ಶಿವರಾತ್ರಿ ಉತ್ಸವ 1ರಿಂದ

7

ಶಿವರಾತ್ರಿ ಉತ್ಸವ 1ರಿಂದ

Published:
Updated:

ಕಾರವಾರ: ಗೋಕರ್ಣದಲ್ಲಿ ಮಾ. 1ರಿಂದ 6ರ ವರೆಗೆ ಮಹಾಶಿವರಾತ್ರಿ ಉತ್ಸವ ನಡೆಯಲಿದೆ. ಆರು ದಿನಗಳ ಕಾಲ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಅಡಳಿತ ಮಂಡಳಿಯ ಕಾರ್ಯದರ್ಶಿ ಜಿ.ಕೆ.ಹೆಗಡೆ ತಿಳಿಸಿದರು.  ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ರಾಮಚಂದ್ರಾಪುರ ಮಠದ ಆಡಳಿತಕ್ಕೆ ವಹಿಸಿದ ನಂತರ ಮಹಾಶಿವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಮಾ.1 ರಂದು ಮಹಾಶಿವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ವಾಮೀಜಿ ಅವರಿಂದ ಇದೇ ಮೊದಲ ಬಾರಿಗೆ ‘ಶ್ರೀರಾಮ ಕಥಾಧಾರೆ’ ಪ್ರವಚನ ನಡೆಯಲಿದೆ. ಪ್ರವಚನಕ್ಕೆ ಪೂರಕವಾಗಿ ಬಿ.ಕೆ.ಎಸ್. ವರ್ಮಾ ಅವರು ಚಿತ್ರ ಬಿಡಿಸಲಿದ್ದಾರೆ ಎಂದರು.ಮಾ. 2ರಂದು ಗೋಕರ್ಣದ ಮರಳು ತೀರದಲ್ಲಿ ಡಾ. ಬಿ.ಕೆ.ಎಸ್.ವರ್ಮಾ ಅವರು ರಚಿಸಿರುವ ಮಹಾಬಲೇಶ್ವರನ ಮರಳು ಕಲಾಕೃತಿಯನ್ನು ರಾಘವೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಗೋಕರ್ಣದ ಮಹರ್ಷಿ ದೈವರಾತ ಅವರಿಗೆ ಮರಣೋತ್ತರ ‘ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪರಮೇಶ್ವರ ಹೆಗಡೆ ಅವರಿಂದ ಗಾಯನ ಹಾಗೂ ಗುರುಮೂರ್ತಿ ಹಾವಗೋಡಿ ಮತ್ತು ತಂಡದವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹೆಗಡೆ ತಿಳಿಸಿದರು.ಮಾರ್ಚ್ 3 ರಂದು ಶ್ರೀಪಾದ ಭಟ್ಟ ಅವರಿಂದ ‘ಗೀತ ರಾಮಾಯಣ’ ಸಂಗೀತ ಸುಧೆ. ಗೋಕರ್ಣದ ರಾಜೇಶ್ವರಿ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಚಂದನ ಮತ್ತು ಚೈತ್ರಾ ಅವರಿಗೆ ಶಿವಪಾರ್ವತಿ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಅವರು ವಿವರಿಸಿದರು. ಮಾ.4ರಂದು ಅನಾಥ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಮಲ್ಲಗಂಭ ಪ್ರದರ್ಶನ. ಪ್ರೊ . ಶಂಭು ಭಟ್ಟ ಅವರಿಂದ ಕೊಳಲು ವಾದನ. ಸಿದ್ದಾಪುರದ ಮಾಯಾ ಭಟ್ಟ ಅವರಿಗೆ ಕಾವ್ಯ ಗಾಯನ ಹಾಗೂ ಸಂಧ್ಯಾ ಭಟ್ಟ ಅವರಿಂದ ‘ಲಘು ಸಂಗೀತ’ ಕಾರ್ಯಕ್ರಮ ನಡೆಯಲಿದೆ ಎಂದು ಅವರು ನುಡಿದರು.ಮಾ. 5ರಂದು ಖ್ಯಾತ ಉದ್ಯಮಿ ಕಿಶೋರ ಅವರ್ಸೆಕರ ಅವರಿಗೆ ‘ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗುರುರಾಜ ಹೆಗಡೆ ಹಾಗೂ ವಿಜೇತಾ ಹೆಗಡೆ ಅವರಿಂದ ತಬಲಾ ಬುಗಲ್‌ಬಂದಿ. ಕಲಾವೃಂದ ಅಂಕೋಲಾ ಇವರಿಂದ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಾ. 6ರಂದು ಬಳ್ಳಾರಿ ಜಿಲ್ಲೆಯ ಕಲಾವಿದ ಪರಶುರಾಮಪ್ಪ ಅಂಗೂರ ಅವರಿಂದ ಗೀತಗಾಯನ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹೆಗಡೆ ಹೇಳಿದರು.  ಶಿವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ವಿ.ಆರ್.ಮಲ್ಲನ್, ಸದಸ್ಯರಾದ ಪ್ರದೀಪ ನಾಯಕ, ಶೇಖರ ನಾಯ್ಕ, ಬೀರಣ್ಣ ನಾಯಕ, ಬಾಲಕೃಷ್ಣ ಭಟ್ಟ ಜಂಬೆ, ಮಹೇಶ ಶೆಟ್ಟಿ. ಎಸ್.ಕೆ.ಅಡಿ, ರಾಜೇಶ ನಾಯಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry