ಶಿವಯೋಗಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

7

ಶಿವಯೋಗಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

Published:
Updated:
ಶಿವಯೋಗಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

ಬೆಂಗಳೂರು: `ಹತ್ತನೇ ಶತಮಾನದಲ್ಲಿ ಗಂಗರು ಮತ್ತು ಚೋಳರ ನಡುವಿನ ರಾಜಕೀಯ ಸಂಘರ್ಷವನ್ನು ತಪ್ಪಿಸಿದ ಶಿವರಾತ್ರಿಯೋಗೀಶ್ವರ ಸ್ವಾಮೀಜಿಗಳ ತತ್ವವನ್ನು ಪ್ರಸಕ್ತ ಎದುರಾಗುವ ರಾಜಕೀಯ ಬಿಕ್ಕಟ್ಟಿನ ಪರಿಹಾರದ ಮಂತ್ರವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ' ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.ನಗರದ ಜೆಎಸ್‌ಎಸ್ ಶಾಲೆಯಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಹಾಗೂ ಘನಲಿಂಗ ಶಿವಯೋಗಿ ಸಭಾಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ದೇಶದಲ್ಲಿರುವ ಸದೃಢ ಅಧ್ಯಾತ್ಮ ಚಿಂತನೆಯಿಂದಲೇ ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳು ಆಕರ್ಷಿತವಾಗಿವೆ. ಇತಿಹಾಸ ಮತ್ತು ಪುರಾಣದಲ್ಲಿರುವ ಮಹೋನ್ನತ ವಿಚಾರಗಳನ್ನು ಅರಿತುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು' ಎಂದು ಕರೆ ನೀಡಿದರು.`ಪರಂಪರೆ ಮತ್ತು ಆಧುನೀಕತೆಯ ನಡುವೆ ಸಮನ್ವಯತೆ ಸಾಧಿಸಿರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೇ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ' ಎಂದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅವರು, `ಕೇವಲ ವೀರಶೈವ ಮತವಲ್ಲದೇ ಎಲ್ಲ ಜನಾಂಗದವರ ಹಿತರಕ್ಷಣೆಗೆ ದುಡಿಯುತ್ತಿರುವ ಸುತ್ತೂರು ಮಠ ಮಠಪರಂಪರೆಯಲ್ಲೇ ವಿಶೇಷ ಸ್ಥಾನ ಪಡೆದಿದೆ. ಅಮೆರಿಕ, ಮಾರಿಷಸ್ ಸೇರಿದಂತೆ ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಮಾಡಬೇಕಾದ ಶಿಕ್ಷಣ ಕ್ರಾಂತಿಯನ್ನು ಮಠ ವಹಿಸಿಕೊಂಡಿರುವುದಕ್ಕೆ ಸಂತಸವೆನಿಸುತ್ತದೆ' ಎಂದು ಹರ್ಷ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಅಂಚೆ ಸೇವಾ ಮಂಡಳಿ ಸದಸ್ಯೆ ಯಶೋಧರಾ ಮನೆನ್, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಇತರರು ಉಪಸ್ಥಿತರಿದ್ದರು.

ಅಡುಗೆ ಅನಿಲ ಮಿತಿ ಹೆಚ್ಚಳ: ಸಕಾರಾತ್ಮಕ ಪ್ರತಿಕ್ರಿಯೆ

ಅಡುಗೆ ಅನಿಲದ ಸಿಲಿಂಡರ್‌ಗಳ ಮಿತಿ ಹೆಚ್ಚಳದ ಬಗ್ಗೆ ಈಗಾಗಲೇ ಸಂಸತ್‌ನಲ್ಲಿ ಚರ್ಚೆ ನಡೆಸಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ' ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸದ್ಯದಲ್ಲೇ ಅಡುಗೆ ಅನಿಲಮಿತಿ ಹೆಚ್ಚಳದ ಕುರಿತ ಗೊಂದಲ ಬಗೆಹರಿಯಲಿದೆ. ಈಗಾಗಲೇ ಶೇ 80ರಷ್ಟು ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿರುವುದರಿಂದ ಹೆಚ್ಚಿನ ಆಮದಿನ ಬಗ್ಗೆ ಚಿಂತನೆ ನಡೆಸಿಲ್ಲ. ಬದಲಿಗೆ 2016ರವೇಳೆಗೆ ಈ ಆಮದಿನ ಪ್ರಮಾಣವನ್ನು ಶೇ 40ಕ್ಕೆ ಇಳಿಸುವ ಬಗ್ಗೆ ನೀಲನಕ್ಷೆಯನ್ನು ರೂಪಿಸಲಾಗಿದೆ' ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry