ಸೋಮವಾರ, ಮಾರ್ಚ್ 1, 2021
23 °C

ಶಿರಾಳಕೊಪ್ಪ: ಬರದ ಛಾಯೆ, ಕೆರೆ-ಕಟ್ಟೆಯಲ್ಲಿ ನೀರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾಳಕೊಪ್ಪ: ಬರದ ಛಾಯೆ, ಕೆರೆ-ಕಟ್ಟೆಯಲ್ಲಿ ನೀರಿಲ್ಲ

ಶಿರಾಳಕೊಪ್ಪ: ಕುಡಿಯುವ ನೀರಿಗೆ ತತ್ವಾರ. ಕೆರೆ- ಕಟ್ಟೆಗಳಲ್ಲಿ ನೀರಿಲ್ಲದೇ ಜಾನುವಾರುಗಳಿಗೆ ಹಾಹಾಕಾರ. ಬೆಳೆದ ಬೆಳೆ ಒಣಗುತ್ತಿದೆ, ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ, ಅಂತರ್ಜಲ ಕುಸಿದಿದೆ. ಇದು ಬರದ ಲಕ್ಷಣವಲ್ಲವೇ? ಅಧಿಕೃತವಾಗಿ ಬರಪೀಡಿತ ಪ್ರದೇಶ ಎಂದು ಘೋಷಣೆ ಆಗದಿದ್ದರೂ ಬಯಲು ಸೀಮೆಯೊಂದಿಗೆ ಬೆಸೆದಿರುವ ಶಿರಾಳಕೊಪ್ಪ ಭಾಗದ ತಾಳಗುಂದ, ಉಡುಗಣಿ ಹೋಬಳಿಗಳಲ್ಲಿ ಬರದ ಛಾಯೆ ಕಾಣುತ್ತಿದೆ!

ಪ್ರತಿದಿನ ತಾಪಮಾನ ಹೆಚ್ಚುತ್ತಿದ್ದು, ಕುಡಿಯುವ ನೀರಿಗೂ ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಂರ್ತಜಲಮಟ್ಟ ಪ್ರತಿದಿನ ಕುಸಿಯುತ್ತಿದ್ದು, ನಾಗರಿಕರಿಗೆ ನೀರು ಸರಬರಾಜು ಮಾಡಲು ಗ್ರಾ.ಪಂ.ಗಳು ಪರದಾಡುತ್ತಿವೆ. ತಾಳಗುಂದ ಹೋಬಳಿಯ ತಾಳಗುಂದ, ಬಿಳಿಕಿ, ಕಾಡೇತ್ತಿನಹಳ್ಳಿ, ಕೊರಟಿಗೆರೆ, ಇನಾಂ ಮತ್ತಳ್ಳಿ, ಅಗ್ರಹಾರಮುಚಡಿ, ಶಿರಿಹಳ್ಳಿ ಹಾಗೂ ಮಲ್ಲೇನಹಳ್ಳಿ ಇತ್ಯಾದಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕ ಆಗಿದ್ದು, ಗಂಭೀರವಾಗಿ ಪರಿಗಣಿಸದಿದ್ದರೆ ಹಾಹಾಕಾರ ನಿರ್ಮಾಣವಾಗುವ ಸಾಧ್ಯತೆ ಇದೆ.ಶಿರಾಳಕೊಪ್ಪ ಭಾಗದಲ್ಲಿ ಬಹುತೇಕ ಕೆರೆಗಳು ಭಾಗಶಃ ಬರಿದಾಗಿದ್ದು, ಬಳ್ಳಿಗಾವಿ, ತಾಳಗುಂದ ದಂತ ದೊಡ್ಡ ಕೆರೆಗಳು ಅಲ್ಲಲ್ಲಿ ಜಾನುವಾರುಗಳಿಗೆ ನೀರುಣಿಸುತ್ತಿವೆ. ಕಾನಹಳ್ಳಿ ಗ್ರಾಮದ ಹೊಲಗಳಲ್ಲಿ ಸುಮಾರು 60 ಬೋರ್‌ವೆಲ್‌ಗಳಿದ್ದು, ಅರ್ಧಕ್ಕೂ ಹೆಚ್ಚು ಬೋರ್‌ಗಳಲ್ಲಿ ಹನಿ ನೀರು ಬರುತ್ತಿಲ್ಲ. ಉಳಿದ ಬೋರ್‌ಗಳಲ್ಲಿ ನೀರು ಕಡಿಮೆಯಾಗಿದ್ದು, ವಿದ್ಯುತ್‌ನ ಕಣ್ಣಾಮುಚ್ಚಾಲೇ ಆಟದಿಂದ ರೈತರ ಜೀವನ ಮತ್ತಷ್ಟು ದುಸ್ತರವಾಗಿದೆ.ನಾಲ್ಕು ದಿನಕ್ಕೆ ಒಮ್ಮೆ ನಾಲ್ಕು ಕೊಡಪಾನ ನೀರು, ನೀರಿಗೆ ತತ್ವಾರ, ಸ್ನಾನ ಮಾತ್ರ ವಾರಕ್ಕೊಮ್ಮೆ ಭಾನುವಾರ ಎನ್ನುವ ಪರಿಸ್ಥಿತಿ ಬಿಳಿಕಿ ಗ್ರಾಮದಲ್ಲಿ ಇದೆ. ಹಾಗಾಗಿ, ಪ್ರತಿ ಭಾನುವಾರ ಬಿಳಿಕಿ ಗ್ರಾಮದಿಂದ 13 ಕಿ.ಮೀ. ದೂರದಲ್ಲಿರುವ ಶಿರಾಳಕೊಪ್ಪ ಮಗಳ ಮನೆಯಲ್ಲಿ ಸ್ನಾನ ಮಾಡಿಕೊಂಡು ಬರುತ್ತಿರುವುದಾಗಿ ಖುಷತಾರ್ ಜಾನ್ `ಪ್ರಜಾವಾಣಿ~ಗೆ ತಿಳಿಸಿದರು.ತಾಳಗುಂದ ಗ್ರಾಮಸ್ಥ ರುದ್ರಪ್ಪ `ಪ್ರಜಾವಾಣಿ~ ಜತೆ ಮಾತನಾಡಿ, ಎರಡು ದಿನಕ್ಕೆ ಒಮ್ಮೆ ಕುಡಿಯಲು ನೀರು ಬಿಡುತ್ತಿದ್ದು, ಸಾಕಾಗುತ್ತಿಲ್ಲ ಎಂದ ಅವರು, ನೀರು ಇಲ್ಲದೇ ಬಾಳೆ, ಜೋಳದ ಬೆಳೆಗಳು ಒಣಗಿವೆ. ಕೊಳವೆಬಾವಿಗಳು ಸಹ ನಿಂತಿವೆ ಎಂದು ತಮ್ಮ ಅಳಲು ತೊಡಿಕೊಂಡರು.ತಾಳಗುಂದ ಗ್ರಾಮದ ರೈತ ಪರಸಪ್ಪ ಮಾತನಾಡಿ, ಕಡಿಮೆ ನೀರಿನಿಂದ ಬೆಳೆಯುವ ಮಡಿಕೆ, ಅಲಸಂಧಿಯಂತ ದಾನ್ಯಗಳು ಸಹ ಬಾಡಿ ಹೋಗಿದ್ದು, ರಾಜಕಾರಣಿಗಳು ರೈತರ ಜೀವನದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲ್ಲುಒಡ್ಡು ನಿರ್ಮಾಣ ಮಾಡಿ ತಾಳಗುಂದ ಭಾಗದ ಜನರಿಗೆ ನೀರುಣಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದ ರಾಜಕಾರಣಿಗಳು ಈಗ ರೈತರಿಗೆ ವಿಷ ಉಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾನಹಳ್ಳಿ ರೈತ ಜಯದೇವಪ್ಪ, ಬೆಳೆದ ಜೋಳದ ಬೆಳೆ ನೀರಿಲ್ಲದೆ ಒಣಗಿದ್ದು, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಕಟಾವು ಮಾಡಿದ್ದಾರೆ. ಆದರೆ, ಬೆಳೆಯ ಇಳುವರಿ ಸಹ ಶೇಕಡಾ ಅರ್ಧದಷ್ಟು ಕಡಿಮೆಯಾಗಿದೆ. ಖರ್ಚು ಮಾಡಿರುವ ಬಂಡವಾಳ ವಾಪಸ್ ಬರುವುದು ಕಷ್ಟಸಾಧ್ಯ ಎಂದು ಜಯದೇವಪ್ಪ ತಮ್ಮ ನೋವು ತೋಡಿಕೊಂಡರು.ತಮ್ಮ ಹೊಲದಲ್ಲಿ ಬೆಳೆಯುತ್ತಿರುವ ಮೂರು ವರ್ಷದ ಮಾವಿನ ಸಸಿಗೆ ನೀರು ಕೊಡಲು, ಬೋರ್‌ಗಳಲ್ಲಿ ನೀರು ಬರುತ್ತಿಲ್ಲ. ಜತೆಗೆ, ವಿದ್ಯುತ್‌ನ ಸಮಸ್ಯೆ. ಹಾಗಾಗಿ, ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್‌ನಲ್ಲಿ ಸಸಿಗಳಿಗೆ ನೀರು ಹಾಯಿಸುತ್ತಿರುವುದಾಗಿ ಕಾನಹಳ್ಳಿ ಗ್ರಾಮದ ರೈತ ವಿಜಯ ಮಹಾಂತಸ್ವಾಮಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.