ಶಿರಸಿ ನಗರಸಭೆ ಯೋಜನೆ ವಿಫಲ

ಮಂಗಳವಾರ, ಜೂಲೈ 23, 2019
20 °C

ಶಿರಸಿ ನಗರಸಭೆ ಯೋಜನೆ ವಿಫಲ

Published:
Updated:

ಶಿರಸಿ: ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಪ್ರತಿ ಮನೆಯ ಬಳಿ ವಾಹನದಲ್ಲಿ ಕೊಂಡೊಯ್ದು ಘನತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಕಸದತೊಟ್ಟಿ ಮುಕ್ತ ನಗರವನ್ನಾಗಿ ರೂಪಿಸುವ ನಗರಸಭೆಯ ಯೋಜನೆ ವಿಫಲವಾಗಿದೆ.ಕಸ ಸಂಗ್ರಹಣೆ ಟೆಂಡರ್ ಪಡೆದಿರುವ ಖಾಸಗಿ ಸಂಸ್ಥೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದು, ಕಸ ಸಂಗ್ರಹಣೆ ಕಾರ್ಯ ಕೈಬಿಡುವುದಾಗಿ ಪತ್ರ ಬರೆದಿದೆ. ಇದರಿಂದ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸುವ ಭೀತಿ ನಗರಸಭೆಗೆ ಎದುರಾಗಿದೆ.ಈ ಹಿಂದೆ ನಗರದ ಅರ್ಧದಷ್ಟು ಪ್ರದೇಶಗಳ ಘನತ್ಯಾಜ್ಯ ಸಂಗ್ರಹವನ್ನು ನಗರಸಭೆ ಹಾಗೂ ಇನ್ನುಳಿದವನ್ನು ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ನೀಡಲಾಗಿತ್ತು. ಒಂದೂವರೆ ವರ್ಷದ ಹಿಂದೆ ನಗರಸಭೆ ಲೋಕಅದಾಲತ್‌ಗೆ ಅಫಿಡವಿಟ್ ನೀಡಿದ್ದು, ಮನೆ-ಮನೆ ಕಸ ಸಂಗ್ರಹದಲ್ಲಿ ಶೇಕಡಾ ನೂರರಷ್ಟು ಸಾಧನೆ ತೋರುವುದಾಗಿ ಅದರಲ್ಲಿ ತಿಳಿಸಿದೆ.ಅಂತೆಯೇ ಅದನ್ನು ಅನುಷ್ಠಾನಗೊಳಿಸಲು ನಗರದ ಎಲ್ಲ 31 ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಲು ಖಾಸಗಿ ಸಂಸ್ಥೆಯೊಂದಕ್ಕೆ ಎರಡು ತಿಂಗಳ ಪ್ರಾಯೋಗಿಕ ಗುತ್ತಿಗೆ ನೀಡಿ, 2012ರ ಅಕ್ಟೋಬರ್ ತಿಂಗಳಿನಲ್ಲಿ ಟೆಂಡರ್ ಕರೆದು ಇದೇ ಸಂಸ್ಥೆಗೆ ಘನತ್ಯಾಜ್ಯ ಸಂಗ್ರಹಿಸುವ ಜವಾಬ್ದಾರಿ ನೀಡಿದೆ.ಕಸ ಸಂಗ್ರಹಿಸುವ ಹೊಣೆ ಹೊತ್ತಿರುವ ಈಗಲ್ ಸೆಕ್ಯುರಿಟಿ ಸರ್ವೀಸ್ ಸಂಸ್ಥೆ ಸ್ವಂತ ಮೂರು ವಾಹನ ಹಾಗೂ ನಗರಸಭೆಯ ನಾಲ್ಕು ಟಿಪ್ಪರ್‌ಗಳನ್ನು ಪಡೆದು ನಗರದಲ್ಲಿ ಘನತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದೆ. ಆದರೆ ನಗರದ ಪ್ರತಿ ಕಟ್ಟಡದಿಂದ ಕಸ ಸಂಗ್ರಹಿಸುವಲ್ಲಿ ಈ ಸಂಸ್ಥೆ ಸಂಪೂರ್ಣ ವಿಫಲವಾಗಿದೆ. ಅನೇಕ ಬಡಾವಣೆಗಳಲ್ಲಿ ಇನ್ನೂ ಕದಲದೆ ನಿಂತಿರುವ ಕಸದತೊಟ್ಟಿಗಳು, ಅವುಗಳ ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಸದ ರಾಶಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಆಹ್ವಾನಿಸುವಂತಿವೆ.ಪೂರ್ಣ ಪ್ರಮಾಣದಲ್ಲಿ ಕಸ ಸಂಗ್ರಹಿಸುವ ಕಾರ್ಯ ಆಗುತ್ತಿಲ್ಲವೆಂದು ನಗರಸಭೆಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ನಗರಸಭೆ ಈ ಸಂಸ್ಥೆಗೆ ಎರಡು ಬಾರಿ ನೋಟಿಸ್ ನೀಡಿದೆ. ಈ ನೋಟಿಸ್‌ಗೆ 15 ದಿನಗಳ ಹಿಂದೆ ಉತ್ತರ ನೀಡಿರುವ ಸಂಸ್ಥೆ, ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ನಷ್ಟ ಭರಿಸಲು ಸಾಧ್ಯವಿಲ್ಲವಾಗಿದ್ದು, ಕಸ ಸಂಗ್ರಹಣೆ ಕೈ ಬಿಡುವುದಾಗಿ ತಿಳಿಸಿದೆ.`ನಗರಸಭೆ ನೀಡಿರುವ ನಾಲ್ಕು ವಾಹನಗಳ ನಿರ್ವಹಣೆ, ಚಾಲಕರ ವೇತನ, ಇಂಧನ ಹಾಗೂ ಸಂಸ್ಥೆಯ ಮೂರು ವಾಹನಗಳ ನಿರ್ವಹಣೆ ಸೇರಿ ಪ್ರತಿ ದಿನ ಸಂಸ್ಥೆಗೆ ಸುಮಾರು ರೂ 3500 ವೆಚ್ಚ ಬರುತ್ತಿದೆ. ಸೌಲಭ್ಯ ಬಳಕೆದಾರರಿಂದ ನಿರೀಕ್ಷಿತ ಪ್ರಮಾಣದಲ್ಲಿ ತಿಂಗಳ ಶುಲ್ಕ ವಸೂಲಿ ಸಾಧ್ಯವಾಗುತ್ತಿಲ್ಲ. ನಗರಸಭೆ ಸಂಸ್ಥೆಗೆ ಆರ್ಥಿಕ ನೆರವು ನೀಡಬೇಕು ಇಲ್ಲವಾದಲ್ಲಿ ಕಸ ಸಂಗ್ರಹಣೆ ಕೈಬಿಡಲಾಗುವುದು' ಎಂದು ಈಗಲ್ ಸಂಸ್ಥೆ ಪತ್ರದಲ್ಲಿ ತಿಳಿಸಿದೆ.`ಘನತ್ಯಾಜ್ಯವನ್ನು ವಾಹನಗಳಿಗೆ ನೀಡುವಾಗ ಪ್ರತ್ಯೇಕಿಸಿ ನೀಡಬೇಕೆಂಬ ನಿಯಮ ಸಾರ್ವಜನಿಕರಿಂದ ಪಾಲನೆಯಾಗುತ್ತಿಲ್ಲ. ಒಂದು ಮನೆಗೆ ಒಂದು ತಿಂಗಳಿಗೆ ಕೇವಲ 20 ರೂಪಾಯಿ ಕಸ ಸಂಗ್ರಹ ಶುಲ್ಕ ನಿಗದಿಪಡಿಸಲಾಗಿದೆ.ಸಣ್ಣ ಅಂಗಡಿ, ಹೊಟೇಲ್‌ಗಳಿಗೆ ಪ್ರತ್ಯೇಕ ಶುಲ್ಕ ನಿಗದಿಯಾಗಿದ್ದು, ಇವನ್ನು ನೀಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಪ್ರಕಾರ ಘನತ್ಯಾಜ್ಯ ಸಂಗ್ರಹಿಸುವ ಸಂಸ್ಥೆ ಆರ್ಥಿಕ ನಷ್ಟದಲ್ಲಿದ್ದರೆ ಒಟ್ಟು ನಷ್ಟದ ಶೇ 25ರಷ್ಟನ್ನು ನಗರಸಭೆ ನೀಡಬಹುದು ಎಂದಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಪೌರಾಯುಕ್ತ ಕೆ.ಬಿ.ವೀರಾಪುರ ಹೇಳಿದರು.ಟೆಂಡರ್‌ನ ಒಪ್ಪಂದದಂತೆ ಪ್ರತಿ ತಿಂಗಳು ಈಗಲ್ ಸಂಸ್ಥೆ ನಗರಸಭೆಗೆ ರೂ 8900 ಶುಲ್ಕ ಪಾವತಿಸಬೇಕಾಗಿದ್ದು, ಆರು ತಿಂಗಳಿನಿಂದ ಈ ಶುಲ್ಕ ಪಾವತಿಯಾಗಿಲ್ಲ. ಮಾರಿಕಾಂಬಾ ದೇವಾಲಯದಿಂದ ಬರುವ ರೂ 6ಸಾವಿರ ಕಸ ಸಂಗ್ರಹಣೆ ಶುಲ್ಕದಲ್ಲಿ ಈ ಮೊತ್ತವನ್ನು ಕಡಿತಗೊಳಿಸಿದರೂ ಈಗಲ್ ಸಂಸ್ಥೆ ನಗರಸಭೆಗೆ ರೂ 17ಸಾವಿರ ಶುಲ್ಕ ಭರಣ ಮಾಡಬೇಕಾಗಿದೆ. ಘನತ್ಯಾಜ್ಯ ನಿರ್ವಹಣೆ ಕುರಿತು ನಗರಸಭೆ ಕಟ್ಟುನಿಟ್ಟಿನ ಕ್ರಮವಹಿಸದಿದ್ದಲ್ಲಿ ನಗರ ವಿಸ್ತರಣೆ, ಬೆಳೆಯುತ್ತಿರುವ ಜನಸಂಖ್ಯೆಯಿಂದ ಮುಂದಿನ ದಿನಗಳಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿ ಕಾಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry