ಶಿವಾಜಿ ಜಯಂತಿ: ಮೆರವಣಿಗೆ

7

ಶಿವಾಜಿ ಜಯಂತಿ: ಮೆರವಣಿಗೆ

Published:
Updated:

ಬೀದರ್: ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿ ಪ್ರಯುಕ್ತ ನಗರದಲ್ಲಿ ಭಾನುವಾರ ಸಡಗರ ಸಂಭ್ರಮದೊಂದಿಗೆ ಶಿವಾಜಿ ಮಹಾರಾಜ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕ ಸಮಿತಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಮಹೋತ್ಸವ ಸಮಿತಿ ಮತ್ತು ಸೇವಾ ಸಂಘದಿಂದ ಪ್ರತ್ಯೇಕ ಮೆರವಣಿಗೆ ನಡೆಸಲಾಯಿತು.ಅಲಂಕೃತ ವಾಹನಗಳಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರ ಇರಿಸಲಾಗಿತ್ತು. ಮಕ್ಕಳ ಕೋಲಾಟ, ಯುವಕರ ನರ್ತನ ಮೆರವಣಿಗೆಯ ಮೆರಗು ಹೆಚ್ಚಿಸಿತು. ದಾರಿಯುದ್ದಕ್ಕೂ ಕಿವಿಗಡಚಿಕ್ಕುವಂತೆ ಪಟಾಕಿ ಸಿಡಿಸಲಾಯಿತು. ಶಿವಾಜಿ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರೋಪಗೊಂಡಿತು.ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ ಸಮಿತಿಯು ಶಿವಾಜಿ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಎನ್. ಧರ್ಮಸಿಂಗ್ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಆದರ್ಶ ಪುರುಷರಾಗಿದ್ದರು. ಹೀಗಾಗಿ ಪ್ರತಿಯೊಬ್ಬರು ಅವರ ಆದರ್ಶಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.ಜೀಜಾ ಮಾತೆಯವರು ತಮ್ಮ ಪುತ್ರ ಶಿವಾಜಿಗೆ ಶ್ರೇಷ್ಠ ದೀಕ್ಷೆ ನೀಡಿದ್ದರು. ಅದರ ಫಲಶ್ರುತಿಯಿಂದಾಗಿಯೇ ಶಿವಾಜಿ ಅಪ್ರತಿಮ ಶೂರ ಹಾಗೂ ಮಹಾನ್ ವ್ಯಕ್ತಿಯಾಗಲು ಸಾಧ್ಯವಾಯಿತು. ಸಮಾಜಕ್ಕೆ ಆದರ್ಶ ಪುರುಷನನ್ನು ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಶಾಸಕ ರಹೀಮ್‌ಖಾನ್ ಧ್ವಜಾರೋಹಣ ಮಾಡಿದರು. ಮತ್ತೋರ್ವ ಶಾಸಕ ಬಂಡೆಪ್ಪ ಖಾಶೆಂಪೂರ್ ಪ್ರತಿಮೆಗೆ ಮಾಲಾರ್ಪಣೆ  ಮಾಡಿದರು.ಸ್ಮಾರಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಮದನರಾವ ಬಿರಾದಾರ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ್ ಅಲಿ, ಮಾಜಿ ಶಾಸಕ ರಮೇಶಕುಮಾರ ಪಾಂಡೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮುರಳಿಧರರಾವ ಕಾಳೆ, ನಸೀಮುದ್ದೀನ್ ಪಟೇಲ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥರಾವ ಮಲ್ಕಾಪುರೆ, ಪ್ರಮುಖರಾದ ಮುರಳಿಧರರಾವ ಎಕಲಾರಕರ್, ರಘುನಾಥರಾವ ಜಾಧವ್, ಶಿವಶರಣಪ್ಪ ವಾಲಿ, ಗೋವರ್ಧನ್ ರಾಠೋಡ್, ಸೋಮನಾಥ ಕಂದಗೂಳೆ ಮತ್ತಿತರರು ಉಪಸ್ಥಿತರಿದ್ದರು.ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಮಹೋತ್ಸವ ಸಮಿತಿ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ಪ್ರಮುಖರಾದ ಶಕುಂತಲಾ ಬೆಲ್ದಾಳೆ, ಉದಯಭಾನು ಹಲವಾಯಿ, ಸತೀಶ ಮುಳೆ, ಕೊಂಡಿಬಾರಾವ ಪಾಂಡ್ರೆ, ವೆಂಕಟೇಶ್ವರರಾವ ಮಯಿಂದೆ, ಬಸವರಾಜ ಪವಾರ್, ಚಂದ್ರಶೇಖರ ಗಾದಾ, ವಿರೂಪಾಕ್ಷ ಗಾದಗಿ, ಶಶಿಧರ ಕೋಸಂಬೆ, ಮತ್ತಿತರರು ಪಾಲ್ಗೊಂಡಿದ್ದರು.

ಇದಲ್ಲದೇ ಶಿವಾಜಿ ಮಹಾರಾಜ್ ಅವರ ಜಯಂತಿ ಅಂಗವಾಗಿ ನಗರದ ಸಾಯಿ ಕಾಲೋನಿಯಿಂದ ಆರಂಭಗೊಂಡ ಮೆರವಣಿಗೆಗೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಚಾಲನೆ ನೀಡಿದರು.ತೆರೆದ ಜೀಪ್‌ನಲ್ಲಿ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಯಿ ಮಂದಿರಕ್ಕೆ ಆಗಮಿಸಿ ಸಮಾರೋಪಗೊಂಡಿತು. ಬೈಕ್ ರ‌್ಯಾಲಿ ಸಹ ನಡೆಸಲಾಯಿತು.ನಗರಸಭೆ ಸದಸ್ಯ ಚಂದ್ರಶೇಖರ ಪಾಟೀಲ್, ಪ್ರಮುಖರಾದ ರಮೇಶ ಪಾಟೀಲ್, ಸಚಿನ್ ನವಲಕೇರಿ, ಶಿವಕುಮಾರ ಪಾಂಚಂಗೆ, ಸಂದೀಪ ನವಲಕೇರಿ, ರಾಜು ಬಿರಾದಾರ, ಶಾಂತಕುಮಾರ ಕೊಡಗೆ, ಸಂತೋಷ ಹೊಕ್ರಾಣೆ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry