ಶಿವಾನಂದ ವೃತ್ತ ಬಳಿ ಶೀಘ್ರ ಉಕ್ಕಿನ ಸೇತುವೆ

7

ಶಿವಾನಂದ ವೃತ್ತ ಬಳಿ ಶೀಘ್ರ ಉಕ್ಕಿನ ಸೇತುವೆ

Published:
Updated:
ಶಿವಾನಂದ ವೃತ್ತ ಬಳಿ ಶೀಘ್ರ ಉಕ್ಕಿನ ಸೇತುವೆ

ಬೆಂಗಳೂರು: ಶಿವಾನಂದ ವೃತ್ತದಲ್ಲಿ ಹೆಚ್ಚಾಗಿರುವ ವಾಹನಗಳ ಸಂಚಾರ ದಟ್ಟಣೆಯನ್ನು ನಿವಾರಿಸುವ ದೃಷ್ಟಿಯಿಂದ ಸುಮಾರು ರೂ 17.5 ಕೋಟಿ ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.ವಿವಿಧ ವಾರ್ಡ್‌ಗಳಿಗೆ ಬುಧವಾರ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪಾಲಿಕೆಯ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎಚ್.ರವೀಂದ್ರ, ‘ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿಯು ಒಂಬತ್ತು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಿಗ್ನಲ್ ದಾಟಿ ರೈಲ್ವೆ ಸೇತುವೆಯವರೆಗೆ ಸುಮಾರು 310 ಮೀಟರ್ ಉದ್ದದ ಉಕ್ಕಿನ ಸೇತುವೆ ನಿರ್ಮಿಸಲಾಗುವುದು. ನಾಲ್ಕು ಪಥಗಳನ್ನು ಒಳಗೊಂಡಿದ್ದು, ಸುಮಾರು 16 ಮೀಟರ್ ಅಗಲವಾಗಿರುತ್ತದೆ. ಈ ಸಂಬಂಧ ಯೋಜನಾ ವರದಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲಿಯೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಅವರು ತಿಳಿಸಿದರು. ಆನಂದರಾವ್ ಬಳಿ ಅಂಡರ್‌ಪಾಸ್:  ‘ಮೆಜೆಸ್ಟಿಕ್‌ನಲ್ಲಿರುವ ಆನಂದರಾವ್ ವೃತ್ತದ ಬಳಿಯ ವಾಹನಗಳ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಬೇದಾರ ಛತ್ರ ರಸ್ತೆ ಕಡೆಗೆ ಅಂಡರ್‌ಪಾಸ್ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.ತಕ್ಷಣ ಯೋಜನಾ ವರದಿಯನ್ನು ಸಿದ್ಧಗೊಳಿಸುವಂತೆ ಎಂಜಿನಿಯರ್‌ಗಳಿಗೆ ಅವರು ಸೂಚನೆ ನೀಡಿದ್ದಾರೆ.ಸ್ವಾತಂತ್ರ್ಯ ಉದ್ಯಾನದಲ್ಲಿ ಪಾರ್ಕಿಂಗ್:

ಗಾಂಧಿನಗರದ ಸ್ವಾತಂತ್ರ್ಯ ಉದ್ಯಾನ ಆವರಣದಲ್ಲಿ ರೂ. 55 ಕೋಟಿ ವೆಚ್ಚದಲ್ಲಿ ತಳ ಅಂತಸ್ತಿನ ಕಾರ್ ಪಾರ್ಕಿಂಗ್ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ‘ಗಾಂಧಿನಗರ, ಚಿಕ್ಕಪೇಟೆ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸವಾರರು ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.ಉದ್ಯಾನದ ಆವರಣದಲ್ಲಿರುವ 9680 ಚದರ ಮೀಟರ್‌ಗಳ ಖಾಲಿ ಜಾಗದಲ್ಲಿ ನೆಲ ಮಟ್ಟದಿಂದ 10.55 ಮೀಟರ್ ಕೆಳಗೆ ಮೂರು ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಮಿಸಲಾಗುವುದು. ಸುಮಾರು 1139 ಕಾರುಗಳು ಹಾಗೂ 320 ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ದೊರೆಯಲಿದೆ’ ಎಂದು ಅವರು ಮಾಹಿತಿ ನೀಡಿದರು. ಯೋಜನಾ ವರದಿ ಈಗಾಗಲೇ ಸಿದ್ಧವಾಗಿದ್ದು, ಸದ್ಯದಲ್ಲಿಯೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದರು.ರಸ್ತೆ ವಿಸ್ತರಣೆಗೆ ಕ್ರಮ: ಸರ್ಕಾರಿ ಆಯುರ್ವೇದ ಕಾಲೇಜಿನಿಂದ ಸುಬ್ಬಣ್ಣ ವೃತ್ತದ ಮೌರ್ಯ ಹೋಟೆಲ್‌ವರೆಗೆ ಇರುವ ರಸ್ತೆಯು 24 ಮೀಟರ್ ಅಗಲವಿದ್ದು, ವಾಹನಗಳ ದಟ್ಟಣೆ ನಿವಾರಿಸಲು ಈ ರಸ್ತೆಯನ್ನು 30 ಮೀಟರ್‌ವರೆಗೆ ವಿಸ್ತರಿಸುವುದಾಗಿ ಎಚ್.ರವೀಂದ್ರ ಅವರು ಹೇಳಿದರು.ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಟಿಡಿಆರ್ ಪದ್ಧತಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಮುಂದಿನ ಎರಡು ತಿಂಗಳೊಳಗೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ವಿವರಣೆ ನೀಡಿದರು.ಇದರಂತೆ ಗಾಂಧಿನಗರದ ಧನ್ವಂತ್ರಿ ರಸ್ತೆಯಿಂದ ಸರ್ಕಾರಿ ಆಯುರ್ವೇದ ಕಾಲೇಜಿನವರೆಗಿನ ರಸ್ತೆಯನ್ನು ಸಹ ಅಗತ್ಯಕ್ಕೆ ಅನುಗುಣವಾಗಿ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಮೌರ್ಯ ಹೋಟೆಲ್‌ನ ಹತ್ತಿರ ಪಾರ್ಕಿಂಗ್: ಸುಬ್ಬಣ್ಣ ವೃತ್ತದ ಬಳಿ 15,000 ಚದರ ಅಡಿ ಖಾಲಿ ಜಾಗದಲ್ಲಿ ಬಹುಅಂತಸ್ತಿನ ಕಾರ್ ಪಾರ್ಕಿಂಗ್ ನಿರ್ಮಿಸಲಾಗುವುದು. ಸುಮಾರು 250ರಿಂದ 300 ಕಾರುಗಳನ್ನು ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸಲಾಗುವುದೆಂದು ಹೇಳಿದರು. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿಸಮಿತಿ ಸದಸ್ಯರಾದ ಅಶ್ವಥ ನಾರಾಯಣಗೌಡ, ಉದಯಶಂಕರ್, ಟಿ.ತಿಮ್ಮೇಗೌಡ, ಗೋವಿಂದರಾಜು, ಎಂ.ಶಿವರಾಜು, ಎ.ಆರ್.ಝಾಖೀರ್  ಇತರರು ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry