ಶಿರಸಿ: ಮಳೆಯಿಂದ ಬೆಳೆ ಹಾನಿ

ಶನಿವಾರ, ಮೇ 25, 2019
22 °C

ಶಿರಸಿ: ಮಳೆಯಿಂದ ಬೆಳೆ ಹಾನಿ

Published:
Updated:

ಶಿರಸಿ: ತಾಲ್ಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಜನಜೀವನ ತತ್ತರಿಸಿದ್ದು, ಅಲ್ಲಲ್ಲಿ ಅನಾಹುತಗಳು ಸಂಭವಿಸಿವೆ. ಕುಪ್ಪಗಡ್ಡೆ ಕೆರೆಯಲ್ಲಿ ನೀರು ತುಂಬಿ ಹರಿದು ಕೆರೆಯ ಒಡ್ಡು ಒಡೆದಿದೆ. ಪರಿಣಾಮ 20 ಎಕರೆಯಷ್ಟು ನಾಟಿ ಮಾಡಿದ ಭತ್ತ, ಶುಂಠಿ ಬೆಳೆಗಳು ಕೊಚ್ಚಿ ಹೋಗಿವೆ.ಕುಪ್ಪಗಡ್ಡೆಯಲ್ಲಿ ಸರ್ವೆ ಕ್ರಮಾಂಕ 77ರಲ್ಲಿರುವ 15 ಎಕರೆ ವ್ಯಾಪ್ತಿಯ ಕೆರೆಯ ಒಂದು ಪಾರ್ಶ್ವದಲ್ಲಿ ಮಣ್ಣು ಕುಸಿದು ಕೆರೆಯ ನೀರು ಭತ್ತ ಹಾಗೂ ಶುಂಠಿ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡಿದೆ ಎಂದು ಸ್ಥಳೀಯರು ಹೇಳುತ್ತಾರೆ.ಅರ್ಧದಷ್ಟು ಕೆರೆ ಖಾಲಿ ಆಗಿದ್ದು, ನೀರು ಗದ್ದೆಯಲ್ಲಿ ಹರಿಯುತ್ತಿದೆ. ತಹಸೀಲ್ದಾರ ಎಚ್.ಕೆ.ಕೃಷ್ಣಮೂರ್ತಿ, ತೋಟಗಾರಿಕಾ ಇಲಾಖೆ ಅಧಿಕಾರಿ ರಾಮಚಂದ್ರ ಮಡಿವಾಳ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾಳಂಜಿಯಲ್ಲಿ ಮಳೆಗೆ ಮನೆಯೊಂದರ ಕೊಟ್ಟಿಗೆ ಕುಸಿದು ಬಿದ್ದಿದೆ. ಅಚನಳ್ಳಿ ಕೆರೆ ಉಕ್ಕಿ ಹರಿಯುತ್ತಿದೆ. ಅಚನಳ್ಳಿ ಕೆರೆಯ ಮಾರ್ಗವಾಗಿಯೇ ರಸ್ತೆ ಹಾದುಹೋಗಿದ್ದು ರಸ್ತೆಯ ಕೆಳ ಭಾಗಕ್ಕೆ ಧಕ್ಕೆಯಾಗಿದೆ. ಹೀಗಾಗಿ ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ತಾಲ್ಲೂಕಿನ ಪೂರ್ವ ಭಾಗದ ಬನವಾಸಿಯಲ್ಲಿ ವರದಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಮೊಗಳ್ಳಿ, ಸಣ್ಣಕೇರಿ ಗ್ರಾಮಗಳ ಸುತ್ತ ನೀರು ಆವರಿಸುತ್ತಿದೆ. ಗ್ರಾಮಾಂತರ ಭಾಗಗಳ ಅನೇಕ ಕಡೆಗಳಲ್ಲಿ ವಿದ್ಯುತ್, ದೂರವಾಣಿ ಸಂಪರ್ಕಗಳು ಕೈಕೊಟ್ಟಿವೆ. ನಗರದಲ್ಲೂ ವಿದ್ಯುತ್ ಕಣ್ಣಾಮುಚ್ಚಾಲೆ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry