ಬುಧವಾರ, ಮೇ 18, 2022
28 °C

ಶಿರಸಿ: ಶೀಘ್ರವೇ ಪುಷ್ಪ ಹರಾಜು ಹೈಟೆಕ್ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಉತ್ತರ ಕನ್ನಡ ಜಿಲ್ಲೆ ಪುಷ್ಪ ಕೃಷಿಗೆ ಸೂಕ್ತ ಹವಾಗುಣ ಹೊಂದಿದ್ದರೂ ಮಾರುಕಟ್ಟೆ ಅಲಭ್ಯತೆಯಿಂದ ರೈತರು ಪುಷ್ಪೋದ್ಯಮಕ್ಕೆ ಅಷ್ಟಾಗಿ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಇನ್ನು ಈ ಆತಂಕ ಬೇಡ. ಪುಷ್ಪ ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಿಕೊಳ್ಳಲು ರೈತರಿಗೆ ಇದು ಸಕಾಲ. ಹೈಟೆಕ್ ಪುಷ್ಪ ಹರಾಜು ಕೇಂದ್ರ ಇನ್ನು ಒಂದು ವರ್ಷದಲ್ಲಿ ಶಿರಸಿಯಲ್ಲಿ ಕಾರ್ಯಾರಂಭ ಮಾಡಲಿದೆ.ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಹೊರವಲಯದ ತೆರಕನಳ್ಳಿ ಫಾರ್ಮ್‌ನಲ್ಲಿ ಹೈಟೆಕ್ ಪುಷ್ಪ ಹರಾಜು ಕೇಂದ್ರ ಪ್ರಾರಂಭವಾಗಲಿದ್ದು, ರೈತರು ಬೆಳೆಯುವ ಹೂ ಮಾರಾಟಕ್ಕೆ ದೂರ ಮಾರುಕಟ್ಟೆಗೆ ಅಲೆಯುವ ಕೆಲಸ ತಪ್ಪಲಿದೆ. ಅಂಥೋರಿಯಂ, ಗ್ಲಾಡಿಯೋಲಸ್, ಜರ್ಬೆ ಜೊತೆಗೆ ಸಾಂಪ್ರದಾಯಿಕ ಹೂವುಗಳ ವ್ಯಾಪಾರ ಈ ಕೇಂದ್ರದಲ್ಲಿ ನಡೆಯಲಿದೆ. ತೋಟಗಾರಿಕಾ ಇಲಾಖೆಯ ಹಣ್ಣುಗಳ ವಿಭಾಗ ಲಾಲಭಾಗ್‌ನ ಉಪನಿರ್ದೇಶಕ ಎಸ್.ವಿ. ಹಿತ್ತಲಮನಿ ಶುಕ್ರವಾರ ಪುಷ್ಪ ಹರಾಜು ಕೇಂದ್ರ ನಿರ್ಮಾಣಗೊಳ್ಳಲಿರುವ ಸ್ಥಳ ಪರಿಶೀಲನೆ ನಡೆಸಿದರು. ನಂತರ ಭೇಟಿ ಮಾಡಿದ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರಿಯಾಗಿದ್ದು, ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ.ರಾಜ್ಯದ ನಾಲ್ಕು ಸ್ಥಳಗಳಲ್ಲಿ ಈ ಕೇಂದ್ರ ಆರಂಭಗೊಳ್ಳಲಿದ್ದು, ಇನ್ನಿತರ ಮೂರು ಸ್ಥಳಗಳಾದ ದಾವಣಗೆರೆ, ತುಮಕೂರು ಮತ್ತು ಉಡುಪಿಗಳಲ್ಲಿ ಸಹ ಕಾರ್ಯ ಪ್ರಗತಿಯಲ್ಲಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ 100 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಪುಷ್ಪ ಕೃಷಿ ನಡೆಯುತ್ತಿದ್ದು, ಹರಾಜು ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಕನಿಷ್ಠ 500ಹೆಕ್ಟೇರ್ ಕ್ಷೇತ್ರದಲ್ಲಿ ಪುಷ್ಪ ಕೃಷಿ ನಡೆಯಬೇಕು. ಈ ಕೇಂದ್ರ 100 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಹಾವೇರಿ, ಸಾಗರ ಸುತ್ತಲಿನ ಕೃಷಿಕರು ಹೂಗಳನ್ನು ಹೊತ್ತು ತಂದು ಉತ್ತಮ ಸ್ಪರ್ಧಾತ್ಮಕ ದರ ಪಡೆಯಬಹುದು. ಕ್ಷೇತ್ರ ವಿಸ್ತರಣೆ ಹಿನ್ನೆಲೆಯಲ್ಲಿ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ಸ್ಥಳೀಯ ಪುಷ್ಪ ಬೆಳೆಗಾರರ ಸಂಘಗಳು ಆಸಕ್ತಿ ಹೊಂದಿದರೆ ಇಲಾಖೆ ಕೇಂದ್ರದ ನಿರ್ವಹಣೆಯನ್ನು ವಹಿಸಿಕೊಳ್ಳಲು ಸಿದ್ಧವಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೈಟೆಕ್ ಪುಷ್ಪೋದ್ಯಮದ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಪೂರಕ ಬಜೆಟ್‌ನಲ್ಲಿ ರೂ. 10ಕೋಟಿ ನೀಡಲು ಅನುಮತಿ ನೀಡಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳಾದ ಸತೀಶ ಹೆಗಡೆ, ರಾಮಚಂದ್ರ ಮಡಿವಾಳ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.