ಶಿವರಾತ್ರಿ: ಶಿವಾಲಯಗಳಲ್ಲಿ ಭಕ್ತ ಪ್ರವಾಹ

7

ಶಿವರಾತ್ರಿ: ಶಿವಾಲಯಗಳಲ್ಲಿ ಭಕ್ತ ಪ್ರವಾಹ

Published:
Updated:

ಬೈಂದೂರು:  ಶಿವರಾತ್ರಿಯ ಪರ್ವದಿನವಾದ ಸೋಮವಾರ ಬೈಂದೂರು ಪರಿಸರದ ಶಿವಾಲಯಗಳಿಗೆ ಭಕ್ತರ ಪ್ರವಾಹ ಹರಿದುಬಂದಿತ್ತು. ಕಡಲತೀರದ ಶಿವಾಲಯಗಳಾದ ಬೈಂದೂರಿನ ಸೋಮೇಶ್ವರ, ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ಮತ್ತು ಮರವಂತೆಯ ಗಂಗಾಧರೇಶ್ವರ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಶಿವಾರ್ಚನೆಗೈದರು. ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ ನಡೆದವು.ಬೈಂದೂರು ಸಮೀಪದ ಗಂಗಾನಾಡಿನ ಒಣಕೊಡ್ಲು ಮಹಾಲಿಂಗೇಶ್ವರ ದೇವಾಲಯ ಬೈಂದೂರಿನಿಂದ ಆರು ಕಿಲೋಮೀಟರ್ ದೂರದ ಅರಣ್ಯ ಭಾಗದಲ್ಲಿದೆ. ಈ ದೇವಾಲಯದಲ್ಲಿ ಎಲ್ಲದಿನ ಬ್ರಾಹ್ಮಣ ಅರ್ಚಕರು ಪೂಜೆ ನಡೆಸುತ್ತಾರಾದರೆ, ಶಿವರಾತ್ರಿ ದಿನ ಎಲ್ಲ ವರ್ಗದ ಜನ ಗರ್ಭಗುಡಿ ಪ್ರವೇಶಿಸಿ, ಅರ್ಚಕರ ಮಾರ್ಗದರ್ಶನದಲ್ಲಿ ತಾವೇ ಶಿವಲಿಂಗವನ್ನು ಸ್ಪರ್ಷಿಸಿ ಅಭಿಷೇಕ, ಅರ್ಚನೆ ಮತ್ತು ಮಂಗಳಾರತಿ ಎತ್ತಿ ವಿಶೇಷ ಪೂಜೆ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ನಸುಕಿನಿಂದಲೇ ಜನ ಬೈಂದೂರಿನಿಂದ ವಿವಿಧ ವಾಹನಗಳಲ್ಲಿ ಕುಟುಂಬ ಸಮೇತರಾಗಿ ಇಲ್ಲಿಗೆ ಆಗಮಿಸಿದ್ದರು.

 

ಜನರ ನೂಕುನುಗ್ಗಲಿನ ನಡುವೆ, ಸರತಿಯ ಸಾಲಿನಲ್ಲಿ ನಿಂತು ದೇವಾಲಯ ಪ್ರವೇಶಿಸಿ ಲಿಂಗಾರ್ಚನೆಗೈದು ಅಭೀಷ್ಟ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದೂರದ ಊರುಗಳಿಂದಲೂ ಹಲವು ಗಣ್ಯರು ಆಗಮಿಸಿ ಸ್ವಯಂಪೂಜೆ ನೆರವೇರಿಸಿದರು.ಗುಜ್ಜಾಡಿಯ ಗುಹೇಶ್ವರದಲ್ಲೂ ಸಾವಿರಾರು ಜನ ಗುಹೇಶ್ವರ ದರ್ಶನ ಪಡೆದರು. ತ್ರಾಸಿ-ಕುಂದಾಪುರ ಹೆದ್ದಾರಿಯಿಂದ ಎರಡು ಕಿಲೋಮೀರ್ ದೂರದಲ್ಲಿರುವ ಈ ದೇವಾಲಯದಲ್ಲಿ ಅರ್ಚಕರೂ ಸೇರಿದಂತೆ ಒಮ್ಮೆಗೆ ಸುಮಾರು ಹತ್ತು ಜನ ಕುಳಿತಿರಬಹುದಾದ ಗುಹೆಯೊಳಗೆ ಶಿವಲಿಂಗವಿದೆ. ಈ ಸ್ಥಳ ತಲಪಲು ಎಂಟು ಅಡಿ ಉದ್ದದ, ಒಬ್ಬೊಬ್ಬರಾಗಿ ಕುಳಿತು ಹೋಗಬಹುದಾದ ಕಿರಿದಾದ ಸುರಂಗ ಮಾರ್ಗವಿದೆ.

 

ದೇವರ ಅರ್ಚನೆ ಹೊರಗೆ ನಡೆಯುತ್ತದಾದರೂ ಬಂದವರು ಈ ಮಾರ್ಗದ ಮೂಲಕ  ಕುಳಿತು, ತೆವಳಿ ಒಳಹೊಕ್ಕು ಈಶ್ವರ ದರ್ಶನ ಪಡೆದು, ತೀರ್ಥ ಪ್ರಸಾದ ಸ್ವೀಕರಿಸಿದರು. ಒಮ್ಮೆಗೆ ಹತ್ತು ಜನರನ್ನು ಮಾತ್ರ ಗುಹೆಯೊಳಕ್ಕೆ ಬಿಡಲಾಗುತ್ತಿದ್ದುದರಿಂದ ಜನರು ದೇವಾಲಯದ ಹೊರಗೆ ದೀರ್ಘಕಾಲ ಬಿಸಿಲಿನಲ್ಲಿ ಕಾಯವುದು ಅನಿವಾರ್ಯವಾಯಿತು.

 

ಎರಡೂ ಕಡೆ ಬೆಳಿಗ್ಗೆ ಆರಂಭವಾದ ಜನಸಂದಣಿ, ಸಂಜೆ ಆರು ಗಂಟೆ ವರೆಗೂ ಮುಂದುವರಿದಿತ್ತು. ತಿಂಡಿ ತಿನಿಸು, ಆಟಿಕೆ, ಮಣಿಸರಕಿನ ಅಂಗಡಿಗಳೂ ಇಲ್ಲಿ ಭರಾಟೆಯ ವ್ಯಾಪಾರ ನಡೆಸಿದುವು. ಮರವಂತೆಯಲ್ಲಿ ಮತ್ತು ಗಂಗೊಳ್ಳಿಯ ಇಂದುಧರ ದೇವಾಲಯದಲ್ಲಿ ಭಕ್ತರು ಸಾಮೂಹಿಕ ಭಜನೆಯೊಂದಿಗೆ ರಾತ್ರಿ ಜಾಗರಣೆಗೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry