ಶಿಫಾರಸು ಪಾಲನೆ ಮಾಡಿ - ರಾಜ್ಯಪಾಲರಿಗೆ ಮುಖ್ಯಮಂತ್ರಿ ತಾಕೀತು

7

ಶಿಫಾರಸು ಪಾಲನೆ ಮಾಡಿ - ರಾಜ್ಯಪಾಲರಿಗೆ ಮುಖ್ಯಮಂತ್ರಿ ತಾಕೀತು

Published:
Updated:

ಬೆಂಗಳೂರು: `ಲೋಕಾಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಿಲ್ಲ. ರಾಜ್ಯ ಸರ್ಕಾರ ಶಿಫಾರಸು ಮಾಡಿದವರನ್ನೇ ರಾಜ್ಯಪಾಲರು ಲೋಕಾಯುಕ್ತರನ್ನಾಗಿ ನೇಮಕ ಮಾಡುವುದು ಕಡ್ಡಾಯ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗುರುವಾರ ವಿಧಾನ ಪರಿಷತ್ತಿನಲ್ಲಿ ಹೇಳಿದರು.ನ್ಯಾಯಮೂರ್ತಿ ಬನ್ನೂರಮಠ ಅವರ ಹೆಸರನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವೇ ಇಲ್ಲ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿಕೆ ನೀಡಿದ ನಂತರ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿರುವುದು ಲೋಕಾಯುಕ್ತರ ನೇಮಕ ಇನ್ನಷ್ಟು ಕಗ್ಗಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ.ಲೋಕಾಯುಕ್ತರ ನೇಮಕ ವಿಳಂಬ ಧೋರಣೆ ವಿರುದ್ಧ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಜೆಡಿಎಸ್ ನಿಯಮ 59ರಡಿ ಮಂಡಿಸಿದ ನಿಲುವಳಿ ಸೂಚನೆ ಮೇಲೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದರು.`ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಬೇಕೆಂಬ ಯಾವುದೇ ಇರಾದೆ ಸರ್ಕಾರಕ್ಕಿಲ್ಲ. ಇಲ್ಲವೇ ಲೋಕಾಯುಕ್ತರ ನೇಮಕಕ್ಕೆ ಕಾಲಹರಣ ಮಾಡಿ ಸಂಸ್ಥೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಕೆಂಬ ದುರುದ್ದೇಶವೂ ಇಲ್ಲ~ ಎಂದು ಸ್ಪಷ್ಟಪಡಿಸಿದರು.`ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಧಿಕಾರ ಅವಧಿ ಮುಕ್ತಾಯಗೊಂಡ ತಕ್ಷಣವೇ ಸರ್ಕಾರ ಹೊಸ ಲೋಕಾಯುಕ್ತರನ್ನು ನೇಮಿಸುವ ಪ್ರಕ್ರಿಯೆಗಳನ್ನು ನಡೆಸಿದೆ. 1986ರಿಂದ ಇದುವರೆಗಿನ ಮುಖ್ಯಮಂತ್ರಿಗಳು ಹಾಗೂ ಸರ್ಕಾರಗಳು ಯಾವ ನಿಯಮಗಳನ್ವಯ ಪ್ರಕ್ರಿಯೆಗಳನ್ನು ನಡೆಸಿವೆಯೋ ಅದೇ ರೀತಿ ನಮ್ಮ ಸರ್ಕಾರ ಕೂಡ ಹೊಸ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಪೂರೈಸಿದೆ. ಇದರಲ್ಲಿ ಯಾವುದೇ ಲೋಪ ನಡೆದಿಲ್ಲ~ ಎಂದರು. ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ. ಇನ್ನು ರಾಜ್ಯಪಾಲರ ಕಚೇರಿಯ ನಡವಳಿಕೆಗಳ ಬಗ್ಗೆಯೂ ಸದನದಲ್ಲಿ ಚರ್ಚಿಸಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ನಿಲುವಳಿ ಸೂಚನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.`ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಇತರರ ಜತೆ ಸಮಾಲೋಚನೆ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಲೋಕಾಯುಕ್ತರ ನೇಮಕಕ್ಕೆ ಸೂಕ್ತ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಬಹುದು. ನಾವು ಶಿಫಾರಸು ಮಾಡಿದವರನ್ನೇ ರಾಜ್ಯಪಾಲರು ಒಪ್ಪುವುದು ಕೂಡ ಕಡ್ಡಾಯ~ ಎಂದು ಅವರು ಕರ್ನಾಟಕ ಲೋಕಾಯುಕ್ತ ಕಾಯ್ದೆ 3 (2) (ಎ) ಕಲಂ ಉಲ್ಲೇಖಿಸಿ ಹೇಳಿದರು.ಗುಜರಾತ್‌ನಲ್ಲಿ ಲೋಕಾಯುಕ್ತರ ನೇಮಕ ವಿಳಂಬದಿಂದ ಅಲ್ಲಿನ ರಾಜ್ಯಪಾಲರೇ ಹೊಸ ಲೋಕಾಯುಕ್ತರನ್ನು ನೇಮಕ ಮಾಡಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, `ಗುಜರಾತ್ ಲೋಕಾಯುಕ್ತ ನಿಯಮಗಳೇ ಬೇರೆ. ಕರ್ನಾಟಕ ಲೋಕಾಯುಕ್ತ ನಿಯಮಗಳೇ ಬೇರೆ. ಹೀಗಾಗಿ, ನಾವು ಶಿಫಾರಸು ಮಾಡಿದವರ ಹೆಸರನ್ನೇ ರಾಜ್ಯಪಾಲರು ಒಪ್ಪುವುದು ಅನಿವಾರ್ಯವಾಗಿದೆ. ಈ ಅವಕಾಶ ಕಾನೂನಿನಲ್ಲೇ ಇದೆ~ ಎಂದು ತಿಳಿಸಿದರು.ಸಭಾತ್ಯಾಗ: ಮುಖ್ಯಮಂತ್ರಿಗಳು ಉತ್ತರ ನೀಡಿದ ನಂತರ ಸಭಾಪತಿ ಡಿ.ಎಚ್. ಶಂಕರಮೂರ್ತಿ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು. ಈ ಕ್ರಮವನ್ನು ಪ್ರತಿಭಟಿಸಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್‌ನ ಹಿರಿಯ ಸದಸ್ಯ ಎಂ.ಸಿ. ನಾಣಯ್ಯ, `ನ್ಯಾಯಮೂರ್ತಿ ಬನ್ನೂರಮಠ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಬೇರೆಯವರ ಹೆಸರನ್ನು ಶಿಫಾರಸು ಮಾಡಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ದೃಢ ನಿರ್ಧಾರ ಕೈಗೊಳ್ಳಬೇಕು~ ಎಂದು  ಒತ್ತಾಯಿಸಿದರು.`ಲೋಕಾಯುಕ್ತರ ಹುದ್ದೆ ಖಾಲಿ ಇರುವುದರಿಂದ ರಾಜಕೀಯ ವ್ಯಕ್ತಿಗಳು ಹಾಗೂ ಇತರರು ಲೋಕಾಯುಕ್ತ ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿ, ಪೊಲೀಸರು ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ `ಬಿ~ ವರದಿ ಸಲ್ಲಿಸುತ್ತಿದ್ದಾರೆ~ ಎಂದು ಅವರು ಆರೋಪಿಸಿದರು. ಇದಕ್ಕೂ ಮುನ್ನ, ಪ್ರಶ್ನೋತ್ತರ ವೇಳೆಯಲ್ಲಿಯೂ ಮುಖ್ಯಮಂತ್ರಿಗಳು ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry