ಶಿರಸಿ ಸುತ್ತ ಕೋಟಿ ಮೌಲ್ಯದ ಬಾಳೆ ಬೆಳೆ ಹಾನಿ

ಶಿರಸಿ: ‘ಮಂಗಳವಾರ ಸಂಜಿ 5.30 ಹೊತ್ತು, ಒಮ್ಮೆಗೇ ಗಾಳಿ ಬೀಸಾಕ್ ಹತ್ತು. ಮನೆ ಹಂಚೆಲ್ಲ ಪಟಪಟಾಂತ ಹಾರಾಕ್ ಹತ್ತವು. ಸಿಡ್ಲು, ಮಿಂಚು ಮನೆ ಹೊರಾಗ್ ಬರಾಕಾಗಿಲ್ಲ. ಹದಿನೈದೇ ನಿಮಿಷದ ಗಾಳಿ–ಮಳೆಗ ನೋಡ್ರಿ, ಎರಡು ಎಕ್ರೆ ಬಾಳೆ ಪ್ಲಾಟ್ ತಲಿಕೆಳಗಾದವು. ನಮ್ಮ ಸ್ಥಿತಿ ನೋಡಿದ್ರೆ ವಿಷಾ ಕುಡಿಬೇಕಿತ್ರಿ’ ಹೀಗೆಂದು ಕಾಳಂಗಿಯ ಗಂಗಾಧರಸ್ವಾಮಿ ಹೇಳುವಾಗ ಅವರ ಕಣ್ಣಂಚಿನಲ್ಲಿ ನೀರು ತುಂಬಿದ್ದವು.
ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಸುರಿದ ಆಲಿಕಲ್ಲು ಮಳೆ, ಗಾಳಿ ರೈತರಿಗೆ ಭಾರೀ ನಷ್ಟ ತಂದೊಡ್ಡಿದೆ. ಕಾಳಂಗಿ, ವದ್ದಲ, ಬೆಳ್ಳನಕೇರಿಯಲ್ಲಿ ಗಾಳಿ ಮಳೆಯಿಂದ ತೋಟಗಾರಿಕಾ ಬೆಳೆಗಳು, ಮನೆಗಳಿಗೆ ಹಾನಿ ಸಂಭವಿಸಿದೆ.
ಕಾಳಂಗಿಯ ರೈತ ಗಂಗಾಧರಸ್ವಾಮಿ ಪಂಚಾಕ್ಷರಯ್ಯ ಆರಾಧ್ಯಮಠ ಅವರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಸುಮಾರು ₨ 2 ಲಕ್ಷ ವೆಚ್ಚ ಮಾಡಿ ತಯಾರು ಮಾಡಿದ್ದ ಬಾಳೆ ತೋಟದಲ್ಲಿ ಬಹುತೇಕ ಮರಗಳು ಗೊನೆ ಬಿಟ್ಟು ಸಮೃದ್ಧವಾಗಿ ನಿಂತಿದ್ದವು.
‘ಬೆಳಗ್ಗೆಯಿಂದ ಸಂಜೆಯ ತನಕ ಬಾಳೆ ಮರದ ಬುಡಕ್ಕೆ ಮಣ್ಣು ಹಾಕಿ ಆಗಷ್ಟೇ ಮನೆಗೆ ಹೋಗಿದ್ದೆವು. ಅಷ್ಟರಲ್ಲಿ ಎಲ್ಲಿಂದಲೋ ಬಂದ ಬಿರುಗಾಳಿ ಎಲ್ಲ ಮರಗಳನ್ನು ನೆಲಕ್ಕುರುಳಿಸಿದೆ. ಶ್ರಾವಣದ ಹೊತ್ತಿಗೆ ಒಳ್ಳೆಯ ಫಸಲು ಪಡೆದು ಕನಿಷ್ಠ ₨ 4 ಲಕ್ಷ ಆದಾಯ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಈಗ ಬಿದ್ದ ಮರಗಳನ್ನು ಕೂಲಿ ಕೊಟ್ಟು ಖಾಲಿ ಮಾಡಿಸುವ ಪರಿಸ್ಥಿತಿ ತಂದೊಡ್ಡಿದೆ ಈ ಅಕಾಲಿಕ ಮಳೆ’ ಎಂದು ಅವರು ನೋವು ತೋಡಿಕೊಂಡರು.
‘ಒಂದೂವರೆ ಎಕರೆಯಲ್ಲಿ 75 ಮಾವಿನ ಗಿಡಗಳಿದ್ದವು. ಗಾಳಿಯ ಹೊಡೆತಕ್ಕೆ ಉದುರಿ ನೆಲದ ಮೇಲೆ ಹಾಸು ಬಿದ್ದಿವೆ. ಮಾವಿನಿಂದ 1 ಲಕ್ಷ ರೂಪಾಯಿಯಷ್ಟಾದರೂ ಆದಾಯ ಬರಬಹುದೆಂಬ ಕನಸು ನುಚ್ಚು ನೂರಾಗಿದೆ’ ಎಂದು ದಾನಪ್ಪ ಆರಾಧ್ಯಮಠ ಹೇಳಿದರು.
ಸಹಕಾರಿ ಸಂಘದಲ್ಲಿ ಸಾಲ: ‘ನನ್ನ ಪರಿಸ್ಥಿತಿ ಏನ್ ಹೇಳೋದು, ನಾಲ್ಕು ಬೋರ್ ಹೊಡೆಸಿದೆ. ನೀರೇ ಬರ್ಲಿಲ್ಲ. ಅಂತೂ ಐದನೇ ಬೋರ್ವೆಲ್ನಲ್ಲಿ ನೀರು ಕಂಡಿತು. 2 ಎಕ್ರೆ ಗದ್ದೆಯಲ್ಲಿ ಬಾಳೆ ಹಚ್ಚಿದ್ದೆ. ಎಲ್ಲಾ ಬಾಳೆ ಮರ ಗಾಳಿಗೆ ಉದುರಿ ಬಿದ್ದಾವು. ಸೊಸೈಟಿ, ಅಲ್ಲಿ ಇಲ್ಲಿ ಸಾಲ ಮಾಡಿ ಮಾಡಿದ ಕೃಷಿ ಎಲ್ಲಾ ಹೋತ್ರಿ. ಬೆಳೆದ ಬೆಳೆ ಕಣ್ಣೆದ್ದೇ ಮಣ್ಣಾತ್ರಿ’ ಎಂದು ರವಿ ಬಸಾಪುರ ಸೋತ ದನಿಯಲ್ಲಿ ಹೇಳುತ್ತಿದ್ದರು.
ಶಿವರಾಜ ಅಂಗಡಿ ಅವರ ಅಡಿಕೆ ತೋಟದಲ್ಲಿ ಬಾಳೆ ನಾಶವಾಗಿದ್ದರೆ, ನಾಲ್ಕಾರು ತೆಂಗಿನ ಮರಗಳು ಧರೆಗೆ ಉರುಳಿವೆ. ವದ್ದಲದಲ್ಲಿ ಕಟಾವಿಗೆ ಬಂದಿದ್ದ ಸಿದ್ಧರಾಜ ಗೌಡ ಅವರ 4 ಎಕರೆ, ಅವಿನಾಶ ಗೌಡ ಅವರ 2 ಎಕರೆ, ಚನ್ನವಿರೇಶ ಗೌಡ ಅವರ 2.5 ಎಕರೆ, ಉಮೇಶ ಗೌಡ ಅವರ 3 ಎಕರೆ ಪ್ರದೇಶದಲ್ಲಿದ್ದ ಬಾಳೆಮರಗಳು ಆಲಿಕಲ್ಲು ಮಳೆಗೆ ಸೊಂಟ ಮುರಿದು ಬಿದ್ದಿವೆ. ₨ 10 ಲಕ್ಷ ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಬೃಹತ್ ನೀಲಗಿರಿ ಮರ ಬಿದ್ದು ಅನಾನಸ್ ತೋಟಕ್ಕೆ ಹಾನಿಯಾಗಿದೆ.
‘ಬೆಳ್ಳನಕೇರಿಯಲ್ಲಿ 2 ಮನೆಗಳಿಗೆ ಧಕ್ಕೆಯಾಗಿದ್ದು, ಬಸ್ ನಿಲ್ದಾಣದ ಮೇಲೆ ಮರ ಬಿದ್ದು ಜಖಂಗೊಂಡಿದೆ. 20ರಷ್ಟು ವಿದ್ಯುತ್ ಕಂಬಗಳು ಕೆಳಗೆ ಬಿದ್ದಿವೆ. ಮಳೆ ಹಾನಿಯ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಪಿಡಿಒ ಕುಮಾರ್ ವಾಸನ್ ಹೇಳಿದರು.
ತೋಟಗಾರಿಕಾ ಇಲಾಖೆ ಅಧಿಕಾರಿ ಅಣ್ಣಪ್ಪ ನಾಯ್ಕ, ಹಾರ್ಟಿ ಕ್ಲಿನಿಕ್ನ ವಿ.ಎಂ.ಹೆಗಡೆ ಇತರರು ಬುಧವಾರ ಭೇಟಿ ನೀಡಿ ಕಾಳಂಗಿ, ವದ್ದಲ ಭಾಗದ ತೋಟಗಾರಿಕಾ ಬೆಳೆ ಹಾನಿ ಪರಿಶೀಲಿಸಿದರು.
‘ಬನವಾಸಿ ಹೋಬಳಿಯಲ್ಲಿ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಾಳೆ ಬೆಳೆಯುತ್ತಿದ್ದು, 50 ಎಕರೆಯಷ್ಟು ಪ್ರದೇಶದಲ್ಲಿ ಹಾನಿ ಸಂಭವಿಸಿದೆ. ಸುಮಾರು ₨ 1 ಕೋಟಿ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ತೋಟಗಾರಿಕಾ ಇಲಾಖೆಯಿಂದ ವಿಶೇಷ ತಂಡ ರಚಿಸಿ ಮಳೆ ಹಾನಿಯ ಮರು ಸಮೀಕ್ಷೆ ನಡೆಸಲಾಗುವುದು’ ಎಂದು ಅಣ್ಣಪ್ಪ ನಾಯ್ಕ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.