ಶಿರಸಿ: 16ರಿಂದ ಅಂಬಾಕಥಾ ಸಂಭ್ರಮ

7

ಶಿರಸಿ: 16ರಿಂದ ಅಂಬಾಕಥಾ ಸಂಭ್ರಮ

Published:
Updated:

ಶಿರಸಿ: ಶರನ್ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ದೇವಿ ಉಪಾಸನೆಯ ಭಾಗವಾಗಿ ರಾಮಚಂದ್ರಾಪುರ ಮಠದ ಶಾಖಾ ಮಠ ಇಲ್ಲಿನ ಅಂಬಾಗಿರಿಯ ಶ್ರೀರಾಮಕೃಷ್ಣ ಕಾಳಿಕಾ ಮಠದಲ್ಲಿ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಇದೇ 16ರಿಂದ 24ರವರೆಗೆ `ಅಂಬಾಕಥಾ~ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ರವಚನ-ಪೂಜನ-ಗಾಯನ-ವಾದನ-ಚಿತ್ರಣ-ರೂಪಣ-ಅದ್ಭುತ ದರ್ಶನ- ಆನಂದ ನರ್ತನಗಳ ಸಮ್ಮಿಲನದೊಂದಿಗೆ ರಾಮಕಥಾ ಮಾದರಿಯಲ್ಲಿ `ಅಂಬಾಕಥಾ~ ರೂಪಿತವಾಗಿದೆ ಎಂದು ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಮೋಹನ ಭಾಸ್ಕರ ಹೆಗಡೆ, ಅಂಬಾಗಿರಿ ಹವ್ಯಕ ವಲಯದ ಅಧ್ಯಕ್ಷ ವಿ.ಎಂ.ಹೆಗಡೆ ಅಂಗಾಗಿರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮೂಲ ವಾಲ್ಮೀಕಿ ರಾಮಾಯಣ ಆಧರಿಸಿದ ಸಂಕಥನ ಶ್ರೀರಾಮ ಕಥಾದಲ್ಲಿ ಮೊದಲ ದಿನ ರಾಮನನ್ನು, ರಾಮಾಯಣ ಗ್ರಂಥವನ್ನು ವೇದಿಕೆಗೆ ತಂದು ಪ್ರತಿಷ್ಠಾಪಿಸಲಾಗುತ್ತದೆ. ನಂತರ ಶ್ರೀಗಳಿಂದ ಪೂಜನೆ, ಭಕ್ತಿ ಗಾಯನ, ಶ್ರೀಗಳಿಂದ ಸವಿವರ ಪ್ರವಚನ ಜೊತೆಗೆ ಕಲಾವಿದರಿಂದ ಚಿತ್ರವೈಭವ, ಮರಳು ಚಿತ್ರಗಳ ಸೃಷ್ಠಿಯಾಗುತ್ತದೆ. ಕಥಾನಕದ ರೂಪಕ, ಕುಂಜವೈಭವದ ಸಾಕ್ಷಾತ್ಕಾರ, ಅಂತಿಮವಾಗಿ ರಾಮನನ್ನು ನೆನೆದು ಹಾಡು, ನರ್ತಿಸುವ ಆನಂದ ನರ್ತನ ನಡೆಯುತ್ತದೆ. ಇದೇ ಮಾದರಿಯಲ್ಲಿ ಅಂಬಾಕಥಾದ ನಿರೂಪಣೆಯಾಗಲಿದೆ ಎಂದರು.

 

14ರಂದು ಶ್ರೀಗಳು ಪುರಪ್ರವೇಶ ಮಾಡಲಿದ್ದು, 15ರಿಂದ ಗುರುಪಾದುಕಾ ಪೂಜೆ ಪ್ರಾರಂಭವಾಗಲಿದೆ. 16ರಿಂದ 23ರ ತನಕ ಪ್ರತಿದಿನ ಬೆಳಿಗ್ಗೆ 10ಗಂಟೆಯಿಂದ ಸಹಸ್ರಾರು ಸುಹಾಸಿನಿಯರಿಂದ ಕುಂಕುಮಾರ್ಚನೆ ಹಾಗೂ ಸೌಂದರ್ಯ ಲಹರಿ ಪಠಣ, ಮಧ್ಯಾಹ್ನ ಚಂಡೀಹವನ, ಸಂಜೆ 5 ಗಂಟೆಯಿಂದ 9 ಗಂಟೆಯ ವರೆಗೆ ಶ್ರೀಗಳಿಂದ ಅಂಬಾಕಥಾ ಪ್ರವಚನ ನಡೆಯಲಿದೆ.

 

ಅಂಬಾಕಥಾ ಸಾಹಿತ್ಯವನ್ನು ಗಜಾನನ ಶರ್ಮಾ, ಜಗದೀಶ ಶರ್ಮಾ, ನಾರಾಯಣ ಶರ್ಮಾ ಸಿದ್ಧಪಡಿಸಿದ್ದು, ಕಲಾವಿದರಾಗಿ ಶ್ರೀಪಾದ ಭಟ್ಟ ಕಡತೋಕಾ, ಪ್ರೇಮಲತಾ ದಿವಾಕರ (ಗಾಯನ), ಪ್ರಕಾಶ ಹೆಗಡೆ ಕಲ್ಲಾರೆಮನೆ (ಕೊಳಲು), ನೀರ್ನಳ್ಳಿ ಗಣಪತಿ  (ಚಿತ್ರ), ರಾಘವೇಂದ್ರ ಹೆಗಡೆ ಕಡ್ನಮನೆ (ಮರಳುಶಿಲ್ಪ) ಶ್ರೀಪಾದ ಭಟ್ಟ ಕಡತೋಕಾ, ಶ್ರೀಪಾದ ಹೆಗಡೆ ಹಡಿನಬಾಳ, ಶಂಕರನಾರಾಯಣ ಉಪಾಧ್ಯಾಯ, ವಿಷ್ಣು ಭಟ್ಟ ಮತ್ತಿತರರು ಪಾಲ್ಗೊಳ್ಳುವರು ಎಂದರು. ಸುದ್ದಿಗೋಷ್ಠಿಯಲ್ಲಿ  ಪ್ರಮುಖರಾದ ಆರ್.ಎಸ್.ಹೆಗಡೆ, ಗಣಪತಿ ಹೆಗಡೆ, ಶೇಷಗಿರಿ ಭಟ್ಟ, ಎಲ್.ಆರ್.ಭಟ್ಟ, ಜಯರಾಮ ಹೆಗಡೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry