ಬುಧವಾರ, ಮೇ 25, 2022
22 °C

ಶಿಲ್ಪಕಲೆ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಣಿಗೆ ಹಬ್ಬ ಮತ್ತು ಮನಸ್ಸಿಗೆ ಮುದ ನೀಡುವಂತೆ ಕಂಗೊಳಿಸುವ ಕನ್ನಡ ತಾಯಿ ಭುವನೇಶ್ವರಿಯ ರಥ... ಹಾಗೆಯೇ ಒಳಗಡೆ ಅಡಿಯಿಟ್ಟರೆ, ಬೇಲೂರು, ಹಳೆಬೀಡಿನ ಶಿಲಾಬಾಲಿಕೆಯರು ಇಲ್ಲಿ ತಮ್ಮ ಎಂದಿನ ರೂಪು ಲಾವಣ್ಯದಿಂದ ಬಂದವರ ಮನಸೂರೆಗೊಳ್ಳುತ್ತಾರೆ.ಕಾಂಕ್ರೀಟ್ ಕಾಡಿನಲ್ಲಿ ಮನ ತಣಿಸುವ ಸಾಂಪ್ರದಾಯಿಕ ಮತ್ತು ಸಮಕಾಲೀನ ಸಮನ್ವಯಗೊಳಿಸಿದ ಶಿಲ್ಪ ಕಲಾ ಪ್ರದರ್ಶನ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ 27ರವರೆಗೆ ನಡೆಯಲಿದೆ.ಈ ವರ್ಷದ ಶಿಲ್ಪಕಲಾ ಪ್ರದರ್ಶನದಲ್ಲಿ ಒಟ್ಟು 94 ಕೃತಿಗಳಿವೆ. ಇವುಗಳಲ್ಲಿ 52 ಸಮಕಾಲೀನ ಶಿಲ್ಪಗಳು ಮತ್ತು 42 ಸಾಂಪ್ರದಾಯಿಕ ಶಿಲ್ಪಗಳು. ಈ ಬಾರಿಯ ಶಿಲ್ಪಗಳಲ್ಲಿ ಸಾಂಪ್ರದಾಯಿಕ ಶಿಲ್ಪಗಳಾದ ಅರ್ಧ ನಾರೀಶ್ವರ, ಕಾರ್ತಿಕೇಯ, ದುರ್ಗಾದೇವಿ, ಭೂವರಾಹ ಹೀಗೆ ಅನೇಕ ಕಲಾಕೃತಿಗಳು ಅಲ್ಲಿ ಬಂದವರ ಮನ ಸೆಳೆದವು.ಇನ್ನು ಸಮಕಾಲೀನ ಕಲಾಕೃತಿಗಳಲ್ಲಿ ಪವರ್‌ಫುಲ್ ಮಿಶ್ರಮಾಧ್ಯಮ ಎಂಬ ಶೀರ್ಷಿಕೆಯಡಿ ಚಿತ್ರಿಸಿದ್ದ ಕಲಾಕೃತಿಗಳು ಇಂದಿನ ಮಾಧ್ಯಮಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸಿವೆ.ಇಂದಿನ ಮಿಶ್ರ ಮಾಧ್ಯಮದಲ್ಲಿ ಮನುಷ್ಯ ತನ್ನತನವನ್ನು ಕಳೆದುಕೊಂಡು ಕ್ರೂರಿಯಾಗಿ ಹೆಣ್ಣು ಭ್ರೂಣವನ್ನು ಸಾಯಿಸುತ್ತಿರುವ ಕಥೆ ಒಂದೆಡೆಯಾದರೆ, ಮುಳ್ಳಿನ ತಂತಿಯ ಮೇಲಿನ ನಡಿಗೆಯಲ್ಲಿ ನಡೆಯಲಾಗದೆ, ಖಿನ್ನ ಮನಸ್ಕನಾಗಿ ತನ್ನ ಆತ್ಮವಿಶ್ವಾಸ ಕಳೆದುಕೊಂಡು ತನ್ನ ಬಾಳಿಗೆ ಅಂತ್ಯ ಹಾಡುತ್ತಿರುವ ಮನುಷ್ಯನ ದಯನೀಯ ಸ್ಥಿತಿಯನ್ನು ಬಿಂಬಿಸುತ್ತದೆ.

ಇನ್ನೊಂದೆಡೆ ಭ್ರಷ್ಟಾಚಾರವೆಲ್ಲ ದೇಶವನ್ನು ಬಿಡದೆ ಕಾಡುತ್ತಿರುವ ಪರಿಸ್ಥಿತಿಯಲ್ಲಿ `ಎಂಡ್‌ಲೆಸ್ ಕರಪ್ಷನ್~ ಎಂಬ ಶೀರ್ಷಿಕೆಯಡಿಯಲ್ಲಿ ಸಿಗಾರ್ ಸುಡುವ ಟ್ರೇನಂತೆ ಆಗಿದೆ ಎಂಬುದು ದೇಶದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.ಫ್ರೆಶ್ ನ್ಯೂಸ್ ಹಿಂದೆ ಓಡುವ ಮಾಧ್ಯಮದ ಬಗ್ಗೆ ಪತ್ರಿಕೆಯನ್ನು ಓದುತ್ತ ಕುಳಿತು ತಮ್ಮ ತಮ್ಮಲ್ಲಿ ಚರ್ಚೆ ಕೈಗೊಂಡಿರುವ ಮೂರು ವ್ಯಕ್ತಿಗಳ ಚಿತ್ರಣ ಸುದ್ದಿಯ ಹಿಂದೆ ಬರೀ ಮಾಧ್ಯಮದವರು ಮಾತ್ರವಲ್ಲ ಜನರು ಕೂಡ ಇದ್ದಾರೆ ಎಂಬುದನ್ನು ಮನೋಜ್ಞವಾಗಿ ಕಲಾಕೃತಿಗಳ ಮೂಲಕ ಕಲಾವಿದ ಹರಿಯಬಿಟ್ಟಿದ್ದಾರೆ. ತಾಯಿ ಮತ್ತು ಮಗು ಶೀರ್ಷಿಕೆಯಡಿಯಲ್ಲಿರುವ ಕಲಾಕೃತಿಗಳು ತಾಯಿ ಮತ್ತು ಮಗುವಿನ ಪ್ರೇಮದ ಪ್ರತಿಬಿಂಬಗಳಾಗಿ, ಇಂದಿನ ಧಾವಂತದ ಬದುಕಿನಲ್ಲಿ ಅಮ್ಮ ಮತ್ತು ಮಗುವಿನ ವಾತ್ಸಲ್ಯ ಹಿಂದಿನಂತೆಯೇ ಉಳಿದಿವೆ ಎಂಬುದನ್ನು ಸಾಕಾರ ರೂಪದಲ್ಲಿ ತೋರಿಸುತ್ತವೆ.ಯೂನಿಟಿ ಎಂಬ ಶೀರ್ಷಿಕೆಯಡಿಯಲ್ಲಿ ರಚಿಸಿರುವ ಕಲಾಕೃತಿ ಇರುವೆಯ ಒಗ್ಗಟ್ಟು ಮನುಷ್ಯನಿಗೆ ಮಾದರಿಯಾಗಿದೆ ಎಂಬುದನ್ನು ಇಂದು ಛಿದ್ರ-ಛಿದ್ರಗೊಳ್ಳುತ್ತಿರುವ ಮಾನವ ಸಂಬಂಧಗಳಿಗೆ ಮಾದರಿಯಾಗುವಂತೆ ತೋರಿಸಿವೆ. ಅಂತರಂಗದ ಕಡಲಲ್ಲಿ ಹುದುಗಿ ಹೋದ ತನ್ನ ಭಾವನೆಗಳನ್ನು ಹೆಕ್ಕಲು ತೊಡಗಿದ ಮಹಿಳೆ ತನ್ನ ಸುತ್ತ ಸಮಾಜ ಹೆಣೆದಿರುವ ಬಲೆಯನ್ನು ಬಿಡಿಸಲಾಗದೆ ಅದರಲ್ಲೇ ತೊಳಲಾಡುತ್ತಿರುವ ಕಲಾಕೃತಿ ಇಂದಿನ ಮಹಿಳೆಯ ಶೋಷಣೆಯ ಪ್ರತೀಕವಾಗಿ ಕಂಡುಬರುತ್ತದೆ.ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ಈ ಪ್ರದರ್ಶನವನ್ನು ಏರ್ಪಡಿಸಿದೆ.

ಅಕಾಡೆಮಿ ಅಧ್ಯಕ್ಷರಾದ ಡಾ. ಜಿ.ಜ್ಞಾನಾನಂದ ಅವರು, `ಈ ವರ್ಷದ ಪ್ರದರ್ಶನದಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನತೆಯ ಕಲಾಕೃತಿಗಳೆರಡಕ್ಕೂ ಅವಕಾಶ ಕಲ್ಪಿಸಲಾಗಿದೆ.ಇಲ್ಲಿ ಸಾಂಪ್ರದಾಯಿಕತೆ ಅಂದರೆ, ಒಂದು ನಿರ್ದಿಷ್ಟವಾದ ಕಲ್ಲು ಅಥವಾ ಮರದಲ್ಲಿ, ವೇಳೆಯನ್ನು ನೋಡಿ ಶಿಲ್ಪವನ್ನು ಮೂಡಿಸಬೇಕಾಗುತ್ತದೆ. ಶಿಲ್ಪಿಗೆ ಶಾಸ್ತ್ರೀಯ ಜ್ಞಾನ ಇರಬೇಕಾಗುತ್ತದೆ. ಶಿಲ್ಪವು ಶಾಸ್ತ್ರ ಶುದ್ಧವಾಗಿ ತಾಲಮಾನುಸಾರವಾಗಿ ರೂಪುಗೊಳ್ಳಬೇಕು. ಆದರೆ, ಸಮಕಾಲೀನ ಶಿಲ್ಪಗಳಲ್ಲಿ ಈಗ ನೋಡುತ್ತಿರುವ ಎಲ್ಲ ಶಿಲ್ಪಕಲಾಕೃತಿಗಳು ಬರುತ್ತವೆ~`ಸಮಕಾಲೀನ ಕಲಾಕೃತಿಗಳಲ್ಲಿಯೇ ಇಂದಿನ ಯುವಕರಿಗೆ ಹೆಚ್ಚಿನ ಆಸಕ್ತಿ. ಆದರೆ, ಸಾಂಪ್ರದಾಯಿಕ ಶಿಲ್ಪದಲ್ಲಿ ಆಸಕ್ತಿ ಇರುವವರು ಇದ್ದಾರೆ. ಅವರಿಗೆ ಪ್ರೋತ್ಸಾಹದ ಅವಶ್ಯಕತೆಯಿದೆ~ ಎಂದು ಹೇಳಿದರು.ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಜೂನ್ 27 ರವರೆಗೆ ಶಿಲ್ಪಕಲಾಪ್ರದರ್ಶನವು ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 6

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.