ಗುರುವಾರ , ಮೇ 13, 2021
17 °C

ಶಿಡ್ಲಘಟ್ಟ: ಅಂದ ಹೆಚ್ಚಿಸಿದ ಗುಲ್ ಮೊಹರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಪಟ್ಟಣ ಹಾಗೂ ತಾಲ್ಲೂಕಿನ ರಸ್ತೆಯಂಚಿನಲ್ಲಿ ಬೆಳೆಯುವ ಗುಲ್‌ಮೊಹರ್ ಮರಗಳು ಉಜ್ವಲ ಕೆಂಬಣ್ಣದ ಹೂಗಳನ್ನು ಅರಳಿಸಿ ದಾರಿಹೋಕರಿಗೆ ನೆರಳು, ತಂಪಿನ ಜೊತೆಗೆ ಆನಂದವನ್ನೂ ನೀಡುತ್ತಿವೆ.ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಕ್ಕ, ನ್ಯಾಯಾಲಯದ ಮುಂಭಾಗದಲ್ಲಿ ಬೆಳೆದು ನಿಂತ ಗುಲ್‌ಮೊಹರ್ ಮರಗಳು ದೂರದಿಂದಲೇ ಕೆಂಪುಬಣ್ಣದ  ಹೂಗಳಿಂದ ಆಹ್ಲಾದ ಉಂಟುಮಾಡುತ್ತಿವೆ. ಸಾಮಾನ್ಯವಾಗಿ ವರ್ಷದ ಕಡುಬಿಸಿಲಿನ ಸಮಯ, ಮುಂಗಾರಿಗೆ ಮುಂಚೆ ಹೂಗೊಂಚಲಿನ ಗುಲ್‌ಮೊಹರನ್ನು ಕಾಣಬಹುದು. ಮುಂಗಾರು ಆರಂಭವಾಗಿದ್ದು ಕರಿಮೋಡ ಮುಸುಕಿರುವ ಹಿನ್ನೆಲೆಯಲ್ಲಿ ಕೆಂಬಣ್ಣದ ಹೂಗಳು ಮಳೆರಾಯನಿಗೆ ಸ್ವಾಗತ ಕೋರುವಂತೆ ಭಾಸವಾಗುತ್ತಿವೆ.ಈ ಮರದ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೆಜಿಯಾ ರಾಫ್. ಡೆಲೋನಿಕ್ಸ್ ಎಂದರೆ ``ಸ್ಪಷ್ಟವಾದ ಇಕ್ಕಳ ಅಥವಾ ಉಗುರು ಹೊಂದಿದ'' ಎಂದರ್ಥ. ಇದು ಹೂವಿನ ಎಸಳಿನ ಆಕಾರವನ್ನು ಸೂಚಿಸುತ್ತದೆ. ಮಕ್ಕಳು ಇದನ್ನು ಬಳಸಿ `ಕೋಳಿ ಪಂದ್ಯ' ಎಂಬ ಆಟವಾಡುತ್ತಾರೆ. ಹಿಂದಿಯಲ್ಲಿ ಈ ಮರವನ್ನು ಗುಲ್‌ಮೊಹರ್ ಎನ್ನುವರು. ಗುಲ್ ಎಂದರೆ ಗುಲಾಬಿ ಅಥವಾ ಹೂವು.

ಮೋರ್ ಅಂದರೆ ನವಿಲು. ನವಿಲು ಗುಲಾಬಿ ಗುಲ್‌ಮೊಹರ್ ಎಂದಾಗಿದೆ. ಇಂಗ್ಲಿಷ್‌ನಲ್ಲಿ ಫ್ಲಾಂಬೊಯಾಂಟ್, ರಾಯಲ್ ಗೋಲ್ಡ್ ಮೊಹರ್, ರಾಯಲ್ ಪೀಕಾಕ್ ಫವರ್, ಫೈರ್ ಟ್ರೀ ಎನ್ನುತ್ತಾರೆ. ಈಸ್ಟರ್ ಉತ್ಸವವು ಆದ 50 ದಿನಗಳ ಬಳಿಕ ಪೆಂಟೆಕಾಸ್ಟ್ ಹಬ್ಬದ ಹೊತ್ತಿಗೆ ಈ ಮರದ ಹೂಗಳು ಅರಳುತ್ತವೆಂದು ಕ್ರಿಶ್ಚಿಯನ್ನರು ಇದಕ್ಕೆ ಪೆಂಟೆಕಾಸ್ಟ್ ಟ್ರೀ ಎಂದು ಕರೆಯುವರು.ಏಪ್ರಿಲ್ ಕೊನೆ ಮತ್ತು ಮೇ ತಿಂಗಳಿನಲ್ಲಿ ಹೂ ಅರಳುವುದರಿಂದ ಮೇ ಫ್ಲವರ್ ಎಂದೂ ಕರೆಯುವರು. ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಕೆಂಬಣ್ಣದ ಈ ಹೂವು ಹೋರಾಟ, ಶ್ರಮದಾನ ಮತ್ತು ಕಾರ್ಮಿಕರ ಸಂಕೇತವನ್ನು ಪ್ರತಿಧ್ವನಿಸುತ್ತದೆ. ಇದರ ಕಾಯಿಗಳು ಕತ್ತಿಯಂತೆ ಉದ್ದ ಮತ್ತು ಅಗಲವಿರುವುದರಿಂದ ಈ ಮರವನ್ನು ಕತ್ತಿ     ಕಾಯಿ ಮರ ಎಂತಲೂ ಕರೆಯುತ್ತಾರೆ.ಗುಲ್ ಮೊಹರ್ ಮರದ ಮೂಲ ಮಡಗಾಸ್ಕರ್. ಮಾರಿಷಸ್ ಮೂಲಕ ಭಾರತಕ್ಕೆ ಇದು ಬಂದಿದೆ. ಹೂ ಬಿಡುವ ಸ್ವಲ್ಪ ಮುಂಚಿತವಾಗಿ ಈ ಮರದ ಎಲೆಗಳು ಉದುರುತ್ತವೆ. ಗೊಂಚಲುಗಳಲ್ಲಿ ಹೂ ಬಿಟ್ಟಾಗ ಕೆಂಪುಬಣ್ಣದಿಂದ ಕಂಗೊಳಿಸುವ ಮರವನ್ನು `ಬೆಂಕಿಮರ'ವೆಂದೇ ಕರೆಯುತ್ತಾರೆ. ಉರ್ದು ಕವಿತೆಗಳಲ್ಲಿ ಗುಲ್‌ಮೊಹರ್ ವಿಶೇಷವಾಗಿ ರೂಪಕವಾಗಿ ಬಳಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.