ಶಿಥಿಲಗೊಂಡ ವೀರಭದ್ರಸ್ವಾಮಿ ದೇಗುಲ

7

ಶಿಥಿಲಗೊಂಡ ವೀರಭದ್ರಸ್ವಾಮಿ ದೇಗುಲ

Published:
Updated:
ಶಿಥಿಲಗೊಂಡ ವೀರಭದ್ರಸ್ವಾಮಿ ದೇಗುಲ

‘ಹರ್ತಿಕೋಟೆ’ ತಾಲ್ಲೂಕಿನಲ್ಲಿಯೇ ಐತಿಹಾಸಿಕ ಮಹತ್ವ ಪಡೆದ ಗ್ರಾಮ. ಗ್ರಾಮದ ಯಾವ ದಿಕ್ಕಿನ ಕಡೆಗೆ ಕಣ್ಣು ಹಾಯಿಸಿದರೂ ದೇಗುಲಗಳೇ. ಒಟ್ಟು 101 ದೇವಸ್ಥಾನಗಳಿವೆ ಎನ್ನುವುದು ಗ್ರಾಮದ ಹಿರಿಯರ ಹೇಳಿಕೆ. ದೇಗುಲಗಳಲ್ಲದೆ ಶಿಲಾ ಶಾಸನಗಳು, ದೊಡ್ಡ ಹಾಗೂ ಚಿಕ್ಕ ಕೆರೆ, ಕಲ್ಲು ಬಾವಿಗಳು, ಪುಷ್ಕರಣಿ ಮೊದಲಾದವು ಇತಿಹಾಸಕಾರರಿಗೆ ಸಾಕಷ್ಟು ಕೆಲಸ ಕೊಡಬಲ್ಲವು.

ವೀರಭದ್ರಸ್ವಾಮಿ ಜಾತ್ರೆ:  ಕಳೆದ 97 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಗ್ರಾಮದ ವೀರಭದ್ರಸ್ವಾಮಿ ಜಾತ್ರೆ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ      ಆರಂಭವಾಗುತ್ತದೆ. ಏ. 22 ರವರೆಗೆ ಜಾತ್ರೆ ನಡೆಯಲಿದೆ. ಏ. 17 ರಂದು ಧ್ವಜಾರೋಹಣ ಮತ್ತು ಪಲ್ಲಕ್ಕಿ ಉತ್ಸವ, 18 ರಂದು ಅಗ್ನಿಗುಂಡ, ಬೆಳ್ಳಿ ಕವಚಧಾರಣೆ, 19 ರಂದು ಹೂವಿನ ತೇರು, 20 ರಂದು ದೊಡ್ಡ ರಥೋತ್ಸವ, 21 ರಂದು ವಸಂತೋತ್ಸವ, 22 ರಂದು ಕಂಕಣ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.

ದೊಡ್ಡ ರಥವನ್ನು ಚನ್ನಮ್ಮನಹಳ್ಳಿ, ಕಪಿಲೆಹಟ್ಟಿ, ಮಾರೇನಹಳ್ಳಿ, ಮುದಿಯಪ್ಪನಕೊಟ್ಟಿಗೆ, ಗೊಳಗೊಂಡನಹಳ್ಳಿಯ ಭಕ್ತರು ಹೂವಿನಿಂದ ಅಲಂಕರಿಸಿ, ಕೊಬ್ಬರಿ ಆರತಿ ಮಾಡಿದ ನಂತರ ರಥ ಎಳೆಯಲಾಗುತ್ತದೆ. ದೊಡ್ಡ ರಥ ಶಿಥಿಲಗೊಂಡಿದ್ದ ಕಾರಣ ಕಳೆದ ಏಳೆಂಟು ವರ್ಷಗಳಿಂದ ಚಿಕ್ಕ ರಥವನ್ನು ಎಳೆಯಲಾಗುತ್ತಿತ್ತು. ಆದರೆ ಕಳೆದ ವರ್ಷ ದೇವಿಗೆರೆ ವಂಶಸ್ಥರಾದ ರುದ್ರಜ್ಜ ಹಾಗೂ ಮುದ್ದಜ್ಜಿ ಸ್ಮರಣಾರ್ಥ ಪುನ: ದೊಡ್ಡ ರಥವನ್ನು ನೂತನವಾಗಿ ನಿರ್ಮಿಸಿದ್ದು, ಆ ಉತ್ಸವ ನೋಡುವುದೇ ಒಂದು ಚೆಂದ ಎಂದು ಶಿಕ್ಷಕ ಪಿ. ತಿಪ್ಪೇಸ್ವಾಮಿ ಹೇಳುತ್ತಾರೆ.

ಉತ್ತರಾಭಿಮುಖವಾಗಿ ನಿರ್ಮಾಣ ಮಾಡಿರುವ ವೀರಭದ್ರಸ್ವಾಮಿಯ ದೇಗುಲ ವಿಶಾಲವಾಗಿದ್ದು, ಗರ್ಭಗುಡಿಯಲ್ಲಿರುವ ವೀರಭದ್ರನ ವಿಗ್ರಹ ತುಂಬಾ ಆಕರ್ಷಕವಾಗಿದೆ. ಆದರೆ, ಹೊರಭಾಗದಿಂದ ದೇಗುಲ ನೋಡಿದವರಿಗೆ, ಕಲ್ಲಿನಿಂದ ನಿರ್ಮಿಸಿರುವ ಕಟ್ಟಡ ಎಲ್ಲಿ ಕುಸಿದು ಬೀಳುತ್ತದೋ ಎಂದು ಆತಂಕವಾಗುತ್ತದೆ. ಆದಷ್ಟು ಬೇಗ ಸರ್ಕಾರ ಹರ್ತಿಕೋಟೆ ಗ್ರಾಮದ ಕಡೆಗೆ ಕಣ್ಣು ಹಾಯಿಸಬೇಕು ಎನ್ನುವುದು ಭಕ್ತರ ಒತ್ತಾಯ.

ದನಗಳ ಜಾತ್ರೆ: ಜಾತ್ರೆಯ ಮತ್ತೊಂದು ವಿಶೇಷವೆಂದರೆ ದನಗಳ ಜಾತ್ರೆ. ಏ. 20 ರಿಂದ ಮೇ 4ರವರೆಗೆ ಈ ಬಾರಿಯ ಜಾತ್ರೆ ನಡೆಯಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ, ನೆರೆಯ ಆಂಧ್ರಪ್ರದೇಶದಿಂದಲೂ ರಾಸುಗಳನ್ನು ಕೊಳ್ಳಲು ಮತ್ತು ಮಾರಲು ರೈತರು ಬರುವುದುಂಟು. ಮುಂಗಾರು ಬಿತ್ತನೆ ಆರಂಭವಾಗುವ ಕೆಲವೇ ದಿನಗಳ ಮುಂಚೆ ಈ ಜಾತ್ರೆ ನಡೆಯುವ ಕಾರಣ ಇದಕ್ಕೆ ಹೆಚ್ಚು ಮಹತ್ವ ಇದೆ.

ಅಗ್ನಿಗುಂಡ: ದೇಗುಲದ ಮುಂಭಾಗದಲ್ಲಿ ದೊಡ್ಡ ಗುಂಡಿ ತೆಗೆದು, ತುಗ್ಗಲಿ ಮರದ ತುಂಡುಗಳನ್ನು ಗುಂಡಿಯಲ್ಲಿ ಹಾಕಿ ರಾತ್ರಿಯೆಲ್ಲ ಉರಿಸಿ, ನಿಗಿ ನಿಗಿ ಉರಿಯುವಂತಹ ಕೆಂಡ ಮಾಡಿ, ಬೆಳಗಿನ ಜಾವ 4 ರಿಂದ 5 ಗಂಟೆ ಸಮಯದಲ್ಲಿ ಕೆಂಡ ಹಾಯುವ ದೃಶ್ಯ ರೋಮಾಂಚಕಾರಿಯಾಗಿರುತ್ತದೆ. ಪಿ.ಆರ್. ತಿಪ್ಪೇಸ್ವಾಮಿಯವರಂತಹ ಕಲಾವಿದರು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹತ್ತಾರು ವೀರರು, ಜನಪದ ಕಲಾವಿದರು, ಸಾಹಿತಿಗಳು, ಛಾಯಾ ಚಿತ್ರಗಾರರು, ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಗಣ್ಯರ ದಂಡೇ ಈ ಗ್ರಾಮದಲ್ಲಿದೆ. ನೋವಿನ ಸಂಗತಿ ಎಂದರೆ ರಾಜಕೀಯವಾಗಿ ಅತ್ಯಂತ ಪ್ರಬಲವಾಗಿದ್ದರೂ, ಗ್ರಾಮಕ್ಕೆ ಬೇಕಿರುವ ಸೌಲಭ್ಯ ಪಡೆಯುವಲ್ಲಿ ಇಲ್ಲಿನ ಜನ ಹಿಂದೆ ಬಿದ್ದಿರುವುದು.

ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಶಿಥಿಲಗೊಂಡಿರುವ ದೇಗುಲಗಳ ಜೀರ್ಣೋದ್ಧಾರ, ಹೂಳು ಹಾಗೂ ಬಳ್ಳಾರಿ ಜಾಲಿ ಮುಳ್ಳಿನಿಂದ ಇತಿಹಾಸ ಸೇರುತ್ತಿರುವ ಕೆರೆಗಳ ಸಂರಕ್ಷಣೆ ಮಾಡುವ ಕೆಲಸಗಳು ತುರ್ತಾಗಿ ಆಗಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry