ಶುಕ್ರವಾರ, ಏಪ್ರಿಲ್ 23, 2021
31 °C

ಶಿಥಿಲಾವಸ್ಥೆಯಲ್ಲಿ ನಿಜಾಮರ ಸೇತುವೆ

ಪ್ರಜಾವಾಣಿ ವಾರ್ತೆ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕಮಲಾಪುರ: ಗುಲ್ಬರ್ಗ ತಾಲ್ಲೂಕಿನ ಕುರಿಕೋಟಾದ ಸ್ವಾತಂತ್ರ್ಯ ಪೂರ್ವದ `ನಿಜಾಮರ ಕಾಲದ ಸೇತುವೆ~ಯ ಆಧಾರದ ಕಮಾನಿನ ಕಲ್ಲುಗಳು ಉದುರಿ ಬೀಳುತ್ತಿದ್ದು, ಬೀದರ್-ಗುಲ್ಬರ್ಗ ಸಂಚಾರಕ್ಕೆ ಮಂಗಳವಾರವೂ ತೊಡಕಾಗಿದೆ. 10 ಟನ್‌ಗಿಂತ ಹೆಚ್ಚುವರಿ ಭಾರದ ವಾಹನಗಳ ಸಂಚಾರ ನಿಷೇಧಿಸಲಾಗಿದೆ.ಬೀದರ್ -ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 218ರ ಕುರಿಕೋಟಾ ಬಳಿ ಬೆಣ್ಣೆತೊರಾಗೆ ಸೇತುವೆ ನಿರ್ಮಿಸಲಾಗಿದೆ. ಈಗ ಭಾರಿ ವಾಹನಗಳನ್ನು ತಾವರಗೇರಾ-ಅರಸೂರ-ನಾಗೂರ-ಮಹಾಗಾಂವ ಮೂಲಕ ಸುಮಾರು 28 ಕಿ.ಮೀ. ಹೆಚ್ಚುವರಿ ದೂರದ ಬದಲಿ ಮಾರ್ಗದಲ್ಲಿ ಕಳುಹಿಸಿಕೊಡಲಾಗುತ್ತಿದೆ. ಸಂಚಾರ ನಿಯಂತ್ರಿಸಲು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ. ಪೊಲೀಸ್ ವೃತ್ತ ನಿರೀಕ್ಷಕಿ ವಿಜಯಲಕ್ಷ್ಮೀ ಹಾಗೂ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.ನಿಜಾಮರ ಸೇತುವೆ:  ಸೇತುವೆಗೆ ಏಳು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ. ಸಿಮೆಂಟ್ ಬರುವ ಮೊದಲೇ ನಿರ್ಮಾಣಗೊಂಡಿತ್ತು. ಎತ್ತಿನ ಗಾಣದಲ್ಲಿ ಸುಣ್ಣದ ಕಲ್ಲು, ಬೆಲ್ಲ, ಮರಳು ಮತ್ತಿತರ ಕಚ್ಛಾವಸ್ತು ಹಾಕಿ ಸಿದ್ಧಪಡಿಸಿದ `ಗಚ್ಚು~ ಬಳಸಿಕೊಂಡು ಕಲ್ಲುಗಳನ್ನು ಪರ್ಷಿಯನ್ ಮಾದರಿಯ ಕಮಾನು ಶೈಲಿಯಲ್ಲಿ ಜೋಡಿಸಲಾಗಿದೆ. ನಿಜಾಮರ ಆಡಳಿತದಲ್ಲಿ ಗುಲ್ಬರ್ಗ- ಹೈದರಾಬಾದ್ ಸಂಪರ್ಕಕ್ಕಾಗಿ ಅಂದು ಸೇತುವೆ ನಿರ್ಮಾಣಗೊಂಡಿರಬಹುದು ಎನ್ನಲಾಗಿದೆ. `ಅಂದಿನ ಕಾಲಕ್ಕೆ ಅದೊಂದು ಎಂಜಿನಿಯರ್ ಸಾಹಸ~ ಎನ್ನುತ್ತಾರೆ ತಜ್ಞರು.`ನೂತನ~ ಸೇತುವೆ: ಶಿಥಿಲಗೊಂಡ ಸೇತುವೆಗೆ ಪರ್ಯಾಯವಾಗಿ 2004-05 ರಲ್ಲಿ 7.79 ಕೋಟಿ ರೂಪಾಯಿಯಲ್ಲಿ ನೂತನ ಸೇತುವೆ ನಿರ್ಮಿಸಲು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಯೋಜಿಸಿತ್ತು. 3.15 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿ ಸ್ವಲ್ಪ ಕಾಮಗಾರಿಯೂ ನಡೆದಿತ್ತು. ಈ ನಡುವೆ `ಗುತ್ತಿಗೆದಾರರ ಕಳಪೆ ಕಾಮಗಾರಿ~ ದೂರು ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ಕಾಮಗಾರಿ ಅರ್ಧಕ್ಕೆ ನೆನೆಗುದಿಗೆ ಬಿತ್ತು.ಅಲ್ಲದೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಈ ರಸ್ತೆಗಳು ಸೇರ್ಪಡೆಗೊಂಡವು. ಆ ಬಳಿಕ ಕೇಂದ್ರದ ಮುಖಂಡರು ಹಾಗೂ ಬೀದರ್ ಮತ್ತು ಗುಲ್ಬರ್ಗ ಲೋಕಸಭಾ ಸದಸ್ಯರು ಮುತುವರ್ಜಿ ವಹಿಸದ ಕಾರಣ ಎರಡೂ ಜಿಲ್ಲೆಯ `ಸಂಪರ್ಕ ಯೋಜನೆ~ ನೆನೆಗುದಿಗೆ ಬಿತ್ತು ಎನ್ನುತ್ತವೆ ಮೂಲಗಳು. ಶಿಥಿಲಗೊಂಡ ಸೇತುವೆ ಬಗ್ಗೆ ಮಾಧ್ಯಮಗಳಲ್ಲಿ ಹಲವು ವರದಿಗಳು ಬಂದರೂ ಆಡಳಿತ ಎಚ್ಚೆತ್ತುಕೊಂಡಿರಲಿಲ್ಲ.`ಲೋಕ~ ಮಾರ್ಗಕ್ಕೆ ಕುತ್ತು: ಈಗ ಬಳಸುತ್ತಿರುವ 28 ಕಿ.ಮೀ. ಹೆಚ್ಚುವರಿ ಬದಲಿ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದ್ದು, ಸಂಚಾರ ದಟ್ಟಣೆ ಹಾಗೂ ಭಾರ ತಡೆದುಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯಷ್ಟು ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಈ ರಸ್ತೆಯೂ ಶಿಥಿಲಗೊಳ್ಳುವ ಅಪಾಯವಿದೆ.`ಬದಲಿ ಮಾರ್ಗವು ಶಿಥಿಲಗೊಳ್ಳದ ಹಾಗೆ ಕಾಪಾಡುವ ಬಗ್ಗೆ ಲೋಕೋಪಯೋಗಿ ಇಲಾಖೆ ಅಧ್ಯಯನ ನಡೆಸುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಲು ಕಾರ್ಯಪ್ರವೃತ್ತರಾಗಿದ್ದೇವೆ~ ಎಂದು ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜಿಯರ್ ಐ.ಎಸ್.ಮಹಾಗಾಂವ್ಕರ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.ಸಂಚಾರ ಅಸ್ತವ್ಯಸ್ತ: ಸೇತುವೆ ದುರಸ್ತಿಗಾಗಿ ಭೂಪಾಲ ಹಾಗೂ ಬೆಂಗಳೂರಿನಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ  ತಜ್ಞ ಎಂಜಿನಿಯರ್ ಆಗಮಿಸುತ್ತಿದ್ದು, ಪರಿಶೀಲನೆ ಬಳಿಕ ವರದಿ ನೀಡಲಿದ್ದಾರೆ. ಆದರೆ ಒಟ್ಟಾರೆ ಕಾಮಗಾರಿ ಒಂದು ತಿಂಗಳ ಕಾಲ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಬೀದರ್-ಗುಲ್ಬರ್ಗ ಸಂಚಾರ ದುಸ್ತರವಾಗಲಿದೆ ಎನ್ನುತ್ತವೆ ಮೂಲಗಳು. ಎನ್‌ಎಚ್‌ಎಐ ಎಂಜಿನಿಯರ್ ಎಸ್. ಎಸ್. ಬಿರಾದಾರ ಹಾಗೂ ದೇವಿದಾಸ ಚವ್ಹಾಣ ಹಾಗೂ ಲೋಕೋಪಯೋಗಿ ಎಂಜಿನಿಯರ್‌ಗಳು ಸೋಮವಾರ ಸೇತುವೆ ಪರಿಶೀಲನೆ ಮಾಡಿದರು. ಒಂದೆಡೆ ಇನ್ನೂ ಮುಗಿಯದ ಗುಲ್ಬರ್ಗ-ಬೀದರ್ ರೈಲ್ವೆ ಹಳಿ ಕಾಮಗಾರಿ, ಇನ್ನೊಂದೆಡೆ ಅಪಾಯಕಾರಿಯಾಗಿರುವ ಸೇತುವೆ ಮತ್ತು ನೆನೆಗುದಿ ಬಿದ್ದ ಹೊಸ ಸೇತುವೆಯ ಮಧ್ಯೆ ಬೀದರ್-ಗುಲ್ಬರ್ಗ ಬಾಂಧವ್ಯಕ್ಕೆ ಪೆಟ್ಟು ಬಿದ್ದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.