ಶನಿವಾರ, ಏಪ್ರಿಲ್ 17, 2021
31 °C

ಶಿಲಾಯುಗದ ಮನುಷ್ಯನ ಅಸ್ಥಿಪಂಜರ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ಅಶೋಕನ ಶಿಲಾಶಾಸನ ಇರುವ ಮಸ್ಕಿ ಬೆಟ್ಟದ ಹಿಂಭಾಗದಲ್ಲಿ ಶಿಲಾಯುಗದ್ದು ಎನ್ನಲಾದ ಮನುಷ್ಯನ ಅಸ್ಥಿಪಂಜರಗಳು ಪತ್ತೆಯಾಗಿವೆ. ಮಣ್ಣಿನ ಮಡಿಕೆಯಲ್ಲಿ ಇವು ಪತ್ತೆಯಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.ಗುರುವಾರ ಸಂಜೆ ವಿಹಾರಕ್ಕೆ ಹೋಗಿದ್ದ ಹವ್ಯಾಸಿ ಛಾಯಾಚಿತ್ರಗಾರ ಶಶಿಧರ ಹೊಸಮಠ ತಂಡಕ್ಕೆ ಇವು ಕಾಣಸಿಕ್ಕಿವೆ. 15ರಿಂದ 20 ಮಡಿಕೆಗಳಲ್ಲಿ  ಅಸ್ಥಿಪಂಜರಗಳು ಪತ್ತೆಯಾಗಿದ್ದು ಇನ್ನೂ ಅನೇಕ ಮಡಿಕೆಗಳು ಈ ಸ್ಥಳದಲ್ಲಿದ್ದವು. ಒಂದೊಂದು ಅಸ್ಥಿಪಂಜರದ ಅಳತೆ 6ರಿಂದ 7 ಅಡಿಗಳಷ್ಟು ದೊಡ್ಡದಾಗಿದ್ದವು.ಹಿಂದೆ ಮಸ್ಕಿ ಮಾಸಂಗಿಪುರ ಆಗಿತ್ತು. ಅಶೋಕ ಶಿಲಾಶಾಸನ ಇರುವ ಗುಡ್ಡದಲ್ಲಿ ಶಿಲಾಯುಗದ ಕಾಲದಲ್ಲಿ ಜನವಸತಿ ಇತ್ತು ಎನ್ನುವುದಕ್ಕೆ ಈಗ ಅಲ್ಲಿ ದೊರಕಿರುವ ಅಸ್ಥಿಪಂಜರಗಳು ಪುಷ್ಟಿ ನೀಡುತ್ತವೆ ಎಂದು ಇತಿಹಾಸ ಸಂಶೋಧಕರು ನುಡಿಯುತ್ತಾರೆ.ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಇತಿಹಾಸ ಸಂಶೋಧಕ ಡಾ. ಚನ್ನಬಸ್ಸಯ್ಯ ಹಿರೇಮಠ, `ಈ ಅಸ್ಥಿಪಂಜರಗಳು ಕ್ರಿ.ಪೂ. 200ರಿಂದ ಕ್ರಿ.ಶ. 50ವರೆಗೆ ವಾಸ ಮಾಡಿದ ನಾಗರಿಕರದ್ದು, ಬೃಹತ್ ಶಿಲಾ ಸಂಸ್ಕೃತಿ ಕಾಲದ ಜನರ ಅಸ್ಥಿಪಂಜರಗಳು ಇವು~ ಎಂದು ಅಭಿಪ್ರಾಯ ಪಟ್ಟಿದ್ದಾರೆ.1954ರಲ್ಲಿ ಕೇಂದ್ರದ ಪುರಾತತ್ವ ಇಲಾಖೆಯಿಂದ ಸಂಶೋಧನೆಗಾಗಿ ಮಸ್ಕಿಗೆ ಆಗಮಿಸಿದ್ದ ಬಿ.ಕೆ. ತಾಫರ್ ಇಲ್ಲಿಯ ಗುಡ್ಡಗಳನ್ನು ಸುತ್ತಾಡಿ ಹಲವು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅನೇಕ ಗೋರಿಗಳು, ಸಮಾಧಿಗಳು ಪತ್ತೆಯಾಗಿವೆ ಎಂದು ತಾಫರ್ ಸಂಶೋಧನಾ ಪುಸ್ತಕದಲ್ಲಿ ನಮೂದಿಸಿದ್ದಾರೆ.`ಬಿ.ಕೆ. ತಾಫರ್ ಅವರ ಪ್ರಕಾರ ಶಿಲಾಯುಗದ ಕಾಲದಲ್ಲಿ 8 ರೀತಿಯಲ್ಲಿ ಶವಗಳ ಸಂಸ್ಕಾರ ನಡೆಯುತ್ತಿತ್ತು. ಅದರಲ್ಲಿ ಗೋರಿ ನಿರ್ಮಾಣ, ಪೂರ್ಣ ಶವ ಹೂಳುವುದು, ಮಡಿಕೆಯಲ್ಲಿ ಶವಗಳನ್ನು ಇಟ್ಟು ಗುಹೆಯಲ್ಲಿ ಮುಚ್ಚಿಡುವುದು ಹಾಗೂ ಮೃತನ ಅಸ್ಥಿಯನ್ನು ಮಡಿಕೆಯಲ್ಲಿಟ್ಟು ಹೂಳುವ ಪದ್ಧತಿಯೂ ಸೇರಿತ್ತು~ ಎಂದು ಡಾ. ಚನ್ನಬಸ್ಸಯ್ಯ ಹಿರೇಮಠ ತಿಳಿಸಿದ್ದಾರೆ.ಇದೀಗ ಮಸ್ಕಿಯ ಶಾಸನದ ಹಿಂಭಾಗದ ನಡುಗುಡ್ಡದಲ್ಲಿ ಈ ಅಸ್ಥಿಪಂಜರಗಳು ಸಿಕ್ಕಿವೆ. ಅಲ್ಲಲ್ಲಿ ಮಡಿಕೆಗಳನ್ನು ಒಡೆದು ಹಾಕಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕಪ್ಪು, ಕೆಂಪು ಹಾಗೂ ಬೂದಿ ಮಣ್ಣಿನ ಮಡಿಕೆಗಳಲ್ಲಿ ಈ ಶವಗಳನ್ನು ಇಟ್ಟು ಹೂಳಲಾಗಿದೆ. ಈ ಗುಡ್ಡ ಪ್ರಾಚ್ಯವಸ್ತು ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.