ಶಿವಮೊಗ್ಗದಲ್ಲಿ ಬ್ಯಾಸ್ಕೆಟ್‌ಬಾಲ್ ಹೆಜ್ಜೆ

7

ಶಿವಮೊಗ್ಗದಲ್ಲಿ ಬ್ಯಾಸ್ಕೆಟ್‌ಬಾಲ್ ಹೆಜ್ಜೆ

Published:
Updated:

ಬ್ಯಾಸ್ಕೆಟ್‌ಬಾಲ್ ಆಟದ ಪ್ರೀತಿಗೆ ಬಿದ್ದವರ ದೊಡ್ಡಪಡೆಯೇ ಶಿವಮೊಗ್ಗದಲ್ಲಿದೆ. 

ಬ್ಯಾಸ್ಕೆಟ್‌ಬಾಲ್‌ನ ಕರ್ನಾಟಕ ತಂಡಕ್ಕೆ ಕೆಲ ವರ್ಷಗಳ ಕಾಲ ನಾಯಕರಾಗಿದ್ದವರು ಶಿವಮೊಗ್ಗದ ಯು.ಎನ್. ಬಾಲಾಜಿ. ಗ್ರಾಮಾಂತರ ವಲಯದಿಂದ ಹೀಗೆ ರಾಜ್ಯ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ನಾಯಕತ್ವ ಒದಗಿಸಿದ್ದು ಬಾಲಾಜಿ ಅವರೇ ಮೊದಲು, ಅವರೇ ಕೊನೆ. ಎಪ್ಪತ್ತರ ದಶಕದಲ್ಲಿ ಜಿಲ್ಲೆಯಲ್ಲಿ ಬಹಳ ಜನಪ್ರಿಯತೆ ಹೊಂದಿದ್ದ ಈ ಆಟದ ಚಟುವಟಿಕೆಗಳು ನಂತರದ ವರ್ಷಗಳಲ್ಲಿ ಕಳೆಗುಂದಿತ್ತು. ಈಗ ಮತ್ತೆ ಹಿಂದಿನ ಹಿರಿಮೆ ಗಳಿಸಲು ಹೊಸ ಹೆಜ್ಜೆಗಳನ್ನು ಹಾಕುತ್ತಿದೆ.ಶಿವಮೊಗ್ಗಕ್ಕೆ ಈ ಆಟ ಪರಿಚಯಿಸಿದ್ದು ಶೇಷಾಚಲ ಶೆಟ್ರು. ಸಹ್ಯಾದ್ರಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಶೆಟ್ರು, ಆಸಕ್ತ ಯುವಕರನ್ನು ಕಲೆ ಹಾಕಿ ಪ್ರತಿ ನಿತ್ಯ ಬಿ.ಎಚ್. ರಸ್ತೆಯ ಮೆಯಿನ್  ಮಿಡ್ಲ್‌ಸ್ಕೂಲ್‌ನ ಮೈದಾನದಲ್ಲಿ ಆಟದ ಪಾಠ ಹೇಳಿದರು. ಅಲ್ಲಿಂದ ಆರಂಭವಾದ ಆಟ, ನಿಧಾನಕ್ಕೆ ಕರ್ನಾಟಕ ಸಂಘದ ಹಿಂಭಾಗದ ರೋವರ್ಸ್‌ಕ್ಲಬ್‌ಗೆ ಸ್ಥಳಾಂತರಗೊಂಡಿತು. ಬಹುಕಾಲ ಅಲ್ಲಿಯೇ ಆಟಗಾರರು ತರಬೇತುಗೊಂಡರು. ಅಲ್ಲಿಂದ ಆಟಗಾರರು ನೇರವಾಗಿ ನೆಲೆಗೊಂಡಿದ್ದು ನೆಹರೂ ಕ್ರೀಡಾಂಗಣದಲ್ಲಿ.1972ರಲ್ಲಿ ಜಿಲ್ಲೆಯ ಬ್ಯಾಸ್ಕೆಟ್‌ಬಾಲ್  ಚಟುವಟಿಕೆಗೆ ಹೊಸ ತಿರುವು ಸಿಕ್ಕಿತು. ನೆಹರೂ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ `ಬೆಲಗೂರು ವೆಂಕಣ್ಣ ಸ್ಮಾರಕ ಬ್ಯಾಸ್ಕೆಟ್‌ಬಾಲ್ ಕಪ್' ಆ ಕಾಲದಲ್ಲಿ ಅಪಾರ ಜನರನ್ನು ಆಕರ್ಷಿಸಿತ್ತು. ಇಲ್ಲಿಗೆ ಆಗಿನ ರಾಜ್ಯಮಟ್ಟದ ತಂಡಗಳೆಲ್ಲವೂ ಬಂದಿದ್ದವು. ಅದು ಜಿಲ್ಲೆಯ ಮಟ್ಟಿಗೆ ಮೊದಲ ಹೊನಲು ಬೆಳಕಿನ ಆಟ.`ಆ ಸಂದರ್ಭದಲ್ಲಿಯೇ ನಾವೆಲ್ಲ ಈ ಆಟದಲ್ಲಿ ಇನ್ನಷ್ಟೂ ಆಸಕ್ತಿ ಬೆಳೆಸಿಕೊಂಡೆವು' ಎಂದು ನೆನಪುಗಳನ್ನು ಮೆಲುಕು ಹಾಕುತ್ತಾರೆ ಹಿರಿಯ ಆಟಗಾರ ಯು.ಎನ್. ಬಾಲಾಜಿ.ಬಾಲಾಜಿ, ಮೈಸೂರು ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗುವ ಮೂಲಕ ಬ್ಯಾಸ್ಕೆಟ್‌ಬಾಲ್ ಆಟ ಆರಂಭಿಸಿದವರು. 1973ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಆಡಿ ಅವರು ಅನುಭವ ಗಳಿಸಿದ್ದರು. ನಂತರ  ದಕ್ಷಿಣ ವಲಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡಕ್ಕೆ ನಾಯಕರಾಗಿದ್ದರು. ಬೆಂಗಳೂರಿನಲ್ಲಿ ಅಮೆರಿಕಾ ತಂಡದೊಂದಿಗೆ ಸ್ನೇಹಪರ ಪಂದ್ಯಗಳನ್ನಾಡಿದ ರಾಜ್ಯದ ಪ್ರೆಸಿಡೆಂಟ್ ತಂಡದ ನಾಯಕತ್ವ ವಹಿಸಿ, ಜಯ ಕಂಡಿದ್ದರು. ಇವರದೇ ನಾಯಕತ್ವದಲ್ಲಿ ಜಿಲ್ಲೆಯಿಂದ ಭಾಗವಹಿಸಿದ ತಂಡ ರಾಜ್ಯಮಟ್ಟದ ದಸರಾ, ರಿಪಬ್ಲಿಕ್, ರೋಟ್ಯಾಕ್ಸ್ ಮತ್ತಿತರರ ಕ್ರೀಡಾಕೂಟಗಳಲ್ಲಿ ಹಲವು ಪ್ರಶಸ್ತಿ ಬಹುಮಾನಗಳನ್ನು ಗಳಿಸಿತ್ತು.ಬಾಲಾಜಿ ಅವರ ಜತೆ, ಜತೆಗೆ ಜಿಲ್ಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ಆಡಿ, ಬೆಳೆದವರು ಹರೀಶ್ ಶಾಸ್ತ್ರಿ. 19 ವರ್ಷದ ಒಳಗಿನ ರಾಜ್ಯ ತಂಡದಲ್ಲಿ ಇವರು ಆಡಿದ್ದಾರೆ. ಅಲ್ಲದೇ, 19 ವರ್ಷದ ಒಳಗಿನ ಭಾರತ ತಂಡದ ತರಬೇತಿ ಶಿಬಿರಕ್ಕೂ ಒಮ್ಮೆ ಆಯ್ಕೆಯಾಗಿದ್ದರು. ಇವರ ಜತೆಗೆ ಆಟಕ್ಕೆ ಇಳಿದವರು ಭದ್ರಾವತಿಯ ಎಸ್.ಎಲ್. ನಂಜುಂಡಸ್ವಾಮಿ. ಕರ್ನಾಟಕ ಜೂನಿಯರ್ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದರು. ರಿಪಬ್ಲಿಕ್ ಪಂದ್ಯಾವಳಿಯ ವಿಜೇತ ತಂಡದ ಆಟಗಾರರು ಹೌದು. ನಂತರ ಇವರು ಬ್ಯಾಸ್ಕೆಟ್‌ಬಾಲ್‌ನಲ್ಲಿ ತರಬೇತುದಾರರಾಗಿಯೂ ಹೆಸರು ಮಾಡಿದ್ದರು.ಈ ತಲೆಮಾರು ಜಿಲ್ಲೆಯಲ್ಲಿ ಸಕ್ರಿಯರಾಗಿರುವಾಗಲೇ 1982ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಷ್ಟ್ರಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿಯೊಂದು ಎರಡನೇ ತಲೆಮಾರಿನ ಆಟಗಾರರಿಗೆ ಪ್ರೇರಣೆ ನೀಡಿತು. ಕೆ. ಜಗದೀಶ್, ಪ್ರಕಾಶ್, ಶ್ರೀಕಾಂತ್ ಆಟಗಾರರಾಗಿ ಹೆಸರು ಪಡೆದರು. ಶಿವಮೊಗ್ಗದಲ್ಲಿ ಈಗ ಶಿವಮೊಗ್ಗ ಯೂತ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ಆಶ್ರಯದಲ್ಲಿ ನಡೆದ ರಾಜ್ಯ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಹುತೇಕ ಆಯೋಜಕರು ಅದೇ ತಲೆಮಾರಿನವರು.ಅಂದು ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಗಮನ ಸೆಳೆದಿದ್ದ ಕೆ.ಜಗದೀಶ್ ಇವತ್ತಿಗೂ ಅದೇ ಉತ್ಸಾಹ ಉಳಿಸಿಕೊಂಡಿದ್ದಾರೆ. ಇವರು ಪ್ರಸಕ್ತ ರಾಜ್ಯ ಚಾಂಪಿಯನ್‌ಷಿಪ್ ಸಂಘಟಿಸಿರುವ ಕ್ಲಬ್‌ನ ಕಾರ್ಯದರ್ಶಿಯಾಗಿದ್ದಾರೆ. `ಶಿವಮೊಗ್ಗದ ಹಲವು ಕಡೆ ಈಗ ಆಟದ ಮೈದಾನಗಳಿವೆ. ಅಲ್ಲೆಲ್ಲಾ ಬ್ಯಾಸ್ಕೆಟ್‌ಬಾಲ್ ಅಂಕಣವನ್ನು ಸಿದ್ಧಪಡಿಸೇಕಿದೆ. ಪ್ರತಿ ಶಾಲೆಗಳಲ್ಲೂ ಬ್ಯಾಸ್ಕೆಟ್‌ಬಾಲ್ ಕ್ರೀಡೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ' ಇತ್ಯಾದಿ ಹಲವು ಕನಸುಗಳನ್ನು ಶಿವಮೊಗ್ಗ ಯೂತ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ಕಾರ್ಯದರ್ಶಿ ಜಗದೀಶ್ ಹಂಚಿಕೊಳ್ಳುತ್ತಾ ತಮ್ಮ ಕ್ಲಬ್ ಆ ನಿಟ್ಟಿನಲ್ಲಿ ಹಾಕಿಕೊಳ್ಳುತ್ತಿರುವ ಕಾರ್ಯಕ್ರಮಗಳ ವಿವರಗಳನ್ನು ಬಿಚ್ಚಿಡುತ್ತಾರೆ.ಡಿಸೆಂಬರ್ 4ರಿಂದ 9ರವರೆಗೆ ಶಿವಮೊಗ್ಗ   ಯೂತ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ವತಿಯಿಂದ ನಡೆದ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ 30 ಪುರುಷರ ತಂಡ, 10 ಮಹಿಳಾ ತಂಡಗಳು ಭಾಗವಹಿಸಿದ್ದವು.ಇದೀಗ ಭಾರತ ಕ್ರೀಡಾ ಪ್ರಾಧಿಕಾರದ ಬ್ಯಾಸ್ಕೆಟ್‌ಬಾಲ್ ತರಬೇತಿದಾರ ರಾಜೇಂದ್ರನಾಯ್ಕ ಇಲ್ಲಿ ಹೊಸಬರಿಗೆ ತರಬೇತಿ ನೀಡುತ್ತಿದ್ದಾರೆ. ಜಿಲ್ಲೆಯಿಂದ ನಾಲ್ವರು ಕ್ರೀಡಾಪಟುಗಳು ರಾಜ್ಯ ತಂಡವನ್ನು ಇತ್ತೀಚಿನ ವರ್ಷಗಳಲ್ಲಿ ಪ್ರತಿನಿಧಿಸಿದ್ದಾರೆ. 13ವರ್ಷದ ಒಳಗಿನ ರಾಜ್ಯ ತಂಡದಿಂದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ನಗರದ ಸರ್ವೋದಯ ಶಾಲೆಯ ಅಶ್ವಿನಿ ಕಳೆದ ವರ್ಷ ಪ್ರತಿನಿಧಿಸಿದ್ದರೆ,  ಈ ವರ್ಷ 13 ವರ್ಷದ ಒಳಗಿನ ರಾಜ್ಯ ತಂಡಕ್ಕೆ ಅಶ್ವಿನಿ ಜತೆ ನಗರದ ಮಧು, 16 ವರ್ಷದ ಒಳಗಿನ ತಂಡದಲ್ಲಿ ರೋಶಿನಿ, ಪೂಜಾ ರಾಜ್ಯಮಟ್ಟದಲ್ಲಿ ಆಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry