ಭಾನುವಾರ, ಏಪ್ರಿಲ್ 11, 2021
23 °C

ಶಿಲಾಯುಗದ ಸಮಾಧಿಗಳಿಗೆ ಬೇಕು ರಕ್ಷಣೆ

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಗಂಗಾವತಿ (ಕೊಪ್ಪಳ ಜಿಲ್ಲೆ):ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದ ವಿಶಾಲ ಬೆಟ್ಟದ ಮೇಲೆ ಹರಡಿಕೊಂಡಿರುವ ಬೃಹತ್ ಶಿಲಾಯುಗದ ಮಾನವ ಸಂಸ್ಕೃತಿಗೆ ಸೇರಿದ ಕ್ರಿ.ಪೂ. 1200ರ ಶಿಲಾ ಸಮಾಧಿಗಳು ಸೂಕ್ತ ರಕ್ಷಣೆ ಇಲ್ಲದೆ ಹಾನಿಗೀಡಾಗುತ್ತಿವೆ.ಸುಮಾರು 3,200 ವರ್ಷಗಳಷ್ಟು ಹಿಂದಿನ, ಶಿಲಾಯುಗದ ಕೊನೆಯ ಕಾಲಘಟ್ಟದ ಅತ್ಯಂತ ರೋಚಕ ಇತಿಹಾಸ ಹೊಂದಿರುವ ಇಲ್ಲಿನ ಶಿಲಾ ಸಮಾಧಿಗಳು ಅಂದಿನ ಮಾನವರ ಬುದ್ಧಿಮತ್ತೆ, ತಂತ್ರಜ್ಞಾನಕ್ಕೆ ಸಾಕ್ಷಿಯಗಿ ನಿಂತಿವೆ.ಬೆಟ್ಟದ ಮೇಲೆ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಶಿಲಾಸಮಾಧಿ ಸ್ಮಾರಕಗಳು ದನಗಾಹಿ, ಧನದಾಹಿಗಳಿಂದಾಗಿ ನಿಧಾನವಾಗಿ ಹಾಳಾಗುತ್ತಿವೆ. ಇಂದು ಕೇವಲ 40ರಿಂದ 60 ಮಾತ್ರ ಸುಸ್ಥಿತಿಯಲ್ಲಿವೆ.ಶಿಲಾ ಸಮಾಧಿಗಳು:
ನಾಗರಿಕ ಸಮಾಜ ಅಂದರೆ ಮೌರ್ಯರ ಸಾಮ್ರಾಜ್ಯ ಕ್ರಿ.ಶ. 200ರಲ್ಲಿ ಉದಯವಾಗುವುದಕ್ಕಿಂತ ಪೂರ್ವದಲ್ಲಿ ಬೆಣಕಲ್ ಬೆಟ್ಟವು ಬೃಹತ್ ಶಿಲಾಯುಗದ ಮಾನವನ ಆವಾಸ ಸ್ಥಾನವಾಗಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತಿದೆ.`ಈಜಿಪ್ಟಿನಲ್ಲಿ ಗಣ್ಯರಿಗೆ ಮತ್ತು ಅರಸರಿಗೆ ಪಿರ‌್ಯಾಮಿಡ್‌ಗಳನ್ನು ಕಟ್ಟಿದಂತೆ ಬೆಣಕಲ್‌ನಲ್ಲಿ ಬುಡಕಟ್ಟು ಜನಾಂಗವು ಪುನರ್ಜನ್ಮದಲ್ಲಿ ನಂಬಿಕೆ ಇರಿಸಿ ಶಿಲಾಸಮಾಧಿ ನಿರ್ಮಾಣ ಮಾಡಿದ್ದರು~ ಎಂದು ಸಂಶೋಧಕ ಶರಣಬಸಪ್ಪ ಕೋಲ್ಕಾರ ಹೇಳುತ್ತಾರೆ.
ಸಮಾಧಿಯ ವೈವಿಧ್ಯಗಳು

ಬೆಣಕಲ್ ಬೆಟ್ಟದ ಶಿಲಾ ಸಮಾಧಿಗಳು ವಿಭಿನ್ನ ಆಕೃತಿ, ರಚನೆ, ವಿನ್ಯಾಸ, ತಂತ್ರಜ್ಞಾನ ಹೊಂದಿವೆ. ಇವನ್ನು ಶಿಲಾಕೋಣೆ, ಶವಪೆಟ್ಟಿಗೆ, ಹಾದಿ ಕೋಣೆಯ ಗೋರಿಗಳು, ಶಿಲಾವೃತ್ತ ಸಮಾಧಿ, ಕಲ್ಲುಗೊಂಬೆಯ ಗೋರಿ ಮತ್ತು ಶವ ಸಮಾಧಿ ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಶಿಲಾ ಸಮಾಧಿಗಳು ಸ್ವಸ್ತಿಕ್ ಮಾದರಿಯಲ್ಲಿವೆ. ಯಂತ್ರಗಳ ನೆರವಿಲ್ಲದೆ ಬೃಹತ್ ಬಂಡೆ, ಚಪ್ಪಡಿಗಳಿಂದ ನಿರ್ಮಿಸಿದ್ದ ಸಮಾಧಿಗಳು ಇಂದಿಗೂ ಸುಸ್ಥಿತಿಯಲ್ಲಿರುವುದು ಅಂದಿನ ಶಿಲಾ ಮಾನವರ ಅದ್ಭುತ ತಂತ್ರಜ್ಞಾನಕ್ಕೆ ಸಾಕ್ಷಿಯಂತಿದೆ.

`ಶಿಲಾಯುಗದ ಅತಿ ವಿರಳ ಪ್ರಾಚೀನ ಸ್ಥಳಗಳಲ್ಲಿ ಬೆಣಕಲ್ ಬೆಟ್ಟವೂ ಒಂದು. ಐತಿಹಾಸಿಕ ಮತ್ತು ಸಂಶೋಧನಾ ದೃಷ್ಟಿಯಿಂದ ಇದು ಅತ್ಯಂತ ಮಹತ್ವ ಪಡೆದಿದೆ. ಈ ಶಿಲಾ ಸಮಾಧಿಗಳ ಸಂರಕ್ಷಣೆ ತ್ವರಿತವಾಗಬೇಕು~ ಎಂದು ಇತಿಹಾಸ ಪ್ರಾಧ್ಯಾಪಕ ಕೆ. ಭಜರಂಗಬಲಿ ಹೇಳುತ್ತಾರೆ.   ಈ ಹಿಂದೆ ಗುಲ್ಬರ್ಗದ ಪ್ರಾದೇಶಿಕ ಕಮೀಷನರ್ ಆಗಿದ್ದ ರಜನೀಶ ಗೋಯೆಲ್, ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ಸತ್ಯಮೂರ್ತಿ ಭೇಟಿ ನೀಡಿದ ಬಳಿಕ ಪ್ರವಾಸಿಗರಿಗೆ ಸ್ಥಳ ಮಾಹಿತಿ ನೀಡುವ ವ್ಯವಸ್ಥೆ ಆಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.