ಶುಕ್ರವಾರ, ಅಕ್ಟೋಬರ್ 18, 2019
28 °C

ಶಿರಾಡಿ ಚತುಷ್ಪತಕ್ಕೆ ಸಹಭಾಗಿತ್ವ: ಪಾಲೆಮಾರ್

Published:
Updated:

ಮಂಗಳೂರು: ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ   ಶಿರಾಡಿ ರಸ್ತೆ ಚತುಷ್ಪಥ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಹೇಳಿದರು.ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ನಗರದ ಕರಾವಳಿ ಉತ್ಸವ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಆಹಾರೋತ್ಸವ ಹಾಗೂ ಯುವ ಕೃತಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಪ್ರಸ್ತಾವನೆಗೆ ಖಾಸಗಿ ಕಂಪೆನಿಗಳು ಸಹಕಾರ ನೀಡಲು ಮೌಖಿಕವಾಗಿ ಒಪ್ಪಿಗೆ ನೀಡಿವೆ. ನೈಸ್ ಕಂಪೆನಿಯ ಅಶೋಕ್ ಖೇಣಿ ಹೆಚ್ಚಿನ ಆಸಕ್ತಿ ತೋರಿದ್ದಾರೆ ಎಂದರು.ಶಿರಾಡಿ ರಸ್ತೆ ಅಭಿವೃದ್ಧಿಗೆ ರೂ. 157 ಕೋಟಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೂ ಹಣ ಬಂದಿಲ್ಲ. ರಾಜ್ಯ ಸರ್ಕಾರ ರೂ. 6 ಕೋಟಿ ವೆಚ್ಚ ಮಾಡಿ ಶಿರಾಡಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ ಎಂದರು. ಕೆರೆ ನೀತಿ:  ಕೆರೆ ಹಾಗೂ ಜಲಾಶಯಗಳ ಮಾಲಿನ್ಯ ತಡೆಗೆ ಹೊಸ ಕೆರೆ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಾಯ್ದೆಯ ಕರಡು ಪ್ರತಿಯಲ್ಲಿ ಕೈಗಾರಿಕೆಗಳು ಹಾಗೂ ಸಂಘ ಸಂಸ್ಥೆಗಳನ್ನು ಹೊರಗಿಟ್ಟಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಸೂಚಿಸಲಾಗಿದೆ. ಕೈಗಾರಿಕೆಗಳೇ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಮಾಡುತ್ತಿವೆ. ಮುಂದಿನ ಅಧಿವೇಶನದಲ್ಲಿ ಈ ಕಾನೂನು ಜಾರಿಗೆ ಬರಲಿದೆ. ಈ ಕಾಯ್ದೆ ಜಾರಿಗೆ ಬಂದರೆ ಕೆರೆ, ಜಲಾಶಯಗಳ ಮಾಲಿನ್ಯ ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಗೆ ಪರಿಸರ ಇಲಾಖೆಗೆ ಇನ್ನಷ್ಟು ಹೆಚ್ಚಿನ ಉತ್ಸಾಹ ತೋರಲಿದೆ ಎಂದ ಅವರು, ಗಣಿಗಾರಿಕೆಯಿಂದ ನಿರ್ದಿಷ್ಟ ಹೆಕ್ಟೇರ್‌ಗೆ ನಿರ್ದಿಷ್ಟ ಮೊತ್ತ ಸಂಗ್ರಹ ಮಾಡಿ ಅದನ್ನು ಅರಣ್ಯ ಅಭಿವೃದ್ಧಿಗೆ ಬಳಸಲಾಗುವುದು ಎಂದರು.

Post Comments (+)