ಶಿವಕ್ಕ ಗೌಡಶ್ಯಾನಿಯಾದ ಪ್ರಸಂಗ

7

ಶಿವಕ್ಕ ಗೌಡಶ್ಯಾನಿಯಾದ ಪ್ರಸಂಗ

Published:
Updated:

ಧಾರವಾಡ: ಹೊಳೆಯಲ್ಲಿ ಬಟ್ಟೆ ತೊಳೆಯುವ ಶಿವಕ್ಕ ಗೋಕರ್ಣದ ಗತ್ತಿನ ಗೌಡನ ಗೌಡಶ್ಯಾನಿಯಾಗುತ್ತಾಳೆ. ಹೇಗೆ? ಅದನ್ನು ನಾಟಕ ನೋಡಿಯೇ ತಿಳಿದುಕೊಳ್ಳಬೇಕು!ನವರಾತ್ರಿಯ ಅಂಗವಾಗಿ ರಂಗಾಯಣವು ಏರ್ಪಡಿಸಿರುವ ಯುವರಂಗೋತ್ಸವದಲ್ಲಿ ಬುಧವಾರ ಮೃತ್ಯುಂಜಯ ಕಾಲೇಜಿನ ವಿದ್ಯಾರ್ಥಿಗಳು ಕವಿ ಡಾ.ಚಂದ್ರಶೇಖರ ಪಾಟೀಲ ಅವರು ರಚಿಸಿದ `ಗೋಕರ್ಣದ ಗೌಡಶ್ಯಾನಿ~ ನಾಟಕವನ್ನು ಅಭಿನಯಿಸುವ ಮೂಲಕ ಶಿವಕ್ಕ ಗೌಡಶಾನಿಯಾಗುವ ಪ್ರಸಂಗವನ್ನು ರಂಗದ ಮೇಲೆ ತಂದರು. ಒಂದು ಕಡೆ ಪೌರಾಣಿಕ ದೃಶ್ಯ ಕಣ್ಣೆದುರಿಗೆ ಬಂದರೆ ಇನ್ನೊಂದೆಡೆ ಗೌಡನ ಆರ್ಭಟದ ಮಾತುಗಳು. ಗೌಡನ ಇಂಗ್ಲಿಷ್ ಮೋಹ, ಜೊತೆಗೆ ಧಾರವಾಡ ಸೀಮೆಯ ಬೈಗುಳದ ಪ್ರಸಾದ ತನ್ನ ಸೆಕ್ರೆಟರಿ ಬಸ್ಯಾನಿಗೆ...ಈ ನಾಟಕದ ಪಾತ್ರಕ್ಕೆ ಯುವ ಪ್ರತಿಭೆಗಳು ಜೀವ ತುಂಬಿದ್ದರು. ಆರ್ಭಟತನದಿಂದ ಬರುವ ಆ ಗೌಡನ ಪಾತ್ರಧಾರಿ ಹಳ್ಳಿ ಸೊಗಡಿನ ಗೌಡನ ಪಾತ್ರವನ್ನೇ ನಿಭಾಯಿಸಿದರು. ಇಳಕಲ್ ಸೀರೆಯುಟ್ಟ ಶಿವಕ್ಕ ಹಳ್ಳಿಯ ಭಾಷೆಯ ಮೂಲಕ ಗಮನ ಸೆಳೆದಳು.ಇನ್ನೊಂದೆಡೆ ಶಿವನಿಂದ ಆತ್ಮಲಿಂಗವನ್ನು ತೆಗೆದುಕೊಂಡು ಬಂದ ರಾವಣನ ಪಾತ್ರಧಾರಿ ರಾವಣನಂತೆ ಮೈಕಟ್ಟು ಹೊಂದದಿದ್ದರೂ ರಾವಣನ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದರು.ಶಿವ ಹಾಗೂ ಗಣೇಶನ ಪಾತ್ರಧಾರಿಗಳು ನಾಟಕದ ತುಂಬ ಹಾಸ್ಯವನ್ನೇ ಮೂಡಿಸಿದರು. ಪೌರಾಣಿಕ ಹಾಗೂ ಹಳ್ಳಿ ಗೌಡನ ಪಾತ್ರಧಾರಿಗಳನ್ನು ನಿಭಾಯಿಸುವ ನಾಟಕದ ಮಾಸ್ತರ್ ಪಾತ್ರಧಾರಿ ನಾಟಕದ ಸೂತ್ರಧಾರಿಯ ಪಾತ್ರವನ್ನೂ ನಿರ್ವಹಿಸಿದರು!ಪ್ರಶಾಂತ ಅವರ ಸಂಗೀತ ಹಾಗೂ ಮಂಜುನಾಥ ಮದ್ನೂರ ನಿರ್ದೇಶನದಲ್ಲಿ ನಾಟಕ ಮೂಡಿಬಂತು.

ಇದಕ್ಕೂ ಮುನ್ನ ಲೇಖಕಿ ಪ್ರೊ.ಶಾಂತಾ ಇಮ್ರೋಪುರ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ರಂಗಾಯಣ ನಿರ್ದೇಶಕ ಸುಭಾಷ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry