ಶಿಕ್ಷೆ ಕೊಟ್ಟು ಶಿಕ್ಷಣ ನೀಡುತ್ತಿದ್ದ ಕಾಲವದು..

7
`ಶಿಕ್ಷಕರ ದಿನಾಚರಣೆ'ಯಲ್ಲಿ ಸಚಿವರು ಬಿಚ್ಚಿಟ್ಟ ಬಾಲ್ಯದ ನೆನಪು

ಶಿಕ್ಷೆ ಕೊಟ್ಟು ಶಿಕ್ಷಣ ನೀಡುತ್ತಿದ್ದ ಕಾಲವದು..

Published:
Updated:

ಚಿತ್ರದುರ್ಗ: 'ಹಿಂದಿನ ಕಾಲದಲ್ಲಿ ಮಕ್ಕಳಿಗೆ ಶಿಕ್ಷೆ ಕೊಟ್ಟು ಶಿಕ್ಷಣ ನೀಡುತ್ತಿದ್ದರು. ಅಂಥ ಶಿಕ್ಷಣವೇ ಇವತ್ತು ನನ್ನಂಥವರಿಗೆ ಮಂತ್ರಿಯ ಪದವಿಯನ್ನು ದೊರಕಿಸಿಕೊಟ್ಟಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅಭಿಪ್ರಾಯಟ್ಟರು.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ಗುರುವಾರ ನಡೆದ `ಶಿಕ್ಷಕರ ದಿನಾಚರಣೆ' ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ವ್ಯವಸ್ಥೆಯಲ್ಲಿ ಮಕ್ಕಳನ್ನು ಶಿಕ್ಷಿಸುವಂತಿಲ್ಲ. ಹಿಂದೆಲ್ಲ ಶಿಕ್ಷಕರಿಗೆ ಶಾಲೆಯ ಮೇಲೆ ಅಪಾರ ಪ್ರೀತಿ, ಪ್ರೇಮ, ಗೌರವ, ಪ್ರಾಮಾಣಿಕತೆ, ಬದ್ದತೆ ಇತ್ತು. ಆಗ ಶಿಕ್ಷಕರು ಎದುರು ಬಂದರೆ, ಚಪ್ಪಲಿ ಬಿಟ್ಟು ಅವರಿಗೆ ನಮಸ್ಕರಿಸುತ್ತಿದ್ದರು. ಅಂತಹ ಪವಿತ್ರ ವೃತ್ತಿಯನ್ನು ಎಲ್ಲರೂ ಪ್ರೀತಿಸಬೇಕು. ಡಾ. ರಾಧಾಕೃಷ್ಣನ್‌ರ ಆದರ್ಶವನ್ನು ಎಲ್ಲ ಶಿಕ್ಷಕರು ಪಾಲಿಸಬೇಕು ಎಂದು ತಿಳಿಸಿದರು.ರಾಷ್ಟ್ರಪತಿ, ಪ್ರಧಾನಿ, ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್‌ಗಳನ್ನು ತಯಾರು ಮಾಡುವ ಶಿಲ್ಪಿಗಳು ಶಿಕ್ಷಕರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ದೇಶದ ಒಳ್ಳೆಯ ನಾಗರಿಕರನ್ನಾಗಿಸುವ ಹೊಣೆಗಾರಿಕೆ ಶಿಕ್ಷಕರದು. ಶಿಕ್ಷಕರಾದವರು ನಗರ, ಪಟ್ಟಣಗಳನ್ನು ಬಿಟ್ಟು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಆದರ್ಶ ಶಿಕ್ಷಕರಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.ಶಿಕ್ಷಕರು ನಿವೃತ್ತಿಯಾದ ನಂತರ, ಹೊಸ ಶಿಕ್ಷಕರು ನೇಮಕವಾಗುವವರೆಗೂ ಸರ್ಕಾರ ನೀಡುವ ಪಿಂಚಣಿಯನ್ನೇ ವೇತನ ಎಂದುಕೊಂಡು ಶಾಲೆಗಳಲ್ಲಿ ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ ಎಂದು ಸಲಹೆ ನೀಡಿದರು.ಅಧ್ಯಕ್ಷತೆವಹಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಶಿಕ್ಷಕರು ಇಲ್ಲದೇ ಯಾವ ದೇಶವೂ ಅಭಿವೃದ್ದಿ ಹೊಂದುವುದಿಲ್ಲ. ಯಾವ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡಲು ಸಾಧ್ಯವೋ ಅಂತಹ ದೇಶ ಸದೃಢವಾಗಿರುತ್ತದೆ ಎಂದರು.ಇಂದಿನ ರಾಜಕೀಯ ವ್ಯವಸ್ಥೆಯ ಘನತೆಯೇ ಹೊರಟು ಹೋಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲರೂ ದೇಶಕ್ಕಾಗಿ ಹೋರಾಡಿದ ರಾಜಕೀಯ ಕೈದಿಗಳೇ ಜೈಲುಗಳಲ್ಲಿ ಇರುತ್ತಿದ್ದರು. ಆದರೆ, ಈಗಿನ ಬಹುತೇಕ ಎಲ್ಲ ಕೈದಿಗಳು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರೇ ಇರುತ್ತಾರೆ ಎಂದು ತಿಳಿಸಿದರು.ವ್ಯವಸ್ಥೆಗೆ ಹೊಂದಿಕೊಳ್ಳಲು ಮಾತೃ ಭಾಷೆ ಜತೆ ಇನ್ನಿತರೆ ಭಾಷೆಗಳನ್ನು ಕಲಿಯಬೇಕು. ಎಲ್ಲ ರಾಜಕಾರಣಿ ಹಾಗೂ ಅಧಿಕಾರಿಗಳ ಮಕ್ಕಳು, ಮೊಮ್ಮಕ್ಕಳು ಇಂಗ್ಲಿಷ್ ಶಾಲೆಗಳಲ್ಲಿಯೇ ಓದುತ್ತಿರುವುದು. ಮಾತನಾಡುವುದು ಒಂದು ಅನುಸರಿಸುವುದು ಒಂದು ಆಗಬಾರದು ಎಂದರು.ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿ.ಪಂ ಸಿಇಒ ಕೆ.ಎಂ.ನಾರಾಯಣ ಸ್ವಾಮಿ ಮಾತನಾಡಿದರು. ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಕವಿ ಇಟಗಿ ಈರಣ್ಣ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ  ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ನಗರದ ಆನೆ ಬಾಗಿಲ ಸಮೀಪದ  ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಗಾಂಧಿ ವೃತ್ತ, ಬಿ.ಡಿ ರಸ್ತೆ, ಪ್ರವಾಸಿ ಮಂದಿರ ರಸ್ತೆ ಮಾರ್ಗವಾಗಿ ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಆವರಣ ತಲುಪಿತು. ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.ಹರಿದ ನಿಕ್ಕರ್, ಹಿಂದಿನ ಸಾಲು, ಮೇಷ್ಟ್ರ ಹೊಡೆತ...

`ಹರಿದ ನಿಕ್ಕರ್, ಒಂದೇ ಅಂಗಿ, ಕೊಠಡಿಯಲ್ಲಿ ಕೊನೆ ಸಾಲಿನಲ್ಲಿ ನೆಲದ ಮೇಲೆ ಕುಳಿತು ಪಾಠ ಕೇಳಬೇಕಿತ್ತು. ಮಗ್ಗಿ ತಪ್ಪು ಹೇಳಿದರೆ ರೂಲ್ ದೊಣ್ಣೆಯಲ್ಲಿ ಹೊಡೆತ. ಹೇಳಿದ ಕೆಲಸ ಮಾಡಿಕೊಂಡು ಬರದಿದ್ದರೆ ಕಿವಿ ಹಿಡಿಸಿ, ಮೇಲೊಬ್ಬನನ್ನು ನಿಲ್ಲಿಸುವ ಶಿಕ್ಷೆ.. ಇದು ಅಂದಿನ ಶಿಕ್ಷಣ ವ್ಯವಸ್ಥೆ...'ಸಚಿವ ಆಂಜನೇಯ ಅವರು ಬಾಲ್ಯದ ಶಿಕ್ಷಣವನ್ನು ನೆನಪಿಸಿಕೊಂಡ ರೀತಿ ಇದು. ಅವರ ಮಾತುಗಳಲ್ಲಿ ಶಿಕ್ಷಣ ವ್ಯವಸ್ಥೆಯ ಜೊತೆಗೆ 'ಅಸ್ಪೃಶ್ಯತೆ'ಯ ಕರಾಳ ನೆನಪುಗಳು ಬಿಚ್ಚಿಕೊಂಡವು.'ಶಿಕ್ಷೆಯೊಂದಿಗೆ ಶಿಕ್ಷಣ' ಎನ್ನುತ್ತಾ ಮಾತು ಆರಂಭಿಸಿದ ಸಚಿವರು, 'ಆಗ ಹರಿದಿರುವ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆವು. ಮುಂದಿನ ಸಾಲುಗಳಲ್ಲಿ ಬೆಂಚ್ ಮೇಲೆ ಮೇಲ್ವರ್ಗದವರು ಕುಳಿತು ಕೊಳ್ಳುತ್ತಿದ್ದರು. ನಾವು ಹಿಂದಿನ ಸಾಲಿನಲ್ಲಿ ನೆಲದ ಮೇಲೆ ಕುಳಿತುಕೊಳ್ಳಬೇಕಿತ್ತು. ನೆಲ ತಣ್ಣಗಿರುತ್ತಿತ್ತು. ಆಗಲೇ ಗೊತ್ತಾಗ್ತಿದ್ದದ್ದು ಚೆಡ್ಡಿ ಎಲ್ಲಿ ಹರಿದಿದೆ ಅಂತ' ಎಂದು ಮಾರ್ಮಿಕವಾಗಿ ನುಡಿದರು.

****'ನಮ್ಮ ಶಾಲೆಯಲ್ಲಿ ಮೊದಲು ಮೇಷ್ಟ್ರು ಶಾಲೆಯ ಕಸ ಗುಡಿಸಿ ಆ ನಂತರ ನಮಗೆ ಗುಡಿಸಲು ಹೇಳ್ತಿದ್ದರು. ಮೇಷ್ಟ್ರು ಮನವೊಲಿಸೋಕೆ, 'ಬಿಡಿ ಸರ್, ನಾವೇ ಗುಡಿಸುತ್ತೇವೆ' ಅಂತ ದುಂಬಾಲು ಬೀಳುತ್ತಿದ್ದೆವು. ಅಷ್ಟರಮಟ್ಟಿಗೆ ನಮಗೆ ಶಿಕ್ಷಕರ ಬಗ್ಗೆ ಅಂದು ಭಯ ಇತ್ತು' ಎಂದು ಸಚಿವರು ಹೇಳಿದಾಗ ಇಡೀ ಕಾರ್ಯಕ್ರಮ ನಗೆಗಡಲಲ್ಲಿ ತೇಲಿತು.****

`ಒಮ್ಮೆ ನನ್ನ ಅಪ್ಪನಿಗೆ ಮೇಷ್ಟ್ರು ಬಹಳ ಹೊಡೀತಾರೆ, ಸ್ವಲ್ಪ ಅವರನ್ನು ವಿಚಾರಿಸ್ಕೋ, ಇಲ್ಲದಿದ್ದರೆ ಶಾಲೆಗೆ ಹೋಗೋದಿಲ್ಲ' ಅಂತ ಹಠ ಹಿಡಿದೆ. ಹಠಕ್ಕೆ ಕಟ್ಟು ಬಿದ್ದ ಅಪ್ಪ, ಶಾಲೆಗೆ ಬಂದ ಆ ಮೇಷ್ಟ್ರಿಗೆ ದೀರ್ಘ ದಂಡ ನಮಸ್ಕಾರ ಹಾಕಿ, 'ನನ್ನ ಮಗನಿಗೆ ಹೊಡೀಬೇಡ್ರಿ ಸರ್' ಎಂದು ವಿನಂತಿ ಮಾಡಿದರು. ನಮ್ಮಪ್ಪ ಅತ್ತ ಹೋಗುತ್ತಲೇ ಈ ಕಡೆ ಮೇಷ್ಟ್ರು ನನ್ನನ್ನು ಕರೆದು, ಎನ್ಲೇ ನಿಮ್ಮಪ್ಪನ್ನ ಕರ್ಕೋಂಬರ್ತೀಯಾ ಅಂತ ಯದ್ವಾ ತದ್ವಾ ಬೆಂಡ್ ಎತ್ತಿದರು...' ಎನ್ನುತ್ತಾ ಹೀಗಿತ್ತು ನಮ್ಮ ಶಿಕ್ಷಕರ ಕಾಲ ಎಂದು ಸಚಿವರು ಮಾತು ಮುಗಿಸಿದರು.

`ನಾಡಗೀತೆ ಶೈಲಿ ಬದಲಿಸಬೇಡಿ'

`ನಮ್ಮ ನಾಡಗೀತೆಯ ಶೈಲಿ ಬದಲಿಸಿ, ರಾಗ ಸಂಯೋಜಿಸಿ, ದೀರ್ಘಕಾಲ ಹಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ ನಾಡಗೀತೆಯನ್ನು ವಿಭಿನ್ನ ರಾಗ ಸಂಯೋಜನೆ ಹಾಗೂ ಆಲಾಪಗಳೊಂದಿಗೆ ಸುದೀರ್ಘವಾಗಿ ಹಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, 'ರಾಷ್ಟ್ರಗೀತೆಯಾಗಲಿ ಅಥವಾ ನಾಡಗೀತೆಯನ್ನಾಗಲಿ, ಇಂಥದ್ದೇ ರಾಗ, ತಾಳ ಸಮಯದಲ್ಲಿ ಹಾಡಬೇಕೆಂಬ ನಿಯಮವಿದೆ. ಅದು ಬಿಟ್ಟು, ಪ್ರತ್ಯೇಕ ರಾಗ ಹಾಕುವುದು, ಆಲಾಪನೆಗಳನ್ನು ಸೇರಿಸುವುದು, ಗಂಟೆಗಟ್ಟಲೆ ಹಾಡುವುದು ಅಪರಾಧ' ಎಂದು ಎಚ್ಚರಿಸಿದರು.ನನಗಂತೂ ನಾಡಗೀತೆ ನೆನಪಿದೆ. ಶಿಕ್ಷಕರು ಈ ನಾಡಗೀತೆಯನ್ನು ಅಭ್ಯಾಸ ಮಾಡಿ. ಪ್ರತ್ಯೇಕ ಆರ್ಕೆಸ್ಟ್ರಾದವರು ಹಾಡುವ ಬದಲು ನೀವೇ ಹಾಡಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಅಕ್ರಮ ಕ್ಲಬ್‌ಗಳಿಗೆ ಕಡಿವಾಣ ಹಾಕಿ: ಶಾಸಕ

ಚಿತ್ರದುರ್ಗದಲ್ಲಿ ತಲೆಯೆತ್ತಿರುವ ಅಕ್ರಮ ಕ್ಲಬ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ನಗರದಲ್ಲಿ ಏಳೆಂಟು ಕ್ಲಬ್‌ಗಳು ಎಗ್ಗಿಲ್ಲದೇ ಜೂಜಾಟ ನಡೆಸುತ್ತಿವೆ. ಪಕ್ಕದ ಆಂಧ್ರ ಮತ್ತು ಅಕ್ಕಪಕ್ಕದ ಜಿಲ್ಲೆಗಳವರು ಇಲ್ಲಿ ಬಂದು ಜೂಜಾಡುತ್ತಿದ್ದರೆ.ನಿತ್ಯ ಒಂದೆರೆಡು ಕೋಟಿ ವಹಿವಾಟು ನಡೆಯುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಅಕ್ರಮ ಕ್ಲಬ್‌ಗಳಿಗೆ ಕಡಿವಾಣ ಹಾಕಬೇಕು. ಕಾನೂನು ಬದ್ಧವಾಗಿರದ ಕ್ಲಬ್‌ಗಳನ್ನು ಮುಚ್ಚಬೇಕು ಎಂದು ತಿಳಿಸಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮಾತನಾಡಿದ್ದು ಅವರು ಈ ಬಗ್ಗೆ ಗಮನಹರಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry