ಶಿವನಸಮುದ್ರ: ಸ್ವಚ್ಛತೆ ದೂರ

7

ಶಿವನಸಮುದ್ರ: ಸ್ವಚ್ಛತೆ ದೂರ

Published:
Updated:

ಕೊಳ್ಳೇಗಾಲ: ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ, ಚರಂಡಿಯಲ್ಲೇ ಮಡುಗಟ್ಟಿ ನಿಂತಿರುವ ಕಲುಷಿತ ನೀರು...ಇದು ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ­ವಾಗಿರುವ ಶಿವನಸಮುದ್ರ ಗ್ರಾಮದ ಚಿತ್ರಣ. ಶಿವನಸಮುದ್ರ ಗ್ರಾಮದಲ್ಲಿ ಮಧ್ಯರಂಗನಾಥ ದೇವಾಲಯ, ಆದಿಶಕ್ತಿ ಮಾರಮ್ಮ ಹಾಗೂ ಶ್ರೀಚಕ್ರ ಹೊಂದಿರುವ ಪ್ರಸನ್ನ ಮೀನಾಕ್ಷಿ ದೇವಾಲಯಗಳಿದ್ದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ.ಈ ಗ್ರಾಮದ ಜನತೆಗೆ ಮೂಲ ಸೌಲಭ್ಯಗಳನ್ನೇ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಿಲ್ಲ. ಈ ಗ್ರಾಮದ ಅನೇಕ ಬೀದಿಗಳಲ್ಲಿ ಚರಂಡಿಯನ್ನೇ ನಿರ್ಮಿಸದ ಕಾರಣ ರಸ್ತೆಯ ಮಧ್ಯದಲ್ಲೇ ತ್ಯಾಜ್ಯ ನೀರು ಹರಿಯುತ್ತಿದೆ. ಕೊಚ್ಚೆ ನೀರಿನಿಂದ ಸೊಳ್ಳೆ ಕಾಟವೂ ಹೆಚ್ಚಾಗಿ, ರೋಗ ರುಜಿನಗಳ ಭಯ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.‘ಗ್ರಾಮದೊಳಗಿನ ರಸ್ತೆ ವ್ಯವಸ್ಥೆ ತೀರಾ ಹದಗೆಟ್ಟಿದೆ. ಮಳೆಗಾಲದಲ್ಲಿ ಈ ರಸ್ತೆಗಳು ಕೆಸರುಮಯವಾಗಿ ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪ್ರಸಿದ್ಧ ಯಾತ್ರಾಸ್ಥಳವೆನಿಸಿರುವ ಈ ಗ್ರಾಮದ ಜನತೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ’ ಎಂಬುದು ಇಲ್ಲಿನ ನಾಗರಿಕರಾದ ಮುತ್ತುರಾಜು, ಮಂಟಿ ಅವರ ದೂರು.ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದಾಗಿ ಇಲ್ಲಿನ ಜನರ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಗ್ರಾಮದ ಮಗ್ಗುಲಲ್ಲೇ ಕಾವೇರಿ ಹರಿಯುತ್ತಿದ್ದರೂ ಈ ಜನರು ಮಾತ್ರ ನೀರಿಗೆ ಪರದಾಡುವ ಸ್ಥಿತಿ ಇದೆ.ಗ್ರಾಮದಲ್ಲಿ ಚರಂಡಿ ನಿರ್ಮಿಸಿ ರಸ್ತೆ ಮೇಲೆ ಹರಿಯುವ ತ್ಯಾಜ್ಯ ನೀರು ತಪ್ಪಿಸಲು ಹಾಗೂ ಸಮರ್ಪಕ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry