ಶಿವಶಂಕರರೆಡ್ಡಿ ನಿಂದನೆಗೆ ಎಸ್‌ವಿ ಕಿಡಿ

7

ಶಿವಶಂಕರರೆಡ್ಡಿ ನಿಂದನೆಗೆ ಎಸ್‌ವಿ ಕಿಡಿ

Published:
Updated:

ಗೌರಿಬಿದನೂರು: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನನ್ನ ವಿರುದ್ಧ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಕಾಂಗ್ರೆಸ್ ತೊರೆದು 8 ತಿಂಗಳಾಗಿದೆ. ಇಂತಹ ಸಂದರ್ಭದಲ್ಲಿ  ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, `ಜೆಡಿಎಸ್ ಪಕ್ಷದೊಳಗೆ ಕಾಗೆ ಹೊಕ್ಕಂತೆ~ ಎಂದು ನನ್ನನ್ನು ಮೂದಲಿಸಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಶಿವಶಂಕರರೆಡ್ಡಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗುವಾಗ ನನ್ನ ಸಂಪೂರ್ಣ ಬೆಂಬಲ ಪಡೆದರು. ನಂತರ ಕೆ.ಎಚ್.ಮುನಿಯಪ್ಪ ಬೆಂಬಲಿಗ ಎಂದು ಪದೇ ಪದೇ ಜರೆಯುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಹೊರಬರಲು ಕಾರಣರಾದರು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ತಾಲ್ಲೂಕು ಕಾಂಗ್ರೆಸ್‌ನಲ್ಲಿ ಭಿನ್ನಮತ ಪ್ರಾರಂಭವಾಗಿದೆ. ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿ ಶಾಸಕರು ಇಂಥ ಹೇಳಿಕೆ ನೀಡಿದ್ದಾರೆ. ಇವರ ಸರ್ವಾಧಿಕಾರಿ ಧೋರಣೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರವಾಗಿದೆ ಎಂದರು.ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯಿಲಿ ಚುನಾವಣೆ ಸಂದರ್ಭದಲ್ಲಿ  ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ಎತ್ತಿನ ಹೊಳೆ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಎತ್ತಿನ ಹೊಳೆ ನೀರು ಒಂದು ತಾಲ್ಲೂಕಿಗೆ ಸಾಕಾಗುವುದಿಲ್ಲ ಎಂದರು.ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಎನ್.ಜ್ಯೋತಿರೆಡ್ಡಿ ಮಾತನಾಡಿ, ಮಾಜಿ ಶಾಸಕ ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ ಅವರನ್ನು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ ಎಂದರು.ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಿವರಾಮರೆಡ್ಡಿ, ನಗರ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಮುಖಂಡರಾದ ಜಾಮೀನ್‌ರಾಜಾ, ಮೋಹನ್, ಹೇಮಾರೆಡ್ಡಿ, ರೇಣುಕಮ್ಮ, ವಕ್ತಾರ ಹೊಸೂರು ಹರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry