ಶಿಡ್ಲಘಟ್ಟದ ಅಶ್ವತ್ಥಕಟ್ಟೆಗಳು...

7

ಶಿಡ್ಲಘಟ್ಟದ ಅಶ್ವತ್ಥಕಟ್ಟೆಗಳು...

Published:
Updated:

ಅಶ್ವತ್ಥಕಟ್ಟೆಗಳು ಗ್ರಾಮೀಣ ಜನರ ಪಂಚಾಯಿತಿ ಕಟ್ಟೆಗಳು. ಇಲ್ಲಿ ದೇವರು ನೆಲೆಸಿರುವರೆಂಬ ನಂಬಿಕೆಯಿಂದ ಹಿಂದೆ ಬಹುತೇಕ ವ್ಯಾಜ್ಯಗಳನ್ನು ಹಿರಿಯರು ಇಲ್ಲೇ ನೆರವೇರಿಸುತ್ತಿದ್ದರು. ಬಡವರ ಮದುವೆಗಳನ್ನು ಇಲ್ಲೆಯೇ ನಡೆಸಲಾಗುತ್ತಿತ್ತು. ಮದುವೆಯ ದಿಬ್ಬಣಕ್ಕೂ ಇದುವೇ ಪ್ರಶಸ್ತವಾದ ಸ್ಥಳವಾಗಿತ್ತು.ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ರಸ್ತೆಯಲ್ಲಿ ಬಶೆಟ್ಟಹಳ್ಳಿ ಮತ್ತು ಆನೆಮಡುಗು ರಸ್ತೆಗಳ ಸಂಪರ್ಕ ತಾಣದಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಅತ್ಯಂತ ಹಳೆಯ ಅಶ್ವತ್ಥಕಟ್ಟೆಗಳಿವೆ. ಈಗಲೂ ಸುಸ್ಥಿತಿಯಲ್ಲಿರುವ ಈ ಕಟ್ಟೆಗಳು ಬಸ್ಸಿಗೆ ಕಾಯುವವರಿಗೆ, ಹೂ-ಹಣ್ಣು ಮಾರಾಟಗಾರರಿಗೆ, ಆಟ ಆಡುವವರಿಗೆ ತಾಣವಾಗಿದ್ದು, ಹಲವಾರು ರೀತಿಯಲ್ಲಿ ಬಳಕೆಯಾಗುತ್ತಿವೆ.ಅಶ್ವತ್ಥವೃಕ್ಷವನ್ನು ಅರಳಿ, ಪೀಪಲ್, ಬೋಧಿವೃಕ್ಷ ಎಂಬ ಬೇರೆಬೇರೆ ಹೆಸರಿನಿಂದ ಕರೆಯುತ್ತಾರೆ. ಇದು ಭಾರತೀಯರಿಗೆ ಪವಿತ್ರವೆಂದು ಪರಿಗಣಿತವಾದ ಮರ. ಈ ಮರದ ಕೆಳಗೆ ಧ್ಯಾನ ನಿರತರಾಗಿರುವಾಗಲೇ ಗೌತಮಬುದ್ಧರಿಗೆ ಜ್ಞಾನೋದಯವಾಯಿತು ಎಂಬ ಪ್ರತೀತಿಯಿದೆ. ಇದು ಅತ್ಯುತ್ತಮ ಆಮ್ಲಜನಕ ಉತ್ಪಾದಿಸುವುದರಿಂದ ಈ ಮರವನ್ನು ಆಮ್ಲಜನಕದ ಕಾರ್ಖಾನೆ ಎಂದೇ ಕರೆಯುತ್ತಾರೆ. ಹಲವು ಔಷಧಿಗಳ ಆಗರವಾಗಿರುವ ಬೇವಿನ ಮರವನ್ನೂ ಅರಳಿಯೊಂದಿಗೆ ನೆಟ್ಟು ಅಡಿಯಲ್ಲಿ ನಾಗರಕಲ್ಲನ್ನು ಪ್ರತಿಷ್ಠಾಪಿಸಿ, ಕಟ್ಟೆಯನ್ನು ಕಟ್ಟುವುದು ಹಿಂದೆ ಒಂದು ಸಂಪ್ರದಾಯವಾಗಿತ್ತು. ಇವುಗಳನ್ನು ಪೂಜಾ ದೃಷ್ಟಿಯಿಂದ ನೋಡುವುದರಿಂದ ಇಂತಹ ಮಹತ್ವದ ಸಂಪತ್ತಿನ ರಕ್ಷಣೆ ಆಗುತ್ತದೆ ಎಂಬ ಉದ್ದೇಶವಿತ್ತು. ಈ ಮರಗಳನ್ನು ಕಡಿಯಬಾರದು, ಕಡಿದರೆ ಕೆಡುಕಾಗುತ್ತದೆ ಎಂಬ ನಂಬಿಕೆ ಗ್ರಾಮೀಣರಲ್ಲಿದೆ. ಬೇಸಿಗೆಯಲ್ಲಿ ಜನರ ಹರಟೆಯ ತಾಣವಾಗಿ, ಮಕ್ಕಳಿಗೆ ಆಟವಾಡುವ ಸ್ಥಳವಾಗಿ, ಗ್ರಾಮೀಣ ಆಟಗಳಾದ ಹುಲಿಘಟ್ಟ, ಪಗಡೆ, ಚೌಕಾಬಾರ ಮುಂತಾದ ಆಟಗಳಿಗೆ ಕ್ರೀಡಾಂಗಣವಾಗಿ, ದನಕರುಗಳಿಗೆ ಮೇವು ತಿನ್ನಿಸುವ ಕಟ್ಟೆಯಾಗಿ, ಹೊಸ ಗಂಡು ಹೆಣ್ಣಿನ ಪ್ರಥಮ ಪೂಜಾ ಸ್ಥಾನವಾಗಿ, ಮದುಮಗನನ್ನು ಸಿಂಗರಿಸುವ ಸ್ಥಳವಾಗಿ, ಹಿರಿಯರಿಗೆ ನೆರಳಾಗಿ, ಕಿರಿಯರಿಗೆ ಕಾಲಕಳೆಯುವ ನೆಲೆಯಾಗಿ, ಪೂಜಿಸುವವರಿಗೆ ದೇವಾಲಯವಾಗಿ ಅಶ್ವತ್ಥಕಟ್ಟೆಯು ಬಳಕೆಯಾಗುತ್ತದೆ. ಧಾರ್ಮಿಕ ದೃಷ್ಟಿಯಿಂದ ತ್ರಿಮೂರ್ತಿಗಳ ವಾಸಸ್ಥಾನ ಈ ಅರಳಿ ಮರ. `ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರೂಪಿಣೆ, ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ~ ಎಂದು ಶಾಸ್ತ್ರದಲ್ಲಿ ಹೇಳುತ್ತಾರೆ. ಅದರ ಎಲೆಗಳು ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ. ಅರಳಿ ಎಲೆ ತನ್ನದೇ ಒಂದು ವಿಶಿಷ್ಟ ಪಾಠ ಸಾರುತ್ತದೆ. ಎಲೆಯು  ಆರಂಭದಲ್ಲಿ ಹಾಗೂ ಅಂತ್ಯದಲ್ಲಿ  ಸಣ್ಣದಾಗಿರುತ್ತದೆ. ಮಧ್ಯೆ ನೇರವಾದ ಸಣ್ಣ ಹಾದಿ. ಅದರ ಎಡ ಬಲದಲ್ಲಿ ನೂರಾರು ಕವಲುಗಳು.ಕವಲುಗಳು ಒಡೆದು ಅನೇಕ ಕವಲುಗಳು. ಹೀಗೆಯೇ ಸಾಗುತ್ತದೆ. ಅಂಚಿಗೆ ಬರುತ್ತಾ ಬರುತ್ತಾ, ಅದರ ಹಾದಿ ಇನ್ನೂ ಕಡಿದಾಗುತ್ತ ಸಾಗುತ್ತದೆ. ಕಡೆಗೆ ಬಿಂದುವಾಗಿ ನಿಲುತ್ಲದೆ. ಅದು ಅದರ ಗುರಿ.ನಮ್ಮ ಗುರಿ ಕೂಡ ದೊಡ್ಡದೇ ಇದ್ದರೂ ಕೂಡ ಅದು ದೂರದಿಂದ ಒಂದು ಸಣ್ಣ ಬಿಂದುವಾಗಿರುತ್ತದೆ. ಹಾದಿ ಕಠಿಣ, ದುರ್ಗಮ, ಕಡಿದು ಇರುತ್ತದೆ. ಅದರ ಉದ್ದಕ್ಕೂ ನೂರಾರು ಅಡೆತಡೆಗಳು, ಕವಲೊಡೆದ ಭಾವನೆಗಳು, ಸಾಗುವ ಆಸೆ ಆಕಾಂಕ್ಷೆಗಳು. ಧೃತಿಗೆಡದೆ ಸಾಗಿದಾಗ ಮಾತ್ರ ಗುರಿ ನಮ್ಮ ಕಣ್ಣ ಮುಂದೆಯೇ ಇರುತ್ತದೆ~ ಎನ್ನುತ್ತಾರೆ ಮುತ್ತೂರಿನ ಅಪ್ಪಯ್ಯಪ್ಪ ಸ್ವಾಮಿ. `ಗ್ರಾಮೀಣ ಪ್ರದೇಶಗಳ ಪೂರ್ವಜರ ಪಳೆಯುಳಿಕೆಯಂತಿರುವ ಕಲ್ಲಿನ ಬಾವಿ, ಪಾಳು ಮಂಟಪ, ಶಿಲೀಂದ್ರ, ಅಶ್ವತ್ಥಕಟ್ಟೆ, ಕೊಳ, ಮಾಸ್ತಿಗಲ್ಲು, ವೀರಗಲ್ಲು, ಶಾಸನಗಳು ಮತ್ತು ಜೀರ್ಣಾವಸ್ಥೆ ತಲುಪುತ್ತಿರುವ ದೇವಾಲಯಗಳು ಸೂಕ್ತ ರಕ್ಷಣೆ ಇಲ್ಲದೆ ಒತ್ತುವರಿಗೆ ಒಳಪಟ್ಟು ಜನಪದ ಪರಂಪರೆ  ನೆಲೆ ಕಳೆದುಕೊಳ್ಳುತ್ತಿದೆ. ನಮ್ಮ ಆರೋಗ್ಯವರ್ಧಕ, ಆಮ್ಲಜನಕದ ಜನಕ ಹಾಗೂ ವಿವಿಧೋದ್ದೇಶಗಳಿಗೆ ಬಳಸುವ ಅಶ್ವತ್ಥಕಟ್ಟೆಗಳನ್ನು ಉಳಿಸಿಕೊಳ್ಳಬೇಕಿದೆ~ ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry