ಗುರುವಾರ , ಮೇ 13, 2021
19 °C

ಶಿಡ್ಲಘಟ್ಟ: ಬರಗಾಲದಲ್ಲೂ ಮೂಡಿವೆ ಚಿಗುರೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ತಾಲ್ಲೂಕಿನ ವರದನಾಯಕನಹಳ್ಳಿ ಬಳಿಯಿರುವ ಪಟರೇನಹಳ್ಳಿ ಅರಣ್ಯ ಪ್ರದೇಶದ ಸುಮಾರು 40 ಎಕರೆಯಷ್ಟು ಹುಣಸೆ ತೋಪಿನಲ್ಲಿ ಚಿಗುರೆಲೆಗಳು ಮೂಡಿವೆ. ಈ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಒಣಹುಲ್ಲು ಸೇರಿದಂತೆ ಬಹಳಷ್ಟು ಮರಗಿಡಗಳಿಗೆ ಹಾನಿಯಾಗಿತ್ತು. ಪ್ರಕೃತಿಯ ನಿಯಮವೆಂಬಂತೆ ಈಗ ಒಣಗಿಡದಲ್ಲಿ ಚಿಗುರಿನ ಸಂಭ್ರಮ.  ಕೆಲವು ಮರಗಳಲ್ಲಿ ಕೆಂಪು ಮಿಶ್ರಿತ ಚಿಗುರೆಲೆಗಳು ಮೂಡುತ್ತಿದ್ದರೆ, ಇನ್ನು ಕೆಲವು ಮರಗಳಲ್ಲಿ ಚಿಗುರಿನೊಂದಿಗೆ ಹೂಗಳೂ ಮೂಡಿದ್ದು ಮಕರಂದ ಹೀರುವ ದುಂಬಿಗಳು ಮತ್ತು ಮಧುಪಾನ ಮಾಡುವ ಸೂರಕ್ಕಿಗಳಿಗೆ ಸುಗ್ಗಿ ತಂದಿವೆ. ಆಲ, ಅರಳಿ ಮೊದಲಾದ ಕೆಂಪು ಚಿಗುರು ಬಿಡುವ ಸಸ್ಯಗಳ ಸಾಲಿನಲ್ಲಿ ಹುಣಸೆಯೂ ಒಂದು. ಹುಣಸೆಹಣ್ಣು ದುಬಾರಿಯಾಗಿರುವ ಕಾಲದಲ್ಲಿ ಬಡವರಿಗೆ ಹುಣಸೆ ಚಿಗುರನ್ನು ಆಶ್ರಯಿಸಿ ಕೆಲವು ದಿನಗಳ ಮಟ್ಟಿಗೆ ಹುಣಸೆಹಣ್ಣಿಗೆ ಆಗುವ ವೆಚ್ಚವನ್ನು ಉಳಿಸುತ್ತಾರೆ. `ಹುಣಸೆ ತವರಿಗೆ ಹೋಗಲ್ಲ~ ಎಂಬ ಮಾತು ಜನಪದರಲ್ಲಿದೆ. ಹುಣಸೆ ಕಾಯನ್ನು ಉದುರಿಸುತ್ತಿದ್ದಂತೆಯೇ ಎಲೆ ಉದುರುತ್ತದೆ. ಅದಾದ ಸ್ವಲ್ಪ ದಿನಗಳಿಗೇ ಚಿಗುರೆಲೆಗಳು ಮೂಡುತ್ತವೆ. ಚಿಗುರಿನೊಂದಿಗೆ ಹೂಗಳು ಮೂಡುತ್ತವೆ.

ಅದರ ಹಿಂದೆಯೇ ಈಚುಗಳು ಮೂಡುತ್ತವೆ. ನಂತರ ಕಾಯಿಯಾಗುವ ಸರದಿ. ಹೀಗೆ ನಡೆಯುವ ಜೀವನ ಚಕ್ರದಲ್ಲಿ ಅದರ ತವರಿಗೆ ಹಿಂತಿರುಗುವ ಆಸೆ ಈಡೇರುವುದಿಲ್ಲವಂತೆ. ಹಿಂದೆ ದೂರದ ಊರುಗಳಿಗೆ ಹೋಗಲು ಇದ್ದ ತೊಂದರೆಗಳು ಮತ್ತು ರೈತರ ಮನೆಗಳಲ್ಲಿನ ಶ್ರಮ ಜೀವನದಲ್ಲಿ ಹೆಣ್ಣುಮಕ್ಕಳು ತವರಿಗೆ ಹಲವಾರು ವರ್ಷಗಳು ಹೋಗಲಾಗುತ್ತಿರಲಿಲ್ಲ. ಆಗ ಹುಣಸೆ ಮರಕ್ಕೆ ಅವರ ಜೀವನವನ್ನು ಹೋಲಿಸಿ ನುಡಿಗಟ್ಟನ್ನೇ ಸೃಷ್ಟಿಸಿದ್ದರು ಜನಪದರು. ಹುಣಸೆ ಮರವನ್ನು ದುಡಿಮೆಗೆ ಹೋಲಿಸುವುದರೊಂದಿಗೆ ಹಲವಾರು ಉಪಯುಕ್ತತೆಗೆ ಬಳಸಲಾಗುತ್ತದೆ. ಹುಣಸೆ ಕಾಯಿಯಲ್ಲಿ ತೊಕ್ಕನ್ನು ತಯಾರಿಸುತ್ತಾರೆ. ಜೀರಿಗೆ, ಮೆಣಸು, ಉಪ್ಪು, ಇಂಗು, ಹುಣಸೆ ಹಣ್ಣಿನೊಂದಿಗೆ ಬೆರೆಸಿ ಪಿತ್ತಕ್ಕೆ ಔಷಧಿ ತಯಾರಿಸಲಾಗುತ್ತದೆ. ಹುಣಸೆ ಚಿಗುರು ಒಗರು ಮತ್ತು ಹುಳಿಯ ರುಚಿ ಹೊಂದಿರುತ್ತದೆ.  `ಮಾವಿನ ಕಾಯಿಯ ಓಟೆ ಮೂಡುವ ಸಮಯದಲ್ಲಿ ಹುಣಸೆ ಚಿಗುರಲು ಪ್ರಾರಂಭವಾಗುತ್ತದೆ. ಇದರ ಕೆಂಪನೆಯ ಚಿಗುರು ನೋಡಲು ಬಲು ಆಕರ್ಷಕವಾಗಿರುತ್ತದೆ.  ಈಗಲೂ ಗ್ರಾಮೀಣ ಭಾಗದಲ್ಲಿ ಹುಣಸೆ ಚಿಗುರನ್ನು ವಿವಿಧ ಅಡುಗೆಗಳಲ್ಲಿ ಬಳಸುತ್ತಾರೆ.

 

ಅವರೆಬೇಳೆ ಹುಣಸೆ ಚಿಗುರಿನ ತೊವ್ವೆ, ಆಲೂಗಡ್ಡೆ ಬದನೆಕಾಯಿ ಹುಣಸೆಚಿಗುರಿನ ಹುಳಿ, ನುಗ್ಗೆಕಾಯಿಯ ಉಷ್ಣದ ಅಂಶವನ್ನು ಕಡಿಮೆ ಮಾಡಲು ಬೇಳೆಯೊಂದಿಗೆ ಹುಣಸೆ ಚಿಗುರು ಹಾಕಿ ಸಾರು ತಯಾರಿಸುತ್ತಾರೆ. ಹುಣಸೆ ಚಿಗುರನ್ನು ಒಣಗಿಸಿಟ್ಟುಕೊಂಡೂ ಬಳಸುತ್ತಾರೆ.

 

ಹುಣಸೆ ಚಿಗುರನ್ನು ಸ್ವಲ್ಪ ಎಣ್ಣೆಯಲ್ಲಿ ಕರಿದು ಒಗ್ಗರಣೆ ಹಾಕಿ ಅನ್ನದೊಂದಿಗೆ ಕಲಸಿ ತಿನ್ನುತ್ತಾರೆ. ತುಪ್ಪದಲ್ಲಿ ಹುರಿದರೆ ಇದರ ರುಚಿ ಇನ್ನೂ ಹೆಚ್ಚು. ಹಾಗೆಯೇ ಹುಣಸೆ ಹೂವನ್ನೂ ಸಹ~ ಎನ್ನುತ್ತಾರೆ ಗೃಹಿಣಿ ಲಕ್ಷ್ಮಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.