ಶಿರಸಿಯ ಮಾರಿಕಾಂಬೆ

7

ಶಿರಸಿಯ ಮಾರಿಕಾಂಬೆ

Published:
Updated:
ಶಿರಸಿಯ ಮಾರಿಕಾಂಬೆ
ಹೀಗೆ ಬನ್ನಿ...

ಶಿರಸಿ ಹುಬ್ಬಳ್ಳಿಯಿಂದ 105ಕಿಮೀ ದೂರದಲ್ಲಿದೆ.  ಕುಮಟಾದ ಮೂಲಕ ರಾಷ್ಟ್ರೀಯ ಹೆದ್ದಾರಿ 17 ಹಾದು ಹೋಗುತ್ತದೆ. ಕೆಲವೇ ರೈಲು ಹೊರತುಪಡಿಸಿದರೆ ಬಹುತೇಕ ರೈಲುಗಳಿಗೆ ಕುಮಟಾದಲ್ಲಿ ನಿಲುಗಡೆ ಇದೆ. ಕುಮಟಾದಿಂದ ದೇವಿಮನೆ ಘಟ್ಟ ಏರಿ ಬಸ್ಸಿನಲ್ಲಿ ಬರುವಾಗ ಹಸಿರು ಹೊದ್ದು ಮಲಗಿರುವ ಭೂರಮೆಯ ಸೌಂದರ್ಯ ಆಸ್ವಾದಿಸಬಹುದು. ಜಿಲ್ಲಾ ಕೇಂದ್ರ ಕಾರವಾರ ಶಿರಸಿಯಿಂದ 120ಕಿಮೀ ಅಂತರದಲ್ಲಿದೆ. ವಿಮಾನದಲ್ಲಿ ಗೋವಾಕ್ಕೆ ಬಂದು ಅಲ್ಲಿಂದ ರಸ್ತೆಯಲ್ಲಿ ಕಾರವಾರದ ಮೂಲಕ ಶಿರಸಿ ತಲುಪಬಹುದು. ಶಿರಸಿ ಕೇಂದ್ರವಾಗಿಟ್ಟುಕೊಂಡು ಸುತ್ತಲಿನ ಪ್ರವಾಸಿ ತಾಣ ಸಹಸ್ರಲಿಂಗ, ಉಂಚಳ್ಳಿ ಫಾಲ್ಸ್, ಸಾತೊಡ್ಡಿ ಫಾಲ್ಸ್, ಬನವಾಸಿಗಳಿಗೆ ಭೇಟಿ ನೀಡಬಹುದು.ರಾಜಸ್ಥಾನದ ಅಂಬಾ ಭವಾನಿ, ಬಂಗಾಲದ ಕಾಲೀಮಾರಂತೆ ಶಿರಸಿಯ ಮಾರಿಕಾಂಬೆ ಕ್ಷೇತ್ರ ಅತ್ಯಂತ ಜಾಗೃತ ಶಕ್ತಿ ಪೀಠಗಳಲ್ಲಿ ಒಂದು. ರಕ್ತ ಚಂದನ ಕಾಷ್ಠ ಶಿಲ್ಪದ ಮಾರಿಕಾಂಬೆ ಸುತ್ತಲಿನ ಜಗತ್ತನ್ನು ಆವರಿಸಿ ಭಕ್ತರನ್ನು ಸಲಹುವ ತ್ರಿಶಕ್ತಿ ರೂಪಿಣಿ ಎಂದೇ ಜನರ ನಂಬಿಕೆ. 

ಮೂರು ಶತಮಾನಗಳ ಹಿಂದೆ ಬಂಕಾಪುರದಿಂದ ಪೆಟ್ಟಿಗೆಯಲ್ಲಿ ಅಡಗಿ ಬಂದು ಶಿರಸಿಯಲ್ಲಿ ಪ್ರತಿಷ್ಠಾಪನೆಗೊಂಡವಳು ಮಾರಿಕಾಂಬೆ. ಕಾಲರಾ, ಮೈಲಿ ಬೇನೆ, ಪ್ಲೇಗ್‌ನಂಥ ಮಹಾಮಾರಿ ರೋಗಗಳು ಊರಿಗೆ ಕಾಲಿಟ್ಟಾಗ ತತ್ತರಿಸಿ ಹೋಗಿದ್ದ ಜನರಿಗೆ ರಕ್ಷಕಿಯಾಗಿ ನೆಲೆ ನಿಂತವಳು ದೇವಿ ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಮಾರಮ್ಮನ ನೆಲೆ ಇರುವಲ್ಲೆಲ್ಲ ಮಾರಿ ಜಾತ್ರೆಗಳಾಗುತ್ತವೆ. ಹೊರಬೀಡು, ಅಂಕೆ ಹಾಕುವ ಕಾರ್ಯ, ಮೇಟಿದೀಪ, ವಧು-ವರರ ಕಡೆಯಿಂದ ಸಂಪ್ರದಾಯದಂತೆ ಮಾರಮ್ಮನ ವಿವಾಹ ವಿಧಿ ಎಲ್ಲ ಮಾರಿಕಾಂಬಾ ಜಾತ್ರೆಗಳ ಸಂಪ್ರದಾಯ. ಹಾಗೆಯೇ ಪ್ರತಿ ಎರಡು ವರ್ಷಕ್ಕೊಮ್ಮೆ ಶಿರಸಿ ಮಾರಿಕಾಂಬೆ ನವವಧುವಾಗಿ ಆಭರಣ ಮೈತುಂಬಿಕೊಂಡು ದೃಷ್ಟಿ ಬೊಟ್ಟು ನೆಟ್ಟಿಕೊಂಡು ರಥವನ್ನು ಅಲಂಕರಿಸುತ್ತಾಳೆ. ಆಸಾದಿಯರ ಹಾಡು, ಲಂಬಾಣಿಗಳ ಮಂತ್ರ, ಡೊಳ್ಳುವಾದ್ಯದ ನಡುವೆ ಜಾತಿ ಬೇಧ ಮರೆತು ಜಾತ್ರಾ ಮೆರವಣಿಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಮಂದಿ ಮಾರಿಕಾಂಬೆಗೆ ಭಕ್ತಿಭಾವದ ನಮನ ಸಲ್ಲಿಸಿ ಪುನೀತರಾಗುತ್ತಾರೆ.ಮಾರಿ ಜಾತ್ರೆಯೆಂದರೆ ಥಟ್ಟನೆ ಮನಃಪಟಲಕ್ಕೆ ಬರುವುದು ಕೋಳಿ, ಕುರಿ, ಕೋಣನ ಬಲಿ. ಇನ್ನುಳಿದ ಧಾರ್ಮಿಕ ವಿಧಿಗಳು ಶಿರಸಿಯ ಮಾರಿಕಾಂಬಾ ಜಾತ್ರೆಗೆ ಸಾಮ್ಯವಾಗಿದ್ದರೂ ಬಲಿಯಲ್ಲಿ ಮಾತ್ರ ವ್ಯತ್ಯಾಸ.  ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನ ದಿನಕ್ಕೆ ವೃದ್ಧಿಸುತ್ತಿದೆ. ನಿತ್ಯ ಮೂರೂವರೆ ಸಾವಿರಕ್ಕೂ ಅಧಿಕ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ದೇವಿಯ ಪೂಜೆಗೆ ವಿಶೇಷ ದಿನಗಳು.1991ರಿಂದ ನಿತ್ಯ ಮಧ್ಯಾಹ್ನ 1ಗಂಟೆಯಿಂದ 2ಗಂಟೆ ತನಕ ಉಚಿತ ಅನ್ನ ಪ್ರಸಾದ ಸೇವೆ ನಡೆಯುತ್ತದೆ. ನಿತ್ಯ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಪ್ರವಾಸಕ್ಕೆ ಬರುವ ಶಾಲೆ ಮಕ್ಕಳ ವಸತಿಗೆ ದೇವಸ್ಥಾನದ ದೊಡ್ಡ ಕೊಠಡಿಗಳನ್ನು ಪಡೆಯಬಹುದು. ಪ್ರತ್ಯೇಕವಾಗಿ ಬರುವ ಪ್ರವಾಸಿಗರಿಗೆ ದೇವಸ್ಥಾನದ ವಸತಿ ಗೃಹದಲ್ಲಿ ಸೌಲಭ್ಯವಿದೆ. ಶಿರಸಿ ಪ್ರಮುಖ ಪಟ್ಟಣವಾಗಿರುವುದರಿಂದ ಖಾಸಗಿ ವಸತಿಗೃಹಗಳಿಗೆ ಕೊರತೆಯಿಲ್ಲ.ಸೇವೆಗಳು: ಮಾರಿಕಾಂಬಾ ದೇವಿಗೆ ಉಡಿ ಸೇವೆ ವಿಶೇಷ. ಬೆಳಿಗ್ಗೆ 8ಗಂಟೆಯಿಂದ ರಾತ್ರಿ 9ಗಂಟೆ ತನಕ ದೇವಿಗೆ ನಿರಂತರ ಸೇವೆ ನಡೆಯುತ್ತವೆ. ಕುಂಕುಮಾರ್ಚನೆ, ಪುಷ್ಪಾಲಂಕಾರ ಸೇವೆ, ರೂ.1501 ನೀಡಿ ಭಕ್ತಕೋಟಿ ನಿಧಿ ಸಂಚಯನದ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳಬಹುದು. ನವರಾತ್ರಿ, ಯುಗಾದಿ, ದೀಪಾವಳಿ, ಶ್ರಾವಣ ಮಾಸ, ಜಯಂತಿ ಉತ್ಸವ, ಕಾರ್ತಿಕೋತ್ಸವ ಇಲ್ಲಿನ ವಿಶೇಷ ಉತ್ಸವಗಳು. ಶಿರಸಿ ದೇವಸ್ಥಾನದ ದೂರವಾಣಿ ಸಂಖ್ಯೆ 08384 226360.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry