ಶಿಮ್ಲಾ ಸೇಬಿಗೆ ಆಲಿಕಲ್ಲಿನ ಕಷ್ಟ-200 ಕೋಟಿ ನಷ್ಟ!

7

ಶಿಮ್ಲಾ ಸೇಬಿಗೆ ಆಲಿಕಲ್ಲಿನ ಕಷ್ಟ-200 ಕೋಟಿ ನಷ್ಟ!

Published:
Updated:

ಶಿಮ್ಲಾ(ಐಎಎನ್‌ಎಸ್): ಮೂರು ಆ್ಯಪಲ್‌ಗಳು ಪ್ರಪಂಚವನ್ನು ಬದಲಿಸಿದ ಕಥೆ ಕೇಳಿರಬಹುದು. ಆ್ಯಡಂನ ಆ್ಯಪಲ್, ನ್ಯೂಟನ್‌ನ ಆ್ಯಪಲ್ ಮತ್ತು ಸ್ಟೀವ್ ಜಾಬ್ಸ್‌ನ ಆ್ಯಪಲ್! ಈಗಿನದು  ಹಿಮಾಚಲ ಪ್ರದೇಶದ ಆ್ಯಪಲ್‌ನ ಕಥೆ! ತಿನ್ನಲು ಸ್ವಾಧಿಷ್ಟಕರವಾದ, ನೋಡಲು ಮೋಹಕವಾದ ಇಲ್ಲಿನ ಸೇಬುಗಳು ಈ ವರ್ಷ ಆಲಿಕಲ್ಲು ಮಳೆಗೆ ತುತ್ತಾಗಿವೆ. ಇದರಿಂದ ಅಂದಾಜು ರೂ200 ಕೋಟಿಯಷ್ಟು ಹಾನಿಯಾಗಿದೆ ಎಂದು  ಇಲ್ಲಿನ ತೋಟಗಾರಿಕೆ  ಇಲಾಖೆ ತಿಳಿಸಿದೆ.ಹಿಮಾಚಲ ಪ್ರದೇಶದ ಆರ್ಥಿಕತೆ ಮುಖ್ಯವಾಗಿ ತೋಟಗಾರಿಕೆ, ಪ್ರವಾಸೋದ್ಯಮ ಮತ್ತು ಜಲವಿದ್ಯುತ್   ವಲಯವನ್ನು ಅವಲಂಬಿಸಿದೆ. ಇಲ್ಲಿಂದ ಪ್ರತಿ ವರ್ಷ ರೂ 2 ಸಾವಿರ ಕೋಟಿ ಮೌಲ್ಯದ ಸೇಬು ರಫ್ತಾಗುತ್ತದೆ. 1950-60ರಲ್ಲಿ 400 ಹೇಕ್ಟೇರ್‌ನಷ್ಟಿದ್ದ ಸೇಬು ಬೆಳೆಯುವ ಪ್ರದೇಶ 2010-11ರ ವೇಳೆಗೆ 1,01,485 ಹೇಕ್ಟೇರ್‌ಗೆ ವಿಸ್ತರಿಸಿದೆ ಎಂಬುದು ಆರ್ಥಿಕ ಸಮೀಕ್ಷಾ ವರದಿಯ ಮಾಹಿತಿ.ಶಿಮ್ಲಾ ಜಿಲ್ಲೆಯ ಜುಬಲ್, ರೋಹ್ರು, ಥಿಯೋಗ್ ಮತ್ತು ನರ್ಕಂಡಾ ಪ್ರದೇಶಗಳಲ್ಲಿ ಸೇಬು ಬಲಿಯುವ ಮುನ್ನವೇ ಆಲಿಕಲ್ಲು ಮಳೆ ಸುರಿದಿದ್ದು, ಮರದಲ್ಲಿಯೇ ಕೊಳೆತು ನೆಲಕ್ಕೆ ಬೀಳುತ್ತಿವೆ. ಕೇಂದ್ರ ಸರ್ಕಾರ ಆಲಿಕಲ್ಲು ಹಾನಿ ವಿಚಾರವನ್ನು ನೈಸರ್ಗಿಕ ವಿಕೋಪ ಪಟ್ಟಿಗೆ ಸೇರಿಸಬೇಕು ಎನ್ನುವುದು ಈ ಭಾಗದ ಸೇಬು ಬೆಳೆಗಾರರ ಆಗ್ರಹ.ಹಿಮ ನಿರಂತರ ಸುರಿಯುತ್ತಿರುವುದು ಪರಾಗಸ್ಪರ್ಶ ಕ್ರಿಯೆಗೆ ಅಡ್ಡಿಯಾಗಿದೆ. ಇದು ಒಟ್ಟಾರೆ ಇಳುವರಿ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಇಲ್ಲಿನ ಅರಣ್ಯ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ವೈ.ಎಸ್. ಭಾರಧ್ವಜ್.ಆಲಿಕಲ್ಲು ಮಳೆ ಮತ್ತು ಹಿಮ ಚೆರ‌್ರಿ ಹಣ್ಣಿನ ಇಳುವರಿ ಮೇಲೂ ತೀವ್ರ ಹಾನಿ ಉಂಟು ಮಾಡಿದೆ.2010ರಲ್ಲಿ ಬಂಪರ್ ಬೆಲೆಯೂ ಲಭಿಸಿತ್ತು. 4.46 ಕೋಟಿ ಚೀಲಗಳಷ್ಟು ಸೇಬು ರಫ್ತು ಮಾಡಲಾಗಿತ್ತು  ಎನ್ನುತ್ತಾರೆ ನರ್‌ಕಂಡ  ಪ್ರದೇಶದ ಸೇಬು ಬೆಳೆಗಾರ ಹೇಮಂತ್ ಚೌವಾಣ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry