ಶಿರಸಿ ಮಾರಿಕಾಂಬಾ ಜಾತ್ರೆ ಮಾರ್ಚ್‌ 11ರಿಂದ

7

ಶಿರಸಿ ಮಾರಿಕಾಂಬಾ ಜಾತ್ರೆ ಮಾರ್ಚ್‌ 11ರಿಂದ

Published:
Updated:

ಶಿರಸಿ: ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆ ಮಾರ್ಚ್‌11ರಿಂದ 19ರವರೆಗೆ  ಜರುಗಲಿದೆ.

ಭಾನುವಾರ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ಅರ್ಚಕ ರಾಮಕೃಷ್ಣ ಭಟ್ಟ ಕೆರೇಕೈ ಜಾತ್ರೆಯ ದಿನಾಂಕ ಘೋಷಣೆ ಮಾಡಿದರು. ವಿಜಯ ಸಂವತ್ಸರದ ಫಾಲ್ಗುಣ ಶುದ್ಧ ದಶಮಿಯಿಂದ ಫಾಲ್ಗುಣ ಕೃಷ್ಣ ತದಿಗೆಯ ವರೆಗೆ ಜಾತ್ರೆ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿ–ವಿಧಾನಗಳು ಜ.22ರಿಂದ ಪ್ರಾರಂಭವಾಗಲಿವೆ ಎಂದರು.ಇದೇ 22ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ.18ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಫೆ.21ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಫೆ.25ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಫೆ.28ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಫೆ.28ರಂದು ಉತ್ತರ ದಿಕ್ಕಿಗೆ 4ನೇ ಹೊರಬೀಡು, ಮಾ.4ರಂದು ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ. ಮಾ.5ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ.ಮಾ.11ರಂದು ಮಧ್ಯಾಹ್ನ 12.18 ಗಂಟೆಯಿಂದ 1 ಗಂಟೆಯೊಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾ.12ರಂದು ಬೆಳಿಗ್ಗೆ 7.19 ಗಂಟೆಯಿಂದ 7.27 ಗಂಟೆಯೊಳಗೆ ಶ್ರೀ ದೇವಿಯ ರಥಾರೋಹಣ ಕಾರ್ಯ ನಡೆಯಲಿದ್ದು, ನಂತರ 12.10 ಗಂಟೆಯೊಳಗೆ ದೇವಿಯ ಶೋಭಾ ಯಾತ್ರೆ ಹಾಗೂ ಗದ್ದುಗೆಯ ಮೇಲೆ ಸ್ಥಾಪನೆ ಕಾರ್ಯ ಜರುಗುವುದು. ಮಾ.13ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ.ಮಾ.19ರಂದು ಬೆಳಿಗ್ಗೆ 10.30 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಮಾ.31 ಯುಗಾದಿ ಯಂದು ದೇವಿಯ ಪುನರ್‌ ಪ್ರತಿಷ್ಠೆ ನಡೆಯಲಿದೆ. ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರ ದಾಯದ ಪ್ರಕಾರ ನಾಡಿಗ ಮನೆತನದ ಪ್ರಮುಖ ಅಜಯ್‌ ನಾಡಿಗ್ ದೇವಿ ಸಾನಿಧ್ಯದಲ್ಲಿ ದೀಪ ಬೆಳಗಿಸಿದರು. ನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಎಂ.ಹೆಗಡೆ, ಉಪಾಧ್ಯಕ್ಷ ಮಂಜುನಾಥ ಸಾಗರಕರ್, ಧರ್ಮದರ್ಶಿಗಳಾದ ಜ್ಯೋತಿ ಭಟ್ಟ, ವಿ.ಯು.ಪಟಗಾರ, ಮಧುಕೇಶ್ವರ ಹೆಗಡೆ, ಬಾಬುದಾರ ಜಗದೀಶ ಗೌಡ, ಅಧಿಕಾರಿಗಳು, ನಾಗರಿಕರು ಸಭೆಯಲ್ಲಿ ಪಾಲ್ಗೊಂಡು ಜಾತ್ರೆ ಉತ್ಸವದ ಕುರಿತು ಚರ್ಚಿಸಿದರು.ಮೊಬೈಲ್‌ ಶೌಚಾಲಯ ಕಲ್ಪಿಸಲು ಸಲಹೆ

ಶಿರಸಿ:
ಮಾರಿಕಾಂಬಾ ಜಾತ್ರೆಗೆ ಮುಂಚಿತವಾಗಿ ಮರ್ಕಿದುರ್ಗಿ ದೇವಿಯರನ್ನು ಮೂಲ ಸ್ಥಳಕ್ಕೆ ಸ್ಥಳಾಂತರಿಸಬೇಕು, ಜಾತ್ರೆಯ ವೇಳೆಗೆ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಬೇಕು, ಪರಸ್ಥಳಗಳಿಂದ ಬರುವ ಭಕ್ತರಿಗೆ ಮೊಬೈಲ್‌ ಶೌಚಾಲಯ ವ್ಯವಸ್ಥೆಗೊಳಿಸಬೇಕು, ಕುಡಿಯುವ ನೀರು, ಸ್ವಚ್ಛತೆ, ವಿದ್ಯುತ್‌ ಸುವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ಆಗ್ರಹ ಭಾನುವಾರ ಇಲ್ಲಿ ನಡೆದ ಮಾರಿಕಾಂಬಾ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ವ್ಯಕ್ತವಾಯಿತು.

ವರ್ಷದಿಂದ ವರ್ಷಕ್ಕೆ ಮಾರಿಕಾಂಬಾ ದೇವಿಯ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿರುವುದರಿಂದ ಜಾತ್ರಾ ಸ್ಥಳವನ್ನು ಬಿಡಕಿಬೈಲಿಗೆ ಬದಲಾಗಿ ವಿಶಾಲ ಮೈದಾನಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಚನೆ ನಡೆಯಬೇಕು ಎಂದು ರಾಜೇಶ ದೇಶಭಾಗ ಸಲಹೆ ಮಾಡಿದರು. ಬೇವಿನ ಉಡುಗೆ ಇನ್ನಿತರ ಹರಕೆ ಸೇವೆ ನಡೆಯುವ ಮರ್ಕಿದುರ್ಗಿ ದೇವಾಲಯದ ಪುನರ್‌ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಆದಷ್ಟು ಶೀಘ್ರ ಪೂರ್ಣಗೊಳಿಸಿ ಪುನರ್‌ಪ್ರತಿಷ್ಠಾಪನೆ ನಡೆಸಬೇಕು’ ಎಂದು ಸಮಗ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವಿನೋದ ಮಡಗಾಂವಕರ ಆರೋಪಿಸಿದರು.‘ಹಿಂದಿನ ಜಾತ್ರೆಯ ತುಲಾಭಾರ ಸೇವೆಯಲ್ಲಿ ಬಾಬುದಾರರು, ನಾಡಿಗರು ಸೇರಿದಂತೆ ಐವರಿಗೆ ರೂ.1.15 ಲಕ್ಷ ಪಾಲು ನೀಡಲಾಗಿದೆ. ಎಂದಿಗೂ ಇಲ್ಲದ ನಿಯಮ ಈಗ ಹೇಗೆ ಬಂತು? ಈಗಾಗಲೇ ನೀಡಿರುವ ಮೊತ್ತವನ್ನು ಪುನಃ ಭರಣ ಮಾಡಿಸಿಕೊಳ್ಳಿ’ ಎಂದು ಮಡಗಾಂವರಕ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಸಭೆಯಲ್ಲಿ ಕುಳಿತಿದ್ದ ಕೆಲವರು ಬೆಂಬಲ ಸೂಚಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಬಾಬುದಾರ ಪ್ರಮುಖ ಜಗದೀಶ ಗೌಡ, ‘ದೇವಾಲಯದ ನಿಯಮಾವಳಿ ಪ್ರಕಾರ ಈ ಐವರಿಗೆ ಪಾಲು ನೀಡುವ ಅವಕಾಶವಿದೆ. ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ’ ಎಂದು ಸ್ಪಷ್ಟೀಕರಣ ನೀಡಿದರು. ‘ಜಾತ್ರೆಯ ವೇಳೆಗೆ ದೇವಾಲಯದ ಆಡಳಿತ ಮಂಡಳಿ, ನಗರಸಭೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೂರದ ಊರುಗಳಿಂದ ಬಂದಿರುವ ಭಕ್ತರು ಶೌಚಾಲಯ ವ್ಯವಸ್ಥೆಗೊಳಿಸಿ’ ಎಂದು ರಾಮು ಕಿಣಿ ಹೇಳಿದರು.ಹಣ್ಣು ಕಾಯಿ ಒಡೆಯುವ ಸ್ಥಳ ವ್ಯವಸ್ಥೆ, ಸ್ಥಳೀಯರಿಗೆ ಆದ್ಯತೆ ನೀಡಿ ಅಂಗಡಿ ಹರಾಜು ಪ್ರಕ್ರಿಯೆಗೆ ಒತ್ತು ನೀಡುವ ಕುರಿತು ಆಗ್ರಹ ವ್ಯಕ್ತವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry