`ಶಿಕ್ಷೆ' ನೀಡುವ ಕೇಂದ್ರಗಳು!

7

`ಶಿಕ್ಷೆ' ನೀಡುವ ಕೇಂದ್ರಗಳು!

Published:
Updated:
`ಶಿಕ್ಷೆ' ನೀಡುವ ಕೇಂದ್ರಗಳು!

ಚರ್ಚಾ ಸರಣಿ ಭಾಗ 4

ಇತ್ತೀಚೆಗೆ ಬೆಳಕಿಗೆ ಬಂದ ಪ್ರಕರಣಗಳನ್ನು ಗಮನಿಸಿದರೆ ಶಿಕ್ಷಣ ಕೇಂದ್ರಗಳು ಮಕ್ಕಳ `ಶಿಕ್ಷೆ'ಯ ಕೇಂದ್ರಗಳಾಗುತ್ತಿವೆ ಎನಿಸುತ್ತದೆ. ಖಾಸಗಿ ಶಾಲೆಗಳ ಶೋಷಣೆ, ಸುಲಿಗೆ ಮತ್ತು ದಬ್ಬಾಳಿಕೆ ಮಿತಿ ಮೀರಿದೆ. ಶಾಲೆಗಳಲ್ಲಿ ಮಕ್ಕಳಿಗೆ `ಭದ್ರತೆ' ಇಲ್ಲದಂತಾಗಿದೆ. ಶಿಕ್ಷಕರ ಮತ್ತು ಶಿಕ್ಷಕೇತರ ಸಿಬ್ಬಂದಿಯ ದಬ್ಬಾಳಿಕೆ, ದೌರ್ಜನ್ಯ ಮುಗ್ಧ ಮನಸ್ಸಿನ ಮಕ್ಕಳ ಮೇಲೆ ಭಯ ಮಿಶ್ರಿತ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಇದರಿಂದ ಪೋಷಕರು ಗಾಬರಿಯಾಗಿದ್ದಾರೆ.ಅತಿಯಾದ ಶಿಕ್ಷಣದ ಒತ್ತಡ ಮಕ್ಕಳಲ್ಲಿ ಖಿನ್ನತೆ, ನಿರುತ್ಸಾಹ ಮತ್ತು ಭಯ ಮೂಡಿಸುತ್ತಿದೆ. ಇದರಿಂದ ಪಾರಾಗಲು ಕೆಲವು ಮಕ್ಕಳು ಕೆಟ್ಟದಾರಿ ತುಳಿದರೆ, ದುರ್ಬಲ ಮನಸ್ಸಿನ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬಾಲ್ಯದಲ್ಲಿ ಮಕ್ಕಳ ಮನಸ್ಸು ಆಟ, ಪಾಠ ಮನರಂಜನೆ ಮೂಲಕ ಉಲ್ಲಾಸ, ಉತ್ಸಾಹದಿಂದ ಅರಳುವಂತಿರಬೇಕು. ಮಕ್ಕಳು ಈ ವಯಸ್ಸಿನಲ್ಲಿ ಆಡಿ ಹಾಡಿ ನೋಡಿ ಕಲಿಯುವಂತಿರಬೇಕು. ಶಿಕ್ಷಣವೇ ಆಗಲಿ ಅಥವಾ ವ್ಯವಸ್ಥೆಯೇ ಆಗಲಿ ಮಕ್ಕಳಿಗೆ ಸಂಕೋಲೆಯಂತೆ ಆಗಬಾರದು.ಶಿಕ್ಷಣ ಹೇಗಿರಬೇಕು?

ಇಂದು ಒಂದು ತರಗತಿಯಲ್ಲಿ 50ರಿಂದ 60ಕ್ಕೂ ಹೆಚ್ಚು ಮಕ್ಕಳಿಗೆ ಕಲಿಸುವ ಅನಿವಾರ್ಯತೆ ಮತ್ತು ಒತ್ತಡ ಶಿಕ್ಷಕರ ಮೇಲಿದೆ. ಸಮಯದ ಅಭಾವ ಮತ್ತು ಹೆಚ್ಚಿನ ಒತ್ತಡದಿಂದಾಗಿ ಶಿಕ್ಷಕರು ಸಂಯಮ ಕಳೆದುಕೊಳ್ಳುವಂತಾಗಿದೆ. ಶಿಕ್ಷಣದ ಬದಲು `ಶಿಕ್ಷೆ'ಯ ಮೂಲಕ ಶಿಕ್ಷಕರು ಬೋಧಿಸಬೇಕಾಗಿದೆ. ಇದರಿಂದಾಗಿ ಮಕ್ಕಳ ಕಲಿಕೆಗೆ ಮತ್ತು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಹಲವು ಶಿಕ್ಷಕರು ವಿಫಲರಾಗುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಗಮನಹರಿಸಬೇಕಾಗಿದೆ.ಎಲ್ಲ ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಒಂದೇ ಮಟ್ಟದಲ್ಲಿ ಇರುವುದಿಲ್ಲ. ಕೌಟುಂಬಿಕ ಮತ್ತು ಶಾಲಾ ಪರಿಸರವು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಭಯದ ವಾತಾವರಣ ಅಥವಾ ಹೆಚ್ಚಿನ ಒತ್ತಡ ಇದ್ದಾಗ ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕುಂಠಿತವಾಗುತ್ತದೆ. ಆಗ ಅವರಿಗೆ ಸುಲಭವಾದುದು ಸಹ ಕಠಿಣ ಎನಿಸತೊಡಗುತ್ತದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮಕ್ಕಳ ಕಲಿಕೆಗೆ ನೆರವಾಗಬೇಕು.ಶಿಕ್ಷಕರು 1ರಿಂದ 4ನೇ ತರಗತಿಯ ಮಕ್ಕಳಿಗೆ ಪ್ರೀತಿ ಮತ್ತು ವಿಶ್ವಾಸದಿಂದ ಕಲಿಸಬೇಕು. (ಅಂದರೆ ಮಕ್ಕಳ ಶಿಕ್ಷಣ ಪ್ರೋತ್ಸಾಹದಾಯಕವಾಗಿ ಇರಬೇಕು. ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅರಿತು ಅವರು ಕಲಿಯಲು ನೆರವಾಗಬೇಕು) 5ರಿಂದ 7ನೇ ತರಗತಿಯ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಮೂಲಕ ಬೋಧಿಸಬೇಕು. ಅಂದರೆ ಹೇಗೆ ಓದಬೇಕು, ಹೇಗೆ ಅರ್ಥೈಸಿಕೊಳ್ಳಬೇಕು, ಹೇಗೆ ಟಿಪ್ಪಣಿ ಸಿದ್ಧಗೊಳಿಸಿಕೊಳ್ಳಬೇಕು, ಹೇಗೆ ಉತ್ತರಿಸಬೇಕು ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಬೇಕು.ಇನ್ನು 8ರಿಂದ 10ನೇ ತರಗತಿಯ ಮಕ್ಕಳಿಗೆ ಸ್ವಸಾಮರ್ಥ್ಯದಿಂದ ಅಭ್ಯಾಸ ಮಾಡುವುದನ್ನು ಕಲಿಸಬೇಕು. (ಮಕ್ಕಳು ನಾಳಿನ ಪಾಠದ ಬಗ್ಗೆ ಮನೆಯಲ್ಲೇ ಪಠ್ಯ-ಪುಸ್ತಕವನ್ನು ಓದಿ ಸಿದ್ಧತೆ ಮಾಡಿಕೊಂಡು ಬರುವಂತೆ ತಿಳಿಸಬೇಕು. ಪಾಠ ಪ್ರಾರಂಭಿಸುವ ಮೊದಲು ಚುಟುಕಾಗಿ ಕೆಲವು ಆಯ್ದ ವಿದ್ಯಾರ್ಥಿಗಳಿಗೆ ಒಂದೆರಡು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬೇಕು. ಆಗ ಮಕ್ಕಳಿಗೆ ಶಿಕ್ಷಕರು ಬೋಧಿಸುವ ವಿಷಯ ಚೆನ್ನಾಗಿ ಮನದಟ್ಟಾಗುತ್ತದೆ. ಆಗ ಅವರು ಪಾಠವನ್ನು ಅರ್ಥ ಮಾಡಿಕೊಂಡು ಓದಲು ಸುಲಭವಾಗುತ್ತದೆ).ಮಕ್ಕಳು ಮನೆಪಾಠಕ್ಕೆ ಹೋಗುವ ಬದಲು ಶಾಲೆಯಲ್ಲೇ ಕಲಿತರೆ ಸಮಯ, ಶ್ರಮ ಮತ್ತು ಹಣ (ಇದನ್ನು ನ್ಯಾಷನಲ್ ವೇಸ್ಟ್ ಎನ್ನಬಹುದು) ಉಳಿಸಬಹುದು. ಅದೇ ಸಮಯವನ್ನು ಮಕ್ಕಳು ಇನ್ನೂ ಹೆಚ್ಚು ಓದಲು ಉಪಯೋಗಿಸಿಕೊಳ್ಳಬಹುದು. ಆದ್ದರಿಂದ ಶಾಲೆಯಲ್ಲೇ ಮಕ್ಕಳಿಗೆ ಉತ್ತಮ ಬೋಧನೆ ಸಿಗುವಂತಾಗಬೇಕು.ಬಹುತೇಕ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಹಾಗೂ ಪೋಷಕರಿಗೆ ಹೋಮ್‌ವರ್ಕ್ ಮತ್ತು ಟ್ಯೂಷನ್ ಎಂಬ ಪದದ ಬಗ್ಗೆ ಸರಿಯಾದ ಅರ್ಥವೇ ತಿಳಿದಿರುವುದಿಲ್ಲ. ಇದರಿಂದ ಹೋಮ್‌ವರ್ಕ್ ಮತ್ತು ಮನೆಪಾಠ ಎಂಬ ಅಂಧಾನುಕರಣೆಯಿಂದಾಗಿ ಮಕ್ಕಳು ಬವಣೆ ಪಡಬೇಕಾಗಿದೆ. ಇತ್ತೀಚೆಗಂತೂ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಭರದಲ್ಲಿ ಮತ್ತು ಶಾಲೆಯ ಪ್ರತಿಷ್ಠೆಯನ್ನು ತೋರ್ಪಡಿಸಿಕೊಳ್ಳಲು ಅನಗತ್ಯ ಚಟುವಟಿಕೆಗಳನ್ನು ಮಕ್ಕಳ ಮೇಲೆ ಹೇರಿ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಗುರಿ ಮಾಡಲಾಗುತ್ತಿದೆ. ಇನ್ನು ಪೋಷಕರು ಶಾಲೆಗೆ ಅವರು ಕೇಳಿದಷ್ಟು ಶುಲ್ಕವನ್ನು ಪಾವತಿಸುವುದೂ ಅಲ್ಲದೆ, ಮಕ್ಕಳ ಶಾಲಾ ಕೆಲಸವನ್ನೂ ತಾವೇ ಮಾಡಿ ಕಳುಹಿಸಬೇಕಾದ ಸಂದಿಗ್ಧತೆಗೆ ಒಳಗಾಗಿದ್ದಾರೆ.ಇನ್ನು ಮುಂದಾದರೂ ಖಾಸಗಿ ಶಾಲೆಗಳಲ್ಲಿ ಹೋಮ್‌ವರ್ಕ್, ಅಸಂಬದ್ಧ ಪ್ರಾಜೆಕ್ಟ್‌ವರ್ಕ್ ಮತ್ತು ಅಂಕ ಗಳಿಕೆಯಂತಹ ಮೂರ್ಖ ಪದ್ಧತಿಯನ್ನು ಬದಿಗಿರಿಸಿ, ಮಕ್ಕಳು ಆಸಕ್ತಿಯಿಂದ ಕಲಿಯುವಂತಹ, ಜ್ಞಾನ ವಿಕಾಸಕ್ಕೆ ನೆರವಾಗುವಂತಹ ಹಾಗೂ ಬದುಕಿಗೆ ಅತ್ಯವಶ್ಯಕ ಆಗಿರುವಂತಹ ಶಿಕ್ಷಣಕ್ಕೆ ಒತ್ತು ನೀಡುವುದು ಸರ್ಕಾರದ ಮತ್ತು ಶಿಕ್ಷಣ ಸಂಸ್ಥೆಗಳ ಬಹು ಮುಖ್ಯ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ `ಭದ್ರತೆ' ಸಿಗಬೇಕು. `ಶಿಕ್ಷೆ' ರಹಿತ ಶಿಕ್ಷಣ  ದೊರೆಯಬೇಕು. ಶಿಕ್ಷಣ ಕೇಂದ್ರಗಳು ಸೇವಾ ಮನೋಭಾವದಿಂದ ಶಿಕ್ಷಣ ನೀಡಬೇಕು. 

(ಲೇಖಕರು ಬೆಂಗಳೂರಿನ `ಪೋಷಕರು, ಶಿಕ್ಷಕರು ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ'ಯ ಅಧ್ಯಕ್ಷರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry