ಶಿವಪ್ಪಾ ಕಾಯೋ ತಂದೆ...

7

ಶಿವಪ್ಪಾ ಕಾಯೋ ತಂದೆ...

Published:
Updated:

ಮಹುವಾ ಮರ ಹೂಬಿಟ್ಟಾಗ ಅಥವಾ ಜೇನು ದೊರೆತಾಗಲಷ್ಟೇ ಮದ್ಯ ತಯಾರಿಸಿ ಕುಡಿಯುತ್ತಿದ್ದವರಿಗೆ ಕ್ರೇನುಗಟ್ಟಲೆ ಮದ್ಯ ಕಣ್ಣೆದುರು ಕುಣಿಯತೊಡಗಿದರೆ? ಬೇಟೆಗಾರ ಕುಲಗಳಿಗೆ ಅಕ್ಕಿ ಗೋಧಿ ಸಕ್ಕರೆ ಪರಿಚಯಿಸಿ, ರೇಷನ್ನಿನಲ್ಲಿ ಪೂರೈಸಿ, ಕೃಷಿ-ಬೇಟೆಯ ಕಷ್ಟವಿಲ್ಲದೆ ಆಹಾರ ಭದ್ರತೆ ದೊರಕಿದರೆ?

 

ಮೈಕೈಗೆ ಬಳಿದ ಜೇಡಿಮಣ್ಣೇ ಉಡುಪಾದ ಅರೆನಗ್ನ ಅರಣ್ಯವಾಸಿಗಳಿಗೆ ಅಂದಚಂದದ ಉಡುಪು, ಅದರಿಂದ ಉತ್ಪ್ರೇಕ್ಷೆಗೊಳ್ಳುವ ದೇಹ ಸೌಂದರ್ಯ ನೋಡಿಕೊಳ್ಳಲೊಂದು ಕನ್ನಡಿ ಸಿಕ್ಕರೆ?

 

ತನ್ನ ನಿಯಂತ್ರಣಕ್ಕೆ ಸಿಗದ ಕಾಯಿಲೆ ಕಸಾಲೆಗಳಿಗೆ ಜೀವಗಳ ಬಲಿಕೊಡುತ್ತಿದ್ದ, ಹಲ್ಲುಕಚ್ಚಿ ನೋವು ಸಹಿಸುತ್ತಿದ್ದ ಜನರಿಗೆ ತಕ್ಷಣದ ಪರಿಹಾರವೊಂದು ಮಾತ್ರೆ ಔಷಧ ರೂಪದಲ್ಲಿ ಗೋಚರಿಸಿದರೆ?ಹಗಲು ಹೊತ್ತಿನ ವಿರಾಮ ಕಳೆಯಲು ಹಾಡು, ನರ್ತನ, ವಾದನದಲ್ಲಿ ತೊಡಗುತ್ತಿದ್ದ ಸಂಗೀತಪ್ರಿಯ ಬುಡಕಟ್ಟು ಗುಂಪುಗಳಿಗೆ ರಾತ್ರಿಹಗಲೆನ್ನದೆ ಕೂಗುವ ಟೀವಿ ಒಂದು ಬಟನಿನಷ್ಟೇ ದೂರವೆಂದಾದರೆ?ಆಹಾರ ಸಂಸ್ಕೃತಿ ಬದಲಾದರೆ ಮಿಕ್ಕ ಬದಲಾವಣೆಗೆ ಅದು ನಾಂದಿಯಾಗುತ್ತದೆ. ನಾಲಿಗೆ ಮತ್ತು ಹೊಟ್ಟೆಯ ಒತ್ತಡಕ್ಕೆ ಕೈಕಾಲು ತಲೆ ಹೇಗೆ ಬೇಕಾದರೂ ಕುಣಿಯುತ್ತವೆ. ಹೀಗೆ ಆಹಾರ, ಆರೋಗ್ಯ, ಪ್ರಸಾಧನ, ಮನರಂಜನೆ ಎಲ್ಲವೂ ಕೈಗಾರಿಕೀಕರಣಗೊಂಡ ಜಗತ್ತಿನ ಆಮಿಷಗಳಾಗಿ ಬುಡಕಟ್ಟುಗಳನ್ನು ಅಯಸ್ಕಾಂತದಂತೆ ಸೆಳೆಯುತ್ತವೆ. ಇದರಿಂದ ಏನಾಗುತ್ತದೆ ಎನ್ನುವುದಕ್ಕೆ ಅಂಡಮಾನ್ ದ್ವೀಪದ ಕೆಲ ಆದಿಮ ಬುಡಕಟ್ಟುಗಳು ಉದಾಹರಣೆಯಾಗಿವೆ. ಅಂಡಮಾನಿನಲ್ಲಿ ಆದಿವಾಸಿ ಕುಲಗಳಾದ ಒಂಗೇ ಮತ್ತು ಗ್ರೇಟ್ ಅಂಡಮಾನಿಗಳು ನಾಗರಿಕಗೊಳ್ಳಲು ಅಪಾರ ಪ್ರತಿರೋಧ ತೋರಿ ಈಗ ನಾಗರಿಕರಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಹಾಗೆಯೇ ಇದೆಲ್ಲವನ್ನು ನಿರಾಕರಿಸಿ ಒಂಟಿ ದ್ವೀಪದಲ್ಲಿ ಯಾರ ಸಂಪರ್ಕವಿಲ್ಲದೆ ಬದುಕುತ್ತಿರುವ ಸೆಂಟಿನೆಲೀಯರಿದ್ದಾರೆ. ಇವೆಲ್ಲದರಿಂದ ಅವರು ಪಡೆದಿದ್ದೆಷ್ಟು, ತೆತ್ತಿದ್ದೆಷ್ಟು? ಕಾಲವೇ ಹೇಳಬೇಕು.

ಗ್ರೇಟ್ ಅಂಡಮಾನಿಗಳು

ಇವರು ಒಂದು ಕಾಲದಲ್ಲಿ ಇಡೀ ದಕ್ಷಿಣ ಅಂಡಮಾನಿನಲ್ಲಿ ಹರಡಿಕೊಂಡಿದ್ದ ಹೆಚ್ಚು ಜನಸಂಖ್ಯೆಯಿದ್ದ ಆದಿವಾಸಿ ಜನ. 1789ರಲ್ಲಿ ಕ್ಯಾಪ್ಟನ್ ಆರ್ಕಿಬಾಲ್ಡ್ ಬ್ಲೇರ್ ಮೊದಲು ಈ ದ್ವೀಪಗಳ ಸರ್ವೆಗೆ ಕಾಲಿರಿಸಿದಾಗ 10000 ಜನರಿದ್ದರೆಂಬ ಅಂದಾಜು. ನಂತರ ಬ್ರಿಟಿಷರು ಅಂಡಮಾನಿನಲ್ಲಿ ಯೂನಿಯನ್ ಜ್ಯಾಕ್ ಧ್ವಜ ಹಾರಿಸಿದಾಗ ಸುಮಾರು 5000ದಷ್ಟು ಇದ್ದವರು ಬರಬರುತ್ತ ಸಂಖ್ಯೆಯಲ್ಲಿ ಕಡಿಮೆಯಾದರು. 1901ರಲ್ಲಿ  625 ಜನ ಇದ್ದವರು 1927ರಲ್ಲಿ 200, 1947ರಲ್ಲಿ 25, 1969ರಲ್ಲಿ ಅತಿಕಡಿಮೆ 19 ಜನ ಉಳಿದಿದ್ದರು. ನಂತರ ಏರಿಕೆ ಕಾಣುತ್ತಿರುವ ಜನಸಂಖ್ಯೆ 1971ರಲ್ಲಿ 24, 1999ರಲ್ಲಿ 41 ಹಾಗೂ ಈಗ 2010ರಲ್ಲಿ 52 ಜನ ಬದುಕುತ್ತಿದ್ದಾರೆ.ಗ್ರೇಟ್ ಅಂಡಮಾನಿಗಳಲ್ಲೇ 10 ಪಂಗಡಗಳಿದ್ದು ಅದರಲ್ಲಿ 7 ವಿನಾಶದ ಅಂಚಿಗೆ ಸರಿದು ಕಾಣೆಯಾಗಿವೆ. ಈಗ ಅಕಾ ಜೆರು, ಅಕಾ ಬೊ, ಅಕಾ ಕರಿ ಎಂಬ ಮೂರು ಪಂಗಡಗಳು ಉಳಿದಿವೆ. ಕಳೆದ ವರ್ಷ ಅಕಾಬೊಗಳು ಮಾತ್ರ ಆಡುತ್ತಿದ್ದ ವಿಶಿಷ್ಟ ಬೊವಾ ಭಾಷೆ ಗೊತ್ತಿದ್ದ ಹಿರಿಯ ಜೀವವೊಂದು ಕಣ್ಮುಚ್ಚಿದಾಗ ಆಕೆಯ ಜೊತೆಗೇ ಅವಳ ಭಾಷೆಯೂ ಸಮಾಧಿಯಾಯಿತು. ಈಗ ಭಿನ್ನ ಪಂಗಡಗಳು ಸಾಂಸ್ಕೃತಿಕ, ಭಾಷಿಕ ಅಸ್ಮಿತೆ ಹಾಗೂ ಪ್ರದೇಶವನ್ನು ಸಂಪೂರ್ಣ ಕಳೆದುಕೊಂಡಿವೆ. ಒಂದು ಕಾಲದಲ್ಲಿ ದಕ್ಷಿಣ ಅಂಡಮಾನ್, ರಟ್‌ಲ್ಯಾಂಡ್ ದ್ವೀಪ, ಲಿಟಲ್ ಅಂಡಮಾನಿನ 350 ಕಿಮೀ ಉದ್ದಕ್ಕೂ ವಾಸಿಸುತ್ತಿದ್ದವರು ಈಗ ಸ್ಟ್ರೈಟ್ ದ್ವೀಪಕ್ಕೆ ಸೀಮಿತಗೊಂಡು ಸರ್ಕಾರ ನೀಡಿದ ಸವಲತ್ತುಗಳೊಂದಿಗೆ ಬದುಕುತ್ತಿದ್ದಾರೆ.ಈ ನೀಗ್ರಾಯ್ಡ ಕುಲ ಮತ್ತು ಆಧುನಿಕ ಮನುಷ್ಯನ ಮುಖಾಮುಖಿ ಶುರುವಾದದ್ದು ಅಂಡಮಾನಿಗೆ ಬ್ರಿಟಿಷರು ಕಾಲಿರಿಸಿದ ನಂತರ. ಪೀನಲ್ ಸೆಟಲ್‌ಮೆಂಟ್ ಶುರುವಾದಾಗ ಪೋರ್ಟ್‌ಬ್ಲೇರ್‌ನ ಕೈದಿಗಳೂ, ಬ್ರಿಟಿಷರೂ ಹೆದರುತ್ತಿದ್ದುದು ಗ್ರೇಟ್ ಅಂಡಮಾನಿಗರಿಗೆ.ಗುಂಪುಗಳಲ್ಲಿ ಬಂದು ನಾಗರಿಕ ಮನುಷ್ಯನನ್ನು ಕೊಂದು ಕತ್ತರಿಸುತ್ತಿದ್ದ ಇವರ ಬಗ್ಗೆ ಊಹಾಪೋಹದ ಕತೆಗಳೇ ಹಬ್ಬಿದ್ದವು. 1859 ಮೇನಲ್ಲಿ ಬ್ರಿಟಿಷರೊಂದಿಗೆ ಅಬರ್ಡೀನ್ ಬಜಾರಿನಲ್ಲಿ ಭೀಕರ ಕಾಳಗ ಮಾಡಿದರು. ದೂದ್‌ನಾಥ ತಿವಾರಿ ಎಂಬ ಸಿಪಾಯಿಯು 1857ರ ಸಿಪಾಯಿ ದಂಗೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಜೀವಾವಧಿ ಗಡೀಪಾರು ಶಿಕ್ಷೆಗೊಳಗಾಗಿ 1858ರಲ್ಲಿ ಅಂಡಮಾನಿಗೆ ಕಳಿಸಲ್ಪಟ್ಟಿದ್ದ. ಪೋರ್ಟ್‌ಬ್ಲೇರಿಗೆ ಬಂದ ತಿಂಗಳೊಳಗೆ ತನ್ನ 90 ಜನ ಸಂಗಾತಿಗಳೊಂದಿಗೆ ತಿವಾರಿ ಜೈಲಿನಿಂದ ತಪ್ಪಿಸಿಕೊಂಡ.ಕಾಡು ಹೊಕ್ಕವರಲ್ಲಿ ತಿವಾರಿಯನ್ನು ಬಿಟ್ಟು ಮತ್ತೆಲ್ಲರೂ ಗ್ರೇಟ್ ಅಂಡಮಾನಿಗಳಿಂದ ಹತರಾದರು. ಏನನಿಸಿತೋ, ತಿವಾರಿಯನ್ನು ಕೊಲ್ಲದೇ ತಮ್ಮ ನೆಲೆಗೆ ಕರೆದೊಯ್ದ ಬುಡಕಟ್ಟು ಜನ ಅವನ ಬಟ್ಟೆಬರೆ ತೆಗೆದು ಮೈಗೆ ಮಣ್ಣು ಹಚ್ಚಿ ತಮ್ಮ ಇಬ್ಬರು ಹೆಣ್ಣುಮಕ್ಕಳಾದ ಲೀಪಾ, ಗೀಜಾರನ್ನು ಕೊಟ್ಟು ಮದುವೆ ಮಾಡಿದರು. ಒಂದು ವರ್ಷ ಹಾಗೂ ಹೀಗೂ ಕಾಲ ಕಳೆದ ತಿವಾರಿ ಅವರ ಭಾಷೆ ಕಲಿತ. ಅವರು ಪೋರ್ಟ್‌ಬ್ಲೇರ್ ಬಳಿ ಅಬರ್ಡೀನ್ ಪೊಲೀಸ್ ಸ್ಟೇಷನ್ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದುದನ್ನು ತಿಳಿದುಕೊಂಡ. ಆದಿವಾಸಿಗಳಿಂದ ತಪ್ಪಿಸಿಕೊಂಡ ತಿವಾರಿ ಬ್ರಿಟಿಷರಿಗೆ ಸುದ್ದಿ ಮುಟ್ಟಿಸಿದ.

 

ಬಿಲ್ಲುಬಾಣ ಹಿಡಿದ ಆದಿವಾಸಿಗಳು ಹಾಗೂ ಗನ್-ಪಿಸ್ತೂಲು ಹಿಡಿದ ಬ್ರಿಟಿಷರ ನಡುವೆ ಕಾಳಗ ನಡೆದು ಹಲವಾರು ಆದಿವಾಸಿಗಳೂ, ಬ್ರಿಟಿಷರೂ ಸತ್ತುಹೋದರು. ಇದು ಅಬರ್ಡೀನ್ ಕಾಳಗ ಎಂದು ಹೆಸರಾಯಿತು. ದೂದ್‌ನಾಥ ತಿವಾರಿ ಸಹಾಯ ನೀಡಿದ್ದಕ್ಕಾಗಿ ಬ್ರಿಟಿಷರು ಅವನನ್ನು ಬಿಡುಗಡೆ ಮಾಡಿ 1960ರಲ್ಲಿ ಮೇನ್‌ಲ್ಯಾಂಡಿಗೆ ಕಳಿಸಿದರು.ಅಬರ್ಡೀನ್ ಕಾಳಗದ ನೆನಪಿಗಾಗಿ ಪೋರ್ಟ್‌ಬ್ಲೇರಿನ ಜನಜಂಗುಳಿ ಮಾರುಕಟ್ಟೆ ಪ್ರದೇಶದಲ್ಲಿ ಈಗಲೂ ಒಂದು ಸ್ಮಾರಕ ಸ್ತಂಭ ಕಾಣಬಹುದು. ನಾಗರಿಕ ಜಗತ್ತು ಅಮಾಯಕ ಆದಿವಾಸಿಗಳನ್ನು ಅವರ ನೆಲದಲ್ಲೇ ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಬದಲು ವಿಜಯದ ಕುರುಹಾಗಿ ಸ್ತಂಭ ನಿಲ್ಲಿಸಿ ಮಡಿದ ತನ್ನ ಜನರ ಹೆಸರನ್ನು ಅದರಲ್ಲಿ ಬರೆದಿಟ್ಟುಕೊಂಡಿದೆ!ಈ ಘಟನೆಯ ನಂತರ ದ್ರೋಹ ಬಗೆದ ಆಧುನಿಕ ಮನುಷ್ಯನ ಮೇಲೆ ಆದಿವಾಸಿಗಳ ಕ್ರೋಧ, ಅನುಮಾನ ಮತ್ತಷ್ಟು ಹೆಚ್ಚಾಯಿತು. 1858ರಲ್ಲಿ ಇಂಡಿಯನ್ ನೇವಿಯ ಲೆಫ್ಟಿನೆಂಟ್ ಟೆಂಪಲ್ ಎಂಬಾತ ಮೂರು ನಾಡದೋಣಿಗಳನ್ನು ಹಿಡಿದು ಅಂಡಮಾನಿಗಳ ಗುಡಿಸಲು ನಾಶಗೊಳಿಸಿ ಆರು ಜನರನ್ನು ಕೊಂದ. ನಂತರ ಬುಡಕಟ್ಟುಗಳು ಮೂರು ಬಾರಿ ದಾಳಿ ನಡೆಸಿದವು. ಇದಾದ ಮೇಲೆ ಪೋರ್ಟ್‌ಬ್ಲೇರ್ ಸೂಪರಿಂಟೆಂಡೆಂಟ್ ಸ್ಥಳೀಯರ ಜೊತೆ ಸ್ನೇಹದಿಂದಿರುವ ಅವಶ್ಯಕತೆ ಮನಗಂಡು ಅಧಿಕಾರಿಗಳು ಮತ್ತು ಅಪರಾಧಿಗಳು ಬುಡಕಟ್ಟುಗಳ ಜೊತೆ ಹೇಗೆ ವರ್ತಿಸಬೇಕೆಂದು ನೀತಿ ಸಂಹಿತೆಯೊಂದನ್ನು ರೂಪಿಸಿದ.`ಅಂಡಮಾನ್ ಹೋಂ~ ತೆರೆಯಲಾಯಿತು. ಕ್ಯಾಪ್ಟನ್ ಕಾರ್ಬೈನ್ ಅದರ ಮುಖ್ಯಸ್ಥನಾದ. ಆತ 28 ಅಂಡಮಾನಿಗಳ ಮನವೊಲಿಸಿ ಅಂಡಮಾನ್ ಹೋಂನಲ್ಲಿರುವಂತೆ ಮಾಡಿದ. ಅವನ ನಂತರ ಬಂದ ಇ.ಎಚ್.ಮ್ಯಾನ್ ಅಂಡಮಾನಿಗರ ಕುರಿತು ವ್ಯವಸ್ಥಿತ ಅಧ್ಯಯನ ನಡೆಸಿದ. ತಪ್ಪಿಸಿಕೊಂಡು ಓಡುವ ಕೈದಿಗಳನ್ನು ಹಿಡಿದು ತರಲು ಬೇಟೆನಾಯಿಗಳಂತೆ ಅವರನ್ನು ಬಳಸಿಕೊಳ್ಳಲಾಯಿತು.

 

1900ರ ತನಕ ಹೀಗೇ ಮುಂದುವರೆಯಿತು. ಆದರೆ ನಾಗರಿಕ ಜಗತ್ತಿನೊಂದಿಗೆ ಏರ್ಪಟ್ಟ ನಿರಂತರ ಸಂಪರ್ಕ ಗ್ರೇಟ್ ಅಂಡಮಾನಿಗಳ ಪಾಲಿಗೆ ಬಹು ತುಟ್ಟಿಯಾಗಿ ಪರಿಣಮಿಸಿತು. ಎರಡು ಬಾರಿ ಕಾಡಿದ ದಡಾರಕ್ಕೆ (ಮೀಸಲ್ಸ್ ಎಪಿಡೆಮಿಕ್) ಹಲವರು ಬಲಿಯಾದರು. ನಂತರ ಅಂಡಮಾನ್ ಹೋಂಗಳನ್ನು ಮುಚ್ಚಲಾಯಿತು.ಹೀಗೆ ತಮ್ಮ ಕುಲದ ಸಾವಿರಾರು ಹಿರಿಯರನ್ನು ಕಳೆದುಕೊಂಡ ಗ್ರೇಟ್ ಅಂಡಮಾನಿಗಳು ಇಂದು ವಿನಾಶದ ಅಂಚಿನಲ್ಲಿರುವ ಸಮುದಾಯ. ಪ್ರತ್ಯೇಕವಾಗಿ ಸ್ಟ್ರೈಟ್ ದ್ವೀಪದಲ್ಲಿ ವಾಸಿಸುತ್ತಿದ್ದಾರೆ. ಮೀನು, ನೀರಾನೆ, ಏಡಿ, ಆಮೆ, ಮೊಟ್ಟೆ, ಹಂದಿ, ಮೊಸಳೆ, ಆಕ್ಟೋಪಸ್, ಮೃದ್ವಂಗಿಗಳು, ಗೆಡ್ಡೆಗೆಣಸು ಮುಖ್ಯ ಆಹಾರವಾಗಿದ್ದ ಬೇಟೆಯ ಕುಲ ಈಗ ಅನ್ನ, ಚಪಾತಿ, ಮಸಾಲೆ ಸಾಂಬಾರ್, ಮೀನು ಫ್ರೈ ಮಾಡಿ ತಿನ್ನುವಷ್ಟು ನಾಗರಿಕರಾಗಿದ್ದಾರೆ. ನಾಗರಿಕರ ಎಲ್ಲ ದುರಭ್ಯಾಸ, ದುಶ್ಚಟ, ಕಾಯಿಲೆಗಳೂ ಅವರಿಗೆ ಅಂಟಿಕೊಂಡಿವೆ. ಕುಡಿತಕ್ಕೆ ಅಂಟಿಕೊಂಡಿದ್ದಾರೆ. ನಾಗರಿಕ ಸಂಪರ್ಕದ ತನಕ ನಗ್ನರಾಗಿಯೂ ಆತ್ಮಗೌರವ ಹೊದ್ದ ಗ್ರೇಟ್ ಅಂಡಮಾನಿಗಳು ಈಗ ಲಭ್ಯವಿರುವ ಯಾವ ಉಡುಪಾದರೂ ಸರಿ, ಧರಿಸುತ್ತಾರೆ. ಅಲಂಕಾರವನ್ನು ತುಂಬ ಇಷ್ಟಪಡುತ್ತಾರೆ. ಕೆಲವರಿಗೆ ಜೆಟ್ಟಿ-ಬಂದರಿನಲ್ಲಿ ಸಹಾಯಕರ ಕೆಲಸ ಕೊಡಲಾಗಿದೆ. ಪಾರಂಪರಿಕ ಜ್ಞಾನ ಹೊಂದಿದ್ದ, ತಮ್ಮಷ್ಟಕ್ಕೆ ತಾವು ಸಾವಿರಾರು ವರ್ಷ ಬದುಕಿದ್ದ ಅವರಿಗೆ ಗ್ರೇಟ್ ಅಂಡಮಾನಿಗಳೆಂಬ ಉದ್ದನೆಯ ಹೆಸರು ನೀಡಿ ನಾವು ಮಾಡಿರುವ ಉಪಕಾರ ಇಂಥದು.

 

ಒಂಗೇ

ಲಿಟಲ್ ಅಂಡಮಾನ್ ದ್ವೀಪದ ಒಳ ಪ್ರದೇಶಗಳಲ್ಲಿ ಬದುಕುವ ಒಂಗೇಗಳು ನೀಗ್ರೋ ಲಕ್ಷಣ ಹೊಂದಿದ ಕುಳ್ಳ ಮೈಕಟ್ಟಿನ ಗಟ್ಟಿಜನರು. 1825ರಲ್ಲಿ ಬ್ರಿಟಿಷ್ ನೌಕಾಧಿಕಾರಿಯೊಬ್ಬ ಈ ಜನರ ಜೊತೆ ಸಂಪರ್ಕ ಸಾಧಿಸಲು ಯತ್ನಿಸಿ ಭೀಕರ ಕಾಳಗವಾಯಿತು. ಅದು ನಾಗರಿಕ ಜಗತ್ತಿನೊಡನೆ ಅವರ ಪ್ರಥಮ ಮುಖಾಮುಖಿ. ನಂತರದ ಭೇಟಿಗಳೂ ರಕ್ತಮಯವಾಗೇ ಇದ್ದವು. ಈ ಆದಿವಾಸಿಗಳನ್ನು ಪರಿಚಯ ಮಾಡಿಕೊಳ್ಳಲು ಬ್ರಿಟಿಷರು ಮತ್ತೆ ಮತ್ತೆ ಪ್ರಯತ್ನಿಸಿ ಅಂತೂ ಕೊನೆಗೆ ಯಶಸ್ವಿಯಾದರು. ಆದರೆ ನಾಗರಿಕ ಜಗತ್ತಿನ ಸಂಪರ್ಕ ಹಲವು ಜೈವಿಕ, ದೈಹಿಕ ಬದಲಾವಣೆಗಳನ್ನುಂಟುಮಾಡಿ ಆ ಸಮುದಾಯಕ್ಕೆ ದೊಡ್ಡ ಹಾನಿ ಮಾಡಿದೆ. ಹಲವು ಕಾಯಿಲೆಗಳು ಮುತ್ತಿ ಎಷ್ಟೋ ಸಾವುನೋವುಗಳಾಗಿವೆ.ಈಗವರು 99 ಜನ ಉಳಿದಿದ್ದಾರೆ. ಈ ಸಮುದಾಯ ಮತ್ತದರ ಅನನ್ಯತೆ ರಕ್ಷಿಸುವ ಸಲುವಾಗಿ ಅಂಡಮಾನ್ ಆಡಳಿತ ಲಿಟಲ್ ಅಂಡಮಾನ್ ಬಳಿ ಸೌತ್ ಬೇ ಹಾಗೂ ದುಗಾಂಗ್ ಕ್ರೀಕ್‌ಗಳಲ್ಲಿ ಎಲ್ಲ ಸೌಲಭ್ಯ ಒದಗಿಸಿ ಪುನರ್ವಸತಿ ಕಲ್ಪಿಸಿದೆ. ಶಾಲೆ ತೆರೆಯಲಾಗಿದೆ. ವಯಸ್ಕರ ಕಲಿಕಾ ಕೇಂದ್ರವೂ ಇದೆ.

ಸೆಂಟಿನೆಲೀಯರು

ಪೋರ್ಟ್‌ಬ್ಲೇರ್ ಪಶ್ಚಿಮಕ್ಕಿರುವ ಪುಟ್ಟ ದ್ವೀಪ ಉತ್ತರ ಸೆಂಟಿನೆಲ್. ಆ ದ್ವೀಪದಲ್ಲಿರುವ ಆದಿವಾಸಿ ಸಮುದಾಯ ಸೆಂಟಿನೆಲೀಯರು. ಇಡೀ ವಿಶ್ವದಲ್ಲೇ ತಮ್ಮ ಜೀವನಶೈಲಿ-ಪ್ರದೇಶವನ್ನು ನಾಗರಿಕ ಜಗತ್ತಿನಿಂದ ಸಂಪೂರ್ಣ ಬೇರೆಯಾಗಿಡುವಲ್ಲಿ ಯಶಸ್ವಿಯಾಗಿರುವ ಏಕೈಕ ಸಮುದಾಯ ಅವರದು. ಅವರ ವಾಸಸ್ಥಾನ ಭಾರತಕ್ಕೆ ಸೇರಿದ್ದರೂ ತಮ್ಮ ನೆಲದ ಮೇಲೆ ಅವರಿಗೆ ಸಂಪೂರ್ಣ ಸ್ವಾಮ್ಯವಿದೆ. 60 ಸಾವಿರ ವರ್ಷ ಕೆಳಗಿನ ಶಿಲಾಯುಗ ಮನುಷ್ಯನ ಜೀವಂತ ಕೊಂಡಿ ಅವರು.ಆ ದ್ವೀಪ ಬಿಟ್ಟು ಬೇರೆಲ್ಲೂ ಹೋಗದ ಇವರಿಗೆ ಸಾವಿರಾರು ವರ್ಷಗಳಿಂದ ಇತರ ಮೂಲನಿವಾಸಿ ಕುಲಗಳ ಸಂಪರ್ಕ ಇಲ್ಲ. ಬೇಟೆ ಮತ್ತು ಮೀನುಗಾರಿಕೆಯನ್ನೇ ಆಹಾರಕ್ಕಾಗಿ ಸಂಪೂರ್ಣ ಅವಲಂಬಿಸಿರುವ ಈ ಸಮುದಾಯಕ್ಕೆ ಕೃಷಿ ಗೊತ್ತಿಲ್ಲ. ಬೆಂಕಿ ಗೊತ್ತಿಲ್ಲ. ಲೋಹ ತಯಾರಿಕೆ, ಕುಲುಮೆ ಗೊತ್ತಿಲ್ಲ. ಕೆಲ ಆಯುಧ ಬಳಸುತ್ತಾರೆ.ಜಾವೆಲಿನ್, ಬಿಲ್ಲು, ಮೂರ‌್ನಾಲ್ಕು ತರಹದ ಬಾಣ ಉಪಯೋಗಿಸುತ್ತಾರೆ. ದ್ವೀಪದ ಹತ್ತಿರ ಒಡೆದ ಹಡಗುಗಳ ಲೋಹ ಬಳಸಿ ಆಯುಧ ಮಾಡಿಕೊಂಡಿದ್ದಾರೆ. ಕಡಲ ಜೀವಿಗಳೇ ಮುಖ್ಯ ಆಹಾರ. ತೆಂಗು ನೈಸರ್ಗಿಕವಾಗಿ ಬೆಳೆಯದಿದ್ದರೂ ತೇಲಿ ಬರುವ ಕಾಯಿ ಅವರಿಗೆ ಗೊತ್ತು. ಬಾಣದಲ್ಲಿ ಮೀನು ಹಿಡಿಯುತ್ತಾರೆ. 10 ಮೀ. ದೂರದ ತನಕ ನಿಖರ ಗುರಿಯಿಟ್ಟು ಜಾವೆಲಿನ್ ಬಿಸಾಡುತ್ತಾರೆ.ಸೆಂಟಿನೆಲೀಯರನ್ನು ಪರಿಚಯ ಮಾಡಿಕೊಳ್ಳಲು ಆಧುನಿಕ ಮನುಷ್ಯ ಪ್ರಯತ್ನಿಸುತ್ತಲೇ ಇದ್ದರೂ ಅವರು ಸ್ನೇಹ ಹಸ್ತ ಚಾಚಿಲ್ಲ. ಸೆಂಟಿನೆಲೀಯರಷ್ಟೇ ಅಲ್ಲ, ಜಗತ್ತಿನ ಬಹುತೇಕ ಆದಿವಾಸಿ ಬುಡಕಟ್ಟುಗಳು ಹೊರಜಗತ್ತಿನೊಂದಿಗೆ ಇಷ್ಟು ಶತ್ರುತ್ವ ಹೊಂದಲು ಕಾರಣಗಳೇನು? ನಾಗರಿಕರ ಅತ್ಯಾಚಾರ, ದೌರ್ಜನ್ಯವನ್ನು ಪರಂಪರಾಗತವಾಗಿ ಎದುರಿಸಿ ಉಳಿದುಕೊಂಡಿರುವ ಅವರು ಆ ನೆನಪನ್ನು ಮರೆತಿಲ್ಲ.1879ರಲ್ಲಿ ಆದಿವಾಸಿಗಳನ್ನು `ಮನುಷ್ಯ~ರನ್ನಾಗಿ ಮಾಡುವ ಪ್ರಯತ್ನದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಸೆಂಟಿನೆಲ್ ದ್ವೀಪಕ್ಕೆ ಹೋಗಿ ಸ್ವಲ್ಪ ವಯಸ್ಸಾದ ಒಂದು ಜೋಡಿಯನ್ನೂ ಕೆಲವು ಮಕ್ಕಳನ್ನೂ ಹಿಡಿದು ತಂದ. ಪೋರ್ಟ್‌ಬ್ಲೇರಿಗೆ ಬಂದ ಕೆಲ ದಿನಗಳಲ್ಲೇ ಹಿರಿಯ ಜೋಡಿಗೆ ಆರೋಗ್ಯ ಕ್ಷೀಣಿಸಿ ಅವರು ತೀರಿಕೊಂಡರು. ನಂತರ ಮಕ್ಕಳನ್ನು ವಾಪಸು ಬಿಟ್ಟುಬರಲಾಯಿತು. ಆ ಅಧಿಕಾರಿ ಸೆಂಟಿನೆಲೀಯರು ಆರೋಗ್ಯವಂತರಲ್ಲವೆಂದೂ, ಅವರ ಮುಖ ಒಂದೂ ಭಾವನೆಯಿಲ್ಲದ ಈಡಿಯಾಟಿಕ್ ಚಹರೆ ಹೊಂದಿದೆಯೆಂದೂ, ಅವರು ವರ್ತನೆಯೇ ಗೊತ್ತಿಲ್ಲದ ಕಾಡುಜನರೆಂದೂ ಜರೆದ. ಆ ಮಕ್ಕಳೊಂದಿಗೆ ದ್ವೀಪಕ್ಕೆ ರವಾನಿಸಿದ ಕಾಯಿಲೆಗಳ ಬಗ್ಗೆ ಅವನಿಗೆ ಕೊಂಚವೂ ಕಾಳಜಿಯಿರಲಿಲ್ಲ.ಆದರೆ ಭಾರತ ಸರ್ಕಾರ ದ್ವೀಪ ಸಂದರ್ಶಿಸಲು ಹತ್ತಿರ ಹೋದಾಗ ಕಂಡ ಸೆಂಟಿನೆಲೀಯರು ತುಂಬ ಆರೋಗ್ಯವಂತರಾಗಿದ್ದರಲ್ಲದೆ ಚುರುಕಾಗಿ ಕೈ ಬಾಯಿ ಆಡಿಸುತ್ತಾ ತಮ್ಮ ಭಾಷೆ ಮಾತನಾಡುವ ಬುದ್ಧಿವಂತರಾಗಿಯೂ ಇದ್ದರು. 1967ರಿಂದ ಅಂಡಮಾನಿ ಆಡಳಿತವು ದೋಣಿಗಳಲ್ಲಿ ಅವಶ್ಯವಿರುವ ವಸ್ತುಗಳನ್ನು ಒಯ್ದು ಅವರ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನಿಸಿದೆ.

 

ಆದರೆ ಸ್ನೇಹ ಗಳಿಸುವುದಿರಲಿ, ಕೆಲವರು ಪ್ರಾಣ ಕಳೆದುಕೊಳ್ಳುವಂತಾಗಿ 90ರ ದಶಕದ ನಂತರ ಈ ಕಾರ್ಯಕ್ರಮ ಕೈಬಿಡಲಾಯಿತು. 2006ರಲ್ಲಿ ಅವರ ದ್ವೀಪದ ಬಳಿ ಅಕ್ರಮ ಮೀನುಗಾರಿಕೆಗೆ ತೆರಳಿದ ದೋಣಿಯ ಇಬ್ಬರು ಬೆಸ್ತರನ್ನು ಕೊಂದರು. ಮೃತರ ದೇಹ ತರಲು ಹೆಲಿಕಾಪ್ಟರ್ ಹೋದಾಗ ಪೈಲಟ್ ಕಡೆ ಬಾಣಗಳ ಮಳೆ ಸುರಿಸಿದರು.

 

ಹಿಂದೂ ಮಹಾಸಾಗರದ ಸುನಾಮಿ ಲಕ್ಷಾಂತರ ಜನರನ್ನು ದುರಂತದಲ್ಲಿ ಮುಳುಗಿಸಿದಾಗ ಸುನಾಮಿಯ ದಾರಿಯಲ್ಲೇ ಇದ್ದ ಸೆಂಟಿನೆಲ್ ದ್ವೀಪವಾಸಿಗಳು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದರು. ಸುನಾಮಿ ಅಲೆಗಳಿಂದ, ಭೂಕಂಪದಿಂದ ಹೇಗೆ ಬದುಕುಳಿದರೋ, ಎಷ್ಟು ಜನ ಸಾವನ್ನಪ್ಪಿದರೋ ತಿಳಿದಿಲ್ಲ. ಅವರು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂದು ನೋಡಹೋದ ಹೆಲಿಕಾಪ್ಟರನ್ನು ಬಾಣ ಬಿಟ್ಟು ಓಡಿಸಿದರು. ಹೊರಜಗತ್ತಿನ ಯಾವುದೇ ಸಂಪರ್ಕ, ಸಹಾಯ ಬಯಸದೆ ಒಬ್ಬಂಟಿಯಾಗಿ ನೈಸರ್ಗಿಕ ವಿಪತ್ತನ್ನೂ ಎದುರಿಸಿದ ಗಟ್ಟಿಗರ ಕುಲ ಅದು.ದ್ವೀಪಕ್ಕೆ ಭೇಟಿ ಇತ್ತವರು ಗಮನಿಸಿರುವಂತೆ, ಅವರು ಮರದ ಕೊಡಲಿ ಹಿಡಿದಿರುತ್ತಾರೆ. ಅಪರಿಚಿತ ದೋಣಿ ಕಂಡೊಡನೆ 30-40 ಜನರ ಗುಂಪು ತೀರಕ್ಕೆ ಬಂದು ನಾಗರಿಕರನ್ನು ಎದುರಿಸುತ್ತದೆ. ಅವರಲ್ಲಿ ಅರ್ಧದಷ್ಟು ಜೋಡಿಗೆ ಮಕ್ಕಳಿದ್ದವು. ಹೆಂಗಸರ ಸಂಖ್ಯೆ ಗಂಡಸರಿಗಿಂತ ಕಡಿಮೆಯಿತ್ತು. ಅವರ ಗಣತಿ ಇಲ್ಲಿಯವರೆಗೂ ದೂರದಿಂದಲೇ ನಡೆದಿದೆ.2001ರಲ್ಲಿ 21 ಗಂಡು 18 ಹೆಣ್ಣುಗಳನ್ನು ಗಮನಿಸಲಾಗಿದೆ. ಬೇಟೆ ಸಮುದಾಯಗಳು ಪ್ರತಿ 1.5 ಚ.ಕಿಮೀಗೆ ಒಬ್ಬ ವ್ಯಕ್ತಿಯನ್ನು ಹೊಂದುತ್ತವೆಂಬ ನಿಯಮದ ಪ್ರಕಾರ ಅವರ ಜನಸಂಖ್ಯೆಯನ್ನು ನಿರ್ಧರಿಸಲಾಗಿದೆ.ದಕ್ಷಿಣ ಅಮೆರಿಕಾದ ಚಿಂಟಾಲಾರ್ಗಾ ಬುಡಕಟ್ಟುಗಳ ಕತೆ ನೆನಪಾಗುತ್ತಿದೆ: ನಾಗರಿಕ ಜಗತ್ತಿಗೆ ಅಪಾರ ಪ್ರತಿರೋಧ ತೋರಿದ್ದ ಬ್ರೆಜಿಲ್‌ನ ಈ ಬುಡಕಟ್ಟು ರಬ್ಬರ್ ಬೆಳೆಗಾರರ ದೌರ್ಜನ್ಯಕ್ಕೆ ಬಲಿಯಾದವರು.

 

ಒಬ್ಬ ಪ್ಲಾಂಟರ್ ಈ ಭಯಂಕರ ಕಾಡುಜನರನ್ನು ನಿರ್ನಾಮ ಮಾಡಲು ಹೆಲಿಕಾಪ್ಟರಿನಿಂದ ಡೈನಮೈಟ್ ಬಿಸಾಡುವ ಯೋಜನೆ ಹಾಕಿದ್ದ. ಸ್ಫೋಟದ ನಂತರ ಯಾರಾದರೂ ಉಳಿದರೇ ಎಂದು ನೋಡುತ್ತ ಹೊರಟವರಿಗೆ ಒಬ್ಬ ಚಿಂಟಾ ತಾಯಿ ಮಗುವಿಗೆ ಹಾಲೂಡಿಸುತ್ತಿರುವುದು ಕಾಣಿಸಿತು.

 

ಆ ಮಗುವಿನ ತಲೆ ಹಾರಿಸಿ, ತಾಯಿಯನ್ನು ತಲೆಕೆಳಗಾಗಿ ಮರಕ್ಕೆ ನೇತಾಡಿಸಿ ಅರ್ಧರ್ಧ ಸೀಳಿದ್ದಾಗಿ ಆತ ಹೆಮ್ಮೆಯಿಂದ ಹೇಳಿಕೊಂಡಿದ್ದ. ಈ ಪ್ರಕರಣ ಕೋರ್ಟಿನಲ್ಲಿ ಹಲವು ವರ್ಷ ನಡೆದು ಅಂತೂ ಕೊನೆಗೆ ಒಬ್ಬನಿಗೆ 10 ವರ್ಷ ಜೈಲಾಯಿತು. ಆದರೆ ಆತನಿಗೆ ಕ್ಷಮಾದಾನ ನೀಡಲಾಯಿತು. ಬಿಡುಗಡೆಯಾಗಿ ಹೊರಬಂದವನು, `ಈ ಆದಿವಾಸಿ ಜನ ಸೋಮಾರಿಗಳು ಮತ್ತು ದ್ರೋಹಿಗಳು, ಅವರನ್ನು ಕೊಲ್ಲುವುದೇ ಸೂಕ್ತ~ ಎಂದು ಹೇಳಿದ!ದಕ್ಷಿಣ ಅಮೆರಿಕಾದ ಚಿಂಟಾಲಾರ್ಗಾಗಳಂತೆಯೇ ತಮ್ಮ ಪ್ರದೇಶವನ್ನು ಇಂದಿಗೂ ಕಾಯ್ದುಕೊಂಡಿರುವ ಸೆಂಟಿನೆಲೀಯರಿಗೆ ಸದ್ಯಕ್ಕೆ ಕ್ರೂರಪ್ರಾಣಿಗಳಿಂದಾಗಲೀ, ಪ್ರಕೃತಿಯಿಂದಾಗಲೀ ಅಪಾಯವಿಲ್ಲ. ಅಪಾಯವೇನಿದ್ದರೂ ನಾಗರಿಕ ಮನುಷ್ಯನದೇ.

ಓ ದೇವರೇ, ಉತ್ತರ ಸೆಂಟಿನೆಲ್ ಎಂಬ `ಈಡನ್ ಗಾರ್ಡನ್~ನ ಈ ಆಡಂ-ಈವ್‌ರನ್ನು ರಕ್ಷಿಸು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry