ಶಿರಸಿಯಲ್ಲಿ ಯಶಸ್ವಿ ಹಲಸು ಮೇಳ

ಸೋಮವಾರ, ಜೂಲೈ 22, 2019
27 °C

ಶಿರಸಿಯಲ್ಲಿ ಯಶಸ್ವಿ ಹಲಸು ಮೇಳ

Published:
Updated:

ಹಲಸಿನ ಹಣ್ಣುಗಳಿಂದ ತಯಾರಿಸಿದ ಖಾದ್ಯಗಳ ಸ್ವಾದ ಜನರಿಗೆ ಗೊತ್ತಾಗಿದೆ. ಹಲಸಿನ ಮೇಳ ಪ್ರಾರಂಭವಾಗುವ ಮುನ್ನವೇ ಸುರಿವ ಮಳೆಗೆ ಮುಖವೊಡ್ಡಿ ಕಾರು, ರಿಕ್ಷಾ, ಬೈಕ್‌ಗಳಲ್ಲಿ ಬಂದು ಹಲಸಿನ ಹಣ್ಣಿನ ಕಡಬು, ಚಿಪ್ಸ್, ಬನ್ಸ್, ಪಾಪಡ್, ಪಡ್ಡು, ಉಂಡ್ಳೆಕಾಳು ಇನ್ನೂ ಹತ್ತಾರು ತಿನಿಸುಗಳನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋದರು. ಮೇಳದ ವೇಳೆಗೆ ಬಂದವರು ನಾವು ತಡವಾಗಿ ಬಂದೆವೇ ಎನ್ನುತ್ತ ಗಡಿಯಾರ ನೋಡಿಕೊಂಡು ಖರೀದಿಗೆ ಧಾವಿಸಿದರು.ಎರಡು ದಿನಗಳ ಮೇಳಕ್ಕೆ ಸಿದ್ಧಪಡಿಸಿದ ಎಲ್ಲ ತಿನಿಸುಗಳು ಮೇಳ ಉದ್ಘಾಟನೆ ಆದ ಕೇವಲ ನಾಲ್ಕು ತಾಸುಗಳಲ್ಲಿ ಪೂರ್ಣ ಖಾಲಿ. ರಾತ್ರಿ ಕುಳಿತು ನೋಟಿನ ಕಂತೆ ಎಣಿಸಿದ ಹಲಸು ಉತ್ಪನ್ನಗಳ ತಯಾರಕರಿಗೆ  ಭಾನುವಾರ, ಸಾಗರೋಪಾದಿಯಲ್ಲಿ ಆಗಮಿಸುವ ಹಲಸು ಪ್ರಿಯರಿಗೆ ಬರಿಗೈಯಲ್ಲಿ ಕಳುಹಿಸುವುದೇ ಎಂಬ ಚಿಂತೆ ಕಾಡಿತ್ತು.

 

ಮಾರನೇ ದಿನ ಬಂದ ಜನರು ಅಂತೂ ಇದ್ದ ಅಷ್ಟಿಷ್ಟು ತಿನಿಸು ಖರೀದಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜೂ.11 ಮತ್ತು 12ರಂದು ಹಲಸಿನ ಮೇಳ ಏರ್ಪಾಟಾಗಿತ್ತು. ನಾಲ್ಕು ವರ್ಷಗಳಿಂದ ಮೇಳ ಸಂಘಟಿಸಿ ಮರದಲ್ಲೇ ಕೊಳೆತು ಹೋಗುತ್ತಿದ್ದ ಹಲಸನ್ನು ವೇದಿಕೆ ಮೇಲೇರಿಸಿ ಅದಕ್ಕೆ ಬೆಲೆ ತಂದು ಕೊಟ್ಟ `ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘ~ವೇ ಈ ಬಾರಿಯೂ ಮೇಳ ಸಂಘಟಿಸಿತ್ತು.

 

ಹಲಸಿನ ಹಣ್ಣು, ಹಲಸಿನ ಕಾಯಿ, ಹಲಸಿನ ಬೀಜಕ್ಕೆ ಪ್ರತ್ಯೇಕ ಸ್ಥಾನ ನೀಡಿ ಮೂರು ವಿಭಾಗದಲ್ಲಿ ಸ್ಪರ್ಧೆ ಏರ್ಪಟ್ಟಿದ್ದರಿಂದ ಹತ್ತಾರು ಬಗೆಯ ಹೊಸ ಖಾದ್ಯ ವೈವಿಧ್ಯಗಳು ಪರಿಚಯವಾದವು.  ಖಾದ್ಯ ಉತ್ಪನ್ನಗಳಿಗೆ ನೇರವಾಗಿ ಬಳಕೆಯಾಗಿದ್ದು 2ಸಾವಿರ ಹಲಸಿನ ಹಣ್ಣು ಮತ್ತು ಕಾಯಿಗಳು!ಮಲೆನಾಡು ಹಲಸಿನ ತವರೂರು. ಪ್ರತಿ ಮನೆಯ ಹಿತ್ತಲಲ್ಲಿ ಮೂರ್ನಾಲ್ಕು ಹಲಸಿನ ಮರಗಳು, ಒಂದೆರಡು ಮಿಡಿ ಮಾವಿನ ಮರಗಳು ಇದ್ದೇ ಇರುತ್ತವೆ. ಕೆಲವು ಮನೆಗಳಲ್ಲಿ ಅವುಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು.ಉಪ್ಪಿನಕಾಯಿ ಫ್ಯಾಕ್ಟರಿಗಳು ಹುಟ್ಟಿಕೊಂಡ ಮೇಲೆ ಮಿಡಿ ಮಾವಿಗೆ ಬೆಲೆ ಬಂದಿದೆ. ಆದರೆ ಮೇಣ ಮೆತ್ತಿಕೊಂಡಿರುವ ಹಲಸಿನ ಬಳಕೆಗೆ ಕೀಳರಿಮೆ. ಸಾಂಬಾರ, ಚಿಪ್ಸ್, ಕಡಬು ತಯಾರಿಸುವಾಗಷ್ಟೇ ನೆನಪಾಗುತ್ತಿತ್ತು.

 

ಒಂದೆರಡು ವರ್ಷದಲ್ಲಿ ಪರಿಸ್ಥಿತಿ ಬದಲಾಗಿದೆ. ಮೇಣದ ಹಲಸೇ ಈಗ ಪ್ರಿಯವಾಗಿದೆ. ಹಲಸಿನ ಕಾಯಿಯ ನೂರು ಹಪ್ಪಳಕ್ಕೆ ನೂರೈವತ್ತು ರೂಪಾಯಿ ಇದ್ದರೆ ಹಲಸಿನ ಹಣ್ಣಿನ ನೂರು ಹಪ್ಪಳಕ್ಕೆ ಬರೋಬ್ಬರಿ 750 ರೂಪಾಯಿ ಬೆಲೆ!ಹಲಸಿನ ಹಣ್ಣಿನ ಡ್ರೈಫ್ರೂಟ್ಸ್, ಚಿಪ್ಸ್, ಹಪ್ಪಳ, ಉಂಡ್ಳೆಕಾಳು ಹೀಗೆ ಅನೇಕ ಉತ್ಪನ್ನ ಮಾರಾಟ ಮಾಡಿಯೇ ಜೀವನ ಸಾಗಿಸುವ ಮೇಣಸಿಕೇರಿಯ ರೇಖಾ ಹೆಗಡೆ ಹಲಸಿನ ಹಂಗಾಮಿನಲ್ಲಿ ಸಾವಿರಾರು ಹಲಸಿನ ಕಾಯಿಗಳನ್ನು ಖರೀಸುತ್ತಾರೆ.ಕದಂಬ ಮಾರ್ಕೆಟಿಂಗ್‌ಗೆ ಗೃಹಿಣಿಯರು ಈ ವರ್ಷ ಒಂದು ಲಕ್ಷದಷ್ಟು ಹಲಸಿನಕಾಯಿ ಹಪ್ಪಳ ಪೂರೈಕೆ ಮಾಡಿದ್ದಾರೆ. ಅಷ್ಟೇ ಅಲ್ಲ ಕದಂಬದಲ್ಲಿ ಪ್ರತಿ ವಾರ ಹಲಸಿನ ಸಂತೆ ನಡೆಯುತ್ತದೆ. 75ರಷ್ಟು ಮಹಿಳೆಯರು ಹಲಸಿನ ಉಪ ಉತ್ಪನ್ನಗಳ ತಯಾರಿಕೆಯ ಗೃಹ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದಾರೆ. ಇವೆಲ್ಲ ಹಲಸಿನ ಮೇಳದ ಫಲಶೃತಿಗಳು.ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ನಾರಾಯಣ ಗೌಡರು ಹಲಸಿನ ಬೆಳೆಗೆ ಒತ್ತು ನೀಡುವುದಕ್ಕಿಂತ ಮುಖ್ಯವಾಗಿ ಹಲಸಿನ ಮಾರಾಟ ಮತ್ತು ಉತ್ಪನ್ನದ ಮೌಲ್ಯವರ್ಧನೆಗೆ ಗಮನ ನೀಡಬೇಕಾಗಿದೆ ಎಂದು ಸಲಹೆ ನೀಡಿದರು. ಒಟ್ಟಾರೆ ಬೆಳೆಯ ಶೇ 50 ಹಲಸು ವ್ಯರ್ಥವಾಗುತ್ತಿರುವ ಕುರಿತು ಹಿರಿಯ ಲೇಖಕ ಶ್ರೀಪಡ್ರೆ ಗಮನ ಸೆಳೆದರು.ಸಾಗರದ ಮಾಕಾಳಿ ಬಕ್ಕೆ, ಜೇನುತುಪ್ಪ ಬಕ್ಕೆ, ಕುಂದಗೋಡದ ಮೇಣ ರಹಿತ ಹಲಸು, ನಡಗೋಡಿನ ದುಂಡಬಕ್ಕೆ, ಬೆಂಡೆಗದ್ದೆ ಬಕ್ಕೆ ಹೀಗೆ 30ಕ್ಕೂ ಅಧಿಕ ಜಾತಿಯ ಅದ್ಭುತ ರುಚಿಯ ಹಲಸು ಮೇಳಕ್ಕೆ ಬಂದಿದ್ದವು. ಇಂತಹ ವಿಶೇಷ ತಳಿಗಳ ಸಂರಕ್ಷಣೆಯಾದರೆ ರಾಸಾಯನಿಕ ರಹಿತ ಹಲಸಿಗೆ ಭವಿಷ್ಯದಲ್ಲಿ ಭಾರೀ ಬೇಡಿಕೆ ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry