ನಿಗದಿತ ಸೇವೆಯನ್ನು ಸಕಾಲದಲ್ಲಿ ನೀಡಲು ವಿಫಲವಾಗುವ ಅಧಿಕಾರಿಗೆ ಪ್ರತಿದಿನ ಇಪ್ಪತ್ತು ರೂಪಾಯಿಗಳಂತೆ ಗರಿಷ್ಠ 500 ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶ ಇದೆ.

 

ಆದರೆ ಸರ್ಕಾರಿ ಇಲಾಖೆಗಳ ಭ್ರಷ್ಟಾಚಾರದ ಪ್ರಮಾಣಕ್ಕೆ ಹೋಲಿಸಿದರೆ ಈ ದಂಡ ಜುಜುಬಿ. ಭ್ರಷ್ಟಾಚಾರದ ಕಲೆಯಲ್ಲಿ ಪಳಗಿದವರು ಈ 500 ರೂಪಾಯಿ ದಂಡವನ್ನೂ ಸೇರಿಸಿ ನಾಗರಿಕರಿಂದ ಲಂಚ ಕಿತ್ತುಕೊಂಡರೂ ಅಚ್ಚರಿ ಇಲ್ಲ. ಹತ್ತಾರು ವರ್ಷಗಳ ಕಾಲ ಈ ವ್ಯವಹಾರಗಳಲ್ಲಿ ಪಳಗಿರುವವರನ್ನು ಇಂತಹ ಲಘು ಶಿಕ್ಷೆಯ ಮೂಲಕ ಪರಿವರ್ತಿಸುವುದು ಸಾಧ್ಯವಾಗಲಾರದು.ಇದಕ್ಕಾಗಿ ಕಾಯ್ದೆಯನ್ನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿಗಳಿಗೆ ಇನ್ನಷ್ಟು ಉಗ್ರವಾದ ಶಿಕ್ಷೆಯನ್ನು ವಿಧಿಸುವ ಅಗತ್ಯ ಇದೆ. ಇದಕ್ಕಾಗಿ ಕರ್ತವ್ಯಲೋಪವನ್ನು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳ ಸೇವಾ ದಾಖಲೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು.ಬಡ್ತಿಯ ಸಂದರ್ಭದಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಮತ್ತೆಮತ್ತೆ ಕರ್ತವ್ಯಲೋಪ ಎಸಗುವವರನ್ನು ಸೇವೆಯಿಂದ ವಜಾಗೊಳಿಸಲು ಸಾಧ್ಯವಾಗುವಂತೆ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳದೆ, ಕೊಬ್ಬಿ ಹೋಗಿರುವ ಭ್ರಷ್ಟ ಸರ್ಕಾರಿ ವ್ಯವಸ್ಥೆಯನ್ನು ಕೇವಲ 500 ರೂಪಾಯಿಗಳ ಜುಜುಬಿ ದಂಡದ ಅಂಕುಶದಿಂದ ಪಳಗಿಸುವುದು ಕಷ್ಟ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.