ಭಾನುವಾರ, ಏಪ್ರಿಲ್ 11, 2021
33 °C

ಶಿರಡಿಯಲ್ಲಿ ಬೃಹತ್ ಭಕ್ತ ನಿವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಪ್ರಸಿದ್ಧ ಯಾತ್ರಾ ಸ್ಥಳ ಶಿರಡಿ ಸಾಯಿಬಾಬಾ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಚೆನ್ನೈ ಮೂಲದ ಶಿರಡಿ ಸಾಯಿ ಟ್ರಸ್ಟ್, 110 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಬೃಹತ್ ವಸತಿ ಸಂಕೀರ್ಣಗಳನ್ನು ನಿರ್ಮಿಸಿದೆ. ಹದಿನಾಲ್ಕು ಸಾವಿರ ಭಕ್ತರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವ ಈ ವಸತಿ ಸಂಕೀರ್ಣಗಳನ್ನು ಶ್ರೀ ಸಾಯಿ ಸಂಸ್ಥಾನವೇ (ಮಹಾರಾಷ್ಟ್ರ ಸರ್ಕಾರದ ಟ್ರಸ್ಟ್) ನಿರ್ವಹಿಸಲಿದೆ.ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶುಕ್ರವಾರ (ನ. 16) ಈ ವಸತಿ ಸಂಕೀರ್ಣಗಳನ್ನು ಉದ್ಘಾಟಿಸಲಿದ್ದಾರೆ.

`ಸಾಯಿ ಆಶ್ರಮ- 1~ರಲ್ಲಿ 9,000 ಭಕ್ತರು ವಾಸ್ತವ್ಯ ಮಾಡಬಹುದಾದ 1,536 ಕೊಠಡಿಗಳಿವೆ. ಈ ಪೈಕಿ 384 ಕೊಠಡಿಗಳು ಹವಾನಿಯಂತ್ರಿತ ಸೌಕರ್ಯ ಹೊಂದಿವೆ. `ಸಾಯಿ ಆಶ್ರಮ- 2~ರಲ್ಲಿ 5,000 ಭಕ್ತರು ತಂಗಬಹುದಾದ 192 ಡಾರ್ಮಿಟರಿಗಳಿವೆ.ಎರಡೂ ಸಂಕೀರ್ಣಗಳ ನಡುವೆ ಸುಮಾರು 2000 ಭಕ್ತರು ಕುಳಿತುಕೊಳ್ಳಬಹುದಾದ ಬಯಲು ರಂಗ ಮಂದಿರವಿದೆ. ಇಲ್ಲಿ ಸಾಯಿ ಕೀರ್ತನೆ, ಭಜನೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. ಆಶ್ರಮದ ಆವರಣದಲ್ಲಿ 1350 ಮರಗಳಿವೆ. 50,000 ಗಿಡಗಳನ್ನು ನೆಡಲಾಗಿದೆ. 27,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಹುಲ್ಲು ಹಾಸನ್ನು ಹಾಕಲಾಗಿದೆ.ಸಾಯಿ ಆಶ್ರಮಕ್ಕಾಗಿ ಸಂಸ್ಥಾನವು 19.68 ಎಕರೆ ವಿಸ್ತೀರ್ಣದ ಜಾಗವನ್ನು ನೀಡಿತ್ತು. ಒಟ್ಟು 9.60 ಲಕ್ಷ ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಈ ಎರಡೂ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಈ ಸಂಕೀರ್ಣಗಳ ನಿರ್ಮಾಣ ವೆಚ್ಚವನ್ನು ಸಾಫ್ಟ್‌ವೇರ್ ಉದ್ಯಮಿ ಕೆ.ವಿ.ರಮಣಿ ಅವರು ಸ್ಥಾಪಿಸಿರುವ ಶಿರಡಿ ಸಾಯಿ ಟ್ರಸ್ಟ್ ಸಂಪೂರ್ಣವಾಗಿ ಭರಿಸಿದೆ. ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸದೇ, ಸ್ವಂತ ಸಂಪನ್ಮೂಲಗಳಿಂದಲೇ ಕ್ರೋಡೀಕರಿಸಿ ವಿನಿಯೋಗಿಸಿದೆ.ರಮಣಿ ಅವರು ತಮ್ಮ ಉದ್ಯಮ ಸಂಸ್ಥೆಗಳಿಂದ ಗಳಿಸುವ ಲಾಭದಲ್ಲಿ ಶೇಕಡಾ 80ರಷ್ಟನ್ನು ಟ್ರಸ್ಟ್ ಕಾರ್ಯ ಚಟುವಟಿಕೆಗಳಿಗಾಗಿಯೇ ವಿನಿಯೋಗಿಸುತ್ತಿದ್ದಾರೆ. ಉಳಿದ ಶೇ 20ರಷ್ಟನ್ನು ಮಾತ್ರ ಕುಟುಂಬಕ್ಕಾಗಿ ಇರಿಸಿಕೊಳ್ಳುತ್ತಿದ್ದಾರೆ.ಸಾಯಿ ಬಾಬಾರ ಸಂದೇಶ ಪ್ರಸಾರ, ಸಾಯಿ ಮಂದಿರಗಳ ನಿರ್ಮಾಣಕ್ಕೆ ನೆರವು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ, ಬಡ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ನೆರವು, ನಿರ್ಗತಿಕ ಮಕ್ಕಳಿಗೆ ಶಾಲೆ- ಇವೇ ಮೊದಲಾದ ಸೇವಾ ಕಾರ್ಯದಲ್ಲಿ ಟ್ರಸ್ಟ್ ತೊಡಗಿಸಿಕೊಂಡಿದೆ.ಈ ಸಂಕೀರ್ಣಗಳಿಗೆ ಸಂಸ್ಥಾನವು 45 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ, ನಡಿಗೆ ಪಥ, ವಿದ್ಯುತ್, ಬೀದಿ ದೀಪ, ನೀರು ಪೂರೈಕೆ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಿದೆ ಎಂದು ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಮೋಹನ್ ಯಾದವ್ `ಪ್ರಜಾವಾಣಿ~ಗೆ ತಿಳಿಸಿದರು.

ಆನ್‌ಲೈನ್ ಬುಕ್ಕಿಂಗ್ ಸೌಕರ್ಯ: ಶ್ರೀ ಸಾಯಿ ಸಂಸ್ಥಾನದ ವಸತಿ ಗೃಹಗಳಲ್ಲಿ ಕೊಠಡಿಗಳನ್ನು ಆನ್‌ಲೈನ್ ಮೂಲಕವೂ ಬಾಡಿಗೆಗೆ ಕಾಯ್ದಿರಿಸಬಹುದು. ಶಿರಡಿ ಸಾಯಿ ಮಂದಿರದಲ್ಲಿ ನಿತ್ಯ ದರ್ಶನ, ಕಾಕಡಾರತಿ, ಮಧ್ಯಾಹ್ನದ ಆರತಿ, ದೂಪದಾರತಿ ಮೊದಲಾದ ಸೇವೆಗಳಿಗೂ ಆನ್‌ಲೈನ್ ಮೂಲಕವೇ ಕಾಯ್ದಿರಿಸುವ ಸೌಕರ್ಯ ಇದೆ. ಸಾಯಿ ಸಂಸ್ಥಾನದ ವೆಬ್‌ಸೈಟ್ ವಿಳಾಸ: http://www.shrisaibabasansthan.orgಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಸಂಸ್ಥಾನದ ಮಾಹಿತಿ ಕೇಂದ್ರಗಳಲ್ಲಿಯೂ ಆನ್‌ಲೈನ್ ಬುಕ್ಕಿಂಗ್ ಕೌಂಟರ್‌ಗಳಿವೆ. ಬೆಂಗಳೂರಿನಲ್ಲಿ ಸಾಯಿ ಮಾಹಿತಿ ಕೇಂದ್ರವು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿದೆ. ಈ ಕೇಂದ್ರವನ್ನು ಮೊಬೈಲ್ 094492 14114 ಮೂಲಕವೂ (ಕೆಲಸದ ವೇಳೆಯಲ್ಲಿ ಮಾತ್ರ) ಸಂಪರ್ಕಿಸಬಹುದು.ನೂತನವಾಗಿ ನಿರ್ಮಾಣಗೊಂಡಿರುವ ಸಾಯಿ ಆಶ್ರಮದ ವಸತಿ ಗೃಹಗಳಲ್ಲಿ ಕೊಠಡಿಗಳನ್ನು ಸಹ ಆನ್‌ಲೈನ್ ಮೂಲಕ ಕಾಯ್ದಿರಿಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.