ಶಿಡ್ಲಘಟ್ಟ: ತೋಟಗಾರಿಕೆ ಅಧಿಕಾರಿ ಬೆಳೆ ವೀಕ್ಷಣೆ

7

ಶಿಡ್ಲಘಟ್ಟ: ತೋಟಗಾರಿಕೆ ಅಧಿಕಾರಿ ಬೆಳೆ ವೀಕ್ಷಣೆ

Published:
Updated:

ಶಿಡ್ಲಘಟ್ಟ: ಮಳೆಯಾಶ್ರಯದಲ್ಲಿ ತೊಗರಿ ಸೇರಿದಂತೆ ಹಲವು ಮಿಶ್ರ ಬೆಳೆ ಬೆಳೆದ ತೋಟಗಳಿಗೆ  ಕೃಷಿ ಅಧಿಕಾರಿಗಳ ತಂಡ ಈಚೆಗೆ ಭೇಟಿ ನೀಡಿ ವೀಕ್ಷಿಸಿತು. ಉತ್ತಮ ಬೆಳೆ ಬೆಳೆದ ವೀರಾಪುರದ ರೈತ ಸುಬ್ಬರಾಯಪ್ಪ, ಅಪ್ಪಣ್ಣಪ್ಪನವರ ನಾರಾಯಣಸ್ವಾಮಿ, ಅಪ್ಪಯ್ಯಸ್ವಾಮಿ ಮತ್ತಿತರರ ತೋಟಗಳಲ್ಲಿ ಕೃಷಿ ಸಹಾಯಕ ನಿರ್ದೇಶಕ ಎನ್.ರಾಘವೇಂದ್ರ ಮಿಶ್ರಬೆಳೆಗಳನ್ನು ವೀಕ್ಷಿಸಿದರು.ವೀರಾಪುರದ ರೈತ ಸುಬ್ಬರಾಯಪ್ಪ ಅವರ ತೋಟದಲ್ಲಿ ಮಳೆಯಾಶ್ರಯದಲ್ಲಿ ಆರು ಅಡಿ ಎತ್ತರಕ್ಕೆ ಬೆಳೆದು ನಿಂತ ತೊಗರಿ ಗಿಡ ವೀಕ್ಷಿಸಿದ ಅವರು, ಇಷ್ಟು ಕಡಿಮೆ ಪ್ರಮಾಣದ ಮಳೆಯಲ್ಲೂ ಏಳೆಂಟು ಅಡಿ ಎತ್ತರದ ರೋಗರಹಿತ ತೊಗರಿ ಬೆಳೆ, ಅವರೆ, ಬೆಂಡೆ, ದಂಟಿನ ಸೊಪ್ಪು, ಹಿಪ್ಪುನೇರಳೆ,  ಸುಬೋಬುಲ್ಲಾ, ಹೆಬ್ಬೇವು ಹಾಗೂ ತೋಟದ ಬದುಗಳಲ್ಲಿ ಸಿಲ್ವರ್‌ಓಕ್, ಸೀಮೆ ಹುಲ್ಲು ಇನ್ನಿತರೆ ಮಿಶ್ರ ಬೆಳೆಗಳನ್ನು ಬೆಳೆದ ರೈತರ ಶ್ರಮ ಹಾಗೂ ಭೂಮಿಯ ಸದ್ಬಳಕೆಯನ್ನು ಮೆಚ್ಚಿದರು.ತೊಗರಿಯ ಹೂ, ಕಾಯಿಗಳಿಗೆ ಕಾಡುವ ಕ್ರಿಮಿ, ಕೀಟಗಳ ಬಗ್ಗೆ ವಿವರಿಸಿ, ಯಾವ ಯಾವ ಹಂತದಲ್ಲಿ ಔಷಧೋಪಚಾರ ಮಾಡಬೇಕು, ಫಲವತ್ತತೆ ಹೆಚ್ಚಿಸಲು ಯಾವ ಗೊಬ್ಬರ,  ಲಘು ಪೋಷಕಾಂಶಗಳನ್ನು ನೀಡಬೇಕೆಂಬುದರ ಬಗ್ಗೆ ತಿಳಿಸಿಕೊಟ್ಟರು.ಯಾವುದೆ ರಾಸಾಯನಿಕವನ್ನು ಸಿಂಪಡಿಸುವಾಗ ರೈತರು ಮೈ ತುಂಬಾ ಬಟ್ಟೆ ತೊಟ್ಟು, ಬಾಯಿಗೆ  ಕಡ್ಡಾಯವಾಗಿ ಕವಚ ಧರಿಸಬೇಕು. ಇಲ್ಲವಾದಲ್ಲಿ ರಾಸಾಯನಿಕ ದೇಹಕ್ಕೆ ಸೇರಿ ಹಲವು ಮಾರಣಾಂತಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಕೆ ನೀಡಿದರು.ಬಹುತೇಕ ರೈತರು ಅಂಗಡಿಗಳಲ್ಲಿ ಸೂಚಿಸಿ ನೀಡುವ ರಾಸಾಯನಿಕಗಳನ್ನು ಸಿಂಪಡಿಸುತ್ತಾರೆ. ಹಾಗೆ ಬಳಸುವ ಪ್ರಮಾಣದಲ್ಲಿ ಏರು ಪೇರು ಮಾಡುತ್ತಾರೆ. ಆಗ ಕ್ರಿಮಿ, ಕೀಟಗಳು  ನಿಯಂತ್ರಣಕ್ಕೆ ಬರುವುದಿಲ್ಲ. ಈ ಬಗ್ಗೆ ಹೆಚ್ಚು ದೂರುಗಳು ಬರುತ್ತಿದ್ದು ರೈತರು ಇಲಾಖೆಯ ತಜ್ಞರು, ಅಧಿಕಾರಿಗಳನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಯಂತೆ ಔಷಧೋಪಚಾರ ಮಾಡಬೇಕು. ಆಗ ರೋಗ ನಿಯಂತ್ರಣ ಸಾಧ್ಯ ಎಂದರು.ಔಷಧೋಪಚಾರವನ್ನು ಮದ್ಯಾಹ್ನದ ನಂತರ ಮಾಡುವುದು ಸೂಕ್ತ ಎಂದ ಅವರು, ಇದರಿಂದ ಒಂದು ವೇಳೆ ಹೆಚ್ಚು ಪ್ರಮಾಣದ ಔಷಧೋಪಚಾರವಾದರೂ ಸಂಜೆಯ ತಂಪಿನ ವಾತಾವರಣವು ಅಡ್ಡಪರಿಣಾಮಗಳನ್ನು ನಿಯಂತ್ರಿಸುತ್ತದೆ ಎಂದರು.ರೈತ ಸುಬ್ಬರಾಯಪ್ಪ, ರೈತ ಸಂಘದ ಮುನಿನಂಜಪ್ಪ, ಬೂದಾಳ ಶ್ರಿನಿವಾಸ್, ಸಿ.ರಾಮಣ್ಣ, ಆರ್.ನಾರಾಯಣಸ್ವಾಮಿ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry