ಶಿವದರ್ಶನ ಮಾಡಿ ಪುನೀತರಾದ ಭಕ್ತರು

7

ಶಿವದರ್ಶನ ಮಾಡಿ ಪುನೀತರಾದ ಭಕ್ತರು

Published:
Updated:

ಗೋಕಾಕ: ಹರ ಹರ ಮಹಾದೇವ... ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತಾದಿಗಳು ನಗರದ ವಿವಿಧ ದೇವಾಲಯಗಳಿಗೆ ತೆರಳಿ ಮಹಾಶಿವರಾತ್ರಿ ಆಚರಣೆ ನಿಮಿತ್ತ ಶಿವನ ದರ್ಶನ ಪಡೆದು ಪುನೀತರಾದರು.ಮಹಾಶಿವರಾತ್ರಿ ಆಚರಣೆ ಅಂಗವಾಗಿ ವಿವಿಧ ಬಡಾವಣೆಗಳಿಂದಲೂ ಜನರು ನಗರದ ಮಧ್ಯಭಾಗದಲ್ಲಿರುವ ಮಹಾದೇವ ದೇವಸ್ಥಾನ, ಬಣಗಾರ ಗಲ್ಲಿಯ ಶ್ರೀ ಶಂಕರಲಿಂಗೇಶ್ವರ ಹಾಗೂ ಸೋಮವಾರ ಪೇಟೆಯ ಶ್ರೀ ಸಿದ್ದೇಶ್ವರ ದೇವಾಲಯಗಳಿಗೆ ತೆರಳಿ ಭಕ್ತಿಪೂರ್ವಕವಾಗಿ  ಉತ್ತರಾಣಿ ಕಡ್ಡಿ, ಬೆಟ್ಟದಾವರೆ ಪುಷ್ಪ  ಹೀಗೆ ಇನ್ನು ಅನೇಕ ಬಗೆಯ ಫಲಪುಷ್ಪಗಳನ್ನು ದೇವರಿಗೆ ಸಮರ್ಪಿಸಿ ತಮ್ಮ ಹರಕೆಗಳನ್ನು ಸಲ್ಲಿಸಿದರು.ಇದಕ್ಕೂ ಮೊದಲು ನಗರದ ಹೊರವಲಯದ ಘಟಪ್ರಭೆ ಹಾಗೂ ಮಾರ್ಕಂಡೇಯ ನದಿಗಳಲ್ಲಿ ಪುಣ್ಯಸ್ನಾನ ಮಾಡಿ, ಮಡಿಯಿಂದ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು.ಮಹಾಶಿವರಾತ್ರಿ ಪ್ರಯುಕ್ತ ಸೋಮವಾರ ಮುಂಜಾನೆ ಭಕ್ತರು,  ಗೆಣಸು, ಕರ್ಜೂರ, ಹಣ್ಣು-ಹಂಪಲ, ಸಾಬುದಾನಿ ಬೆಲೆ ಗಗನಕ್ಕೇರಿದರೂ  ಅವುಗಳನ್ನು ಖರೀದಿಸಿ ಹಬ್ಬ ಆಚರಣೆ ಮಾಡಲು ಹಿಂದೇಟು ಹಾಕಲಿಲ್ಲ.

ಇಲ್ಲಿಯ ತಂಬಾಕೆ ಜಿನ್ನಿಂಗ್ ಫ್ಯಾಕ್ಟರಿ  ಆವರಣದಲ್ಲಿ  ಪ್ರತಿಷ್ಠಾಪಿಸಿರುವ ದ್ವಾದಶ ಜ್ಯೋತಿರ್ಲಿಂಗವನ್ನು ಸಾವಿರಾರು ಭಕ್ತರು ಸರತಿಯಲ್ಲಿ ದರ್ಶನ ಪಡೆದರು.

 

ಸೋಮವಾರ ರಾತ್ರಿ ನಗರದ ಬಹುತೇಕ ದೇವಸ್ಥಾನಗಳಲ್ಲಿ  ಇಡೀ ರಾತ್ರಿ ಜಾಗರಣೆ ವ್ಯವಸ್ಥೆ ಮಾಡಲಾಗಿತ್ತು. ತಾಲ್ಲೂಕಿನ ಗೋಕಾಕ ಫಾಲ್ಸ್ ತಡದಲ್ಲಿರುವ ತಡಸಲ ಮಹಾಲಿಂಗೇಶ್ವರ, ಸಾವಳಗಿ ಶಿವಲಿಂಗೇಶ್ವರ, ಅರಭಾಂವಿಯ ದುರದುಂಡೀಶ್ವರ ಮಠ ಹಾಗೂ ಮರಡಿಮಠದ ಕೆಂಪಯ್ಯಸ್ವಾಮಿ ಮಠದಲ್ಲಿ  ಭಕ್ತರು  ಶಿವನ ದರ್ಶನ ಪಡೆದರು.ಶಿವಯೋಗಿಗಳ ರಥೋತ್ಸವ

ಬೈಲಹೊಂಗಲ:
ಸ್ಥಳೀಯ ತಿಪ್ಪಿಮಠ (ಮೂರುಸಾವಿರಮಠ) ನೀಲಕಂಠ ಶಿವಯೋಗಿಗಳ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.ರುದ್ರಾಕ್ಷಿಮಠ ಬಸವಲಿಂಗ ಸ್ವಾಮೀಜಿ, ಇಂಗಳೇಶ್ವರಮಠ ಚೆನ್ನಬಸವ ಸ್ವಾಮೀಜಿ, ಶ್ರೀಮಠದ ಉತ್ತರಾಧಿಕಾರಿ ನೀಲಕಂಠ ದೇವರು ಸಾನ್ನಿಧ್ಯವನ್ನು ವಹಿಸಿದ್ದರು.ವೇ.ಮೂ. ವಿಶ್ವನಾಥ ಹಿರೇಮಠ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಪ್ರಭಾಜಿ, ಶ್ರೀಶೈಲ ಬೋಳಣ್ಣವರ, ಎಸ್.ಸಿ.ವೆುಟಗುಡ್ಡ, ಗುರುಸಿದ್ದಪ್ಪ ಹೂಲಿ, ಮಹಾಂತೇಶ ಅಕ್ಕಿ, ಶಂಕ್ರೆಪ್ಪ ತುರಮರಿ, ಮಹಾಂತೇಶ ಮೆಟಗುಡ್ಡ, ರಾಜು ಚಿನಿವಾಲರ, ಜವಳಿ, ಮಡಿವಾಳಪ್ಪ ಹೋಟಿ, ನಾಗಪ್ಪ ಹುಣಶ್ಯಾಳ, ಯಲ್ಲಪ್ಪ ಕೋತಂಬ್ರಿ, ಶಿವಲಿಂಗಪ್ಪ ಕೋತಂಬ್ರಿ, ಈಶ್ವರ ಕೊಪ್ಪದ, ಬಸವರಾಜ ಕುಡಸೋಮಣ್ಣವರ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕೊರವಿಕೊಪ್ಪ, ನಾಗನೂರ, ಚಿವಟಗುಂಡಿ, ಗ್ರಾಮಗಳ ಬಜನಾ ತಂಡಗಳು, ತಿಗಡಿ ಅಡವಿ ಸಿದ್ದೇಶ್ವರ ಕರಡಿ ಮಜಲು, ಬಿರೇಶ್ವರ ಡೊಳ್ಳು, ಚೆನ್ನಮ್ಮ ರಾಣಿ ಸಂಗೀತ ತಂಡ ರಥೋತ್ಸವಕ್ಕೆ ಮೆರಗು ನೀಡಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry