ಶಿರಡಿಗೆ ಹೋಗುತ್ತಿದ್ದ ಬಸ್ಸು ಹಳ್ಳಕ್ಕೆ: 32 ಜನರ ದಾರುಣ ಸಾವು

7

ಶಿರಡಿಗೆ ಹೋಗುತ್ತಿದ್ದ ಬಸ್ಸು ಹಳ್ಳಕ್ಕೆ: 32 ಜನರ ದಾರುಣ ಸಾವು

Published:
Updated:
ಶಿರಡಿಗೆ ಹೋಗುತ್ತಿದ್ದ ಬಸ್ಸು ಹಳ್ಳಕ್ಕೆ: 32 ಜನರ ದಾರುಣ ಸಾವು

ಮುಂಬೈ (ಐಎಎನ್ಎಸ್): ಶಿರಡಿಗೆ ಯಾತ್ರಿಗಳನ್ನು ಒಯ್ಯುತ್ತಿದ್ದ ಖಾಸಗಿ ಬಸ್ಸೊಂದು ಒಸ್ಮಾನಾಬಾದ್ ಪಟ್ಟಣದ ಸಮೀಪ ಶನಿವಾರ ನಸುಕಿನಲ್ಲಿ ನದಿ ಸೇತುವೆಯಿಂದ ಹಳ್ಳಕ್ಕೆ ಉರುಳಿದ ಪರಿಣಾಮವಾಗಿ ಕನಿಷ್ಠ 32 ಜನ ಮೃತರಾಗಿ 15 ಜನ ಗಾಯಗೊಂಡಿದ್ದಾರೆ.ಮುಂಬೈಯಿಂದ ಸುಮಾರು 450 ಕಿ.ಮೀ. ದೂರದಲ್ಲಿರುವ  ಒಸ್ಮಾನಾಬಾದ್ ಪಟ್ಟಣದಲ್ಲಿ ನಸುಕಿನಲ್ಲಿ ಸಂಭವಿಸಿದ ಈ ಅಪಘಾತದಲ್ಲಿ 32 ಮಂದಿ ಮೃತರಾಗಿದ್ದು, ಗಾಯಾಳುಗಳೆಲ್ಲರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾವೇಶ್ವರಿ ಟ್ರಾವೆಲ್ಸ್ ಗೆ ಸೇರಿದ ನತದೃಷ್ಟ ಬಸ್ಸು ನಸುಕಿನ 2.30ರ ವೇಳೆಗೆ ದುರಂತಕ್ಕೆ ಈಡಾದಾಗ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಯಾತ್ರಾ ಕೇಂದ್ರವಾದ ಶಿರಡಿಯತ್ತ ಪಯಣ ಹೊರಟಿತ್ತು ಎಂದು ಒಸ್ಮಾನಾಬಾದ್ ಪೊಲೀಸರು ಹೇಳಿದರು.ಪ್ರತ್ಯಕ್ಷದರ್ಶಿಗಳ ಪ್ರಕಾರ ಬಸ್ಸು ಸೇತುವೆಯಿಂದ 30 ಅಡಿ ಆಳಕ್ಕೆ ಬೀಳುವ ಮೊದಲು ಅಗ್ನಿಗಾಹುತಿಯಾಗಿ ನಾಲ್ಕೈದು ಪಲ್ಟಿ ಹೊಡೆಯಿತು ಎಂದು ಹೇಳಲಾಗಿದೆ. ಒಸ್ಮಾನಾಬಾದಿನಿಂದ 40 ಕಿ.ಮೀ. ದೂರದಲ್ಲಿರುವ ಜಾಕೋಡ್ ಗ್ರಾಮದ ಬಳಿ, ಹೈದರಾಬಾದ್- ಸೋಲಾಪುರ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿತು. ಸಂತ ಸತ್ಯಸಾಯಿಬಾಬಾ ದೇವಸ್ಥಾನದೆಡೆಗೆ ಬಸ್ಸು ಹೊರಟಿತ್ತು.ಬಸ್ಸಿನ ಚಾಲಕ ಪಾನಮತ್ತನಾಗಿ ಅತಿವೇಗದಿಂದ ಬಸ್ಸು ಓಡಿಸಿದ್ದೇ ಈ ಭೀಕರ ದುರಂತಕ್ಕೆ ಕಾರಣವಾಯಿತು ಎಂದು ಬದುಕುಳಿದ ಕೆಲವು ಪ್ರಯಾಣಿಕರು ಪತ್ರಕರ್ತರಿಗೆ ತಿಳಿಸಿದರು.ಗಾಯಾಳುಗಳನ್ನು ಒಸ್ಮಾನಾಬಾದ್, ಸೋಲಾಪುರ, ಲಾತೂರು ಮತ್ತಿತರ ನೆರೆಯ ಪಟ್ಟಣಗಳ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಮೃತರ ಗುರುತು ಪತ್ತೆಗೆ ತೀವ್ರ ಯತ್ನ ನಡೆಸಲಾಗುತ್ತಿದೆ.ರಾಜ್ಯದಲ್ಲಿ ಸಂಭವಿಸಿದ ಈವರೆಗಿನ ರಸ್ತೆ ಅಪಘಾತಗಳಲ್ಲೇ ಇದು ಅತ್ಯಂತ ಭೀಕರವಾದುದು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ. ಅಪಘಾತಕ್ಕೆ ಕಾರಣವೇನೆಂದು ಇನ್ನೂ ಪತ್ತೆ ಹಚ್ಚಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry