ಶಿವಾಲಯ ದರ್ಶನ

7

ಶಿವಾಲಯ ದರ್ಶನ

Published:
Updated:

ಉತ್ತರ ಕನ್ನಡ ಜಿಲ್ಲೆ ಇಡೀ ರಾಜ್ಯದಲ್ಲಿಯೇ ವಿಭಿನ್ನ ಪರಿಸರದ ಸಂಗಮ, ಮನಮೋಹಕ. ಈ ಜಿಲ್ಲೆಯಲ್ಲಿ ಎಲ್ಲವೂ ಇದೆ. ಅರಣ್ಯ ಸಂಪತ್ತು, ವನ್ಯಜೀವಿ, ಸಹ್ಯಾದ್ರಿ ಪರ್ವತಶ್ರೇಣಿ, ಹರಿಯುವ ನದಿಗಳು, ಸಮುದ್ರ, ಜಲಪಾತಗಳು, ಗತವೈಭವ ಸಾರುವ ಪೌರಾಣಿಕ ಐತಿಹಾಸಿಕ ಯಾತ್ರಾ ಸ್ಥಳಗಳಿಂದ ತುಂಬಿದೆ. ಆದ್ದರಿಂದ ಇದನ್ನು ಪ್ರವಾಸಿಗರ ಸ್ವರ್ಗವೆಂದರೆ ತಪ್ಪಾಗಲಾರದು.ಹಸಿರಾಡುವ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿರುವ ಅನೇಕ ಶೈವ ದೇವಾಲಯಗಳ ಈ ಜಿಲ್ಲೆಯಲ್ಲಿವೆ. ಮಹಾಶಿವರಾತ್ರಿ ಪ್ರಯುಕ್ತ ಕೆಲ ಶಿವಾಲಯಗಳ ಪರಿಚಯ ಇಲ್ಲಿದೆ.ಗೋಕರ್ಣ: ರಾಜ್ಯದ ಪ್ರಸಿದ್ಧ ಶಿವ ತಾಣ. ಇಲ್ಲಿನ ಆತ್ಮಲಿಂಗಕ್ಕೆ ಪೌರಾಣಿಕ ಮಹತ್ವವಿದೆ.ಯಾಣ: ಶಿರಸಿ- ಕುಮಟಾ ಮುಖ್ಯರಸ್ತೆಯಿಂದ ಕೊಂಚ ಒಳಭಾಗದಲ್ಲಿ ನಿರ್ಸಗದ ಮಡಿಲಿನಲ್ಲಿ ಬೃಹದಾಕಾರದಲ್ಲಿ ನಿಂತಿರುವ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರವು ಯಾಣದ ಆಕರ್ಷಣೆ.ಅರಬ್ಬಿ ಸಮುದ್ರದ ದಂಡೆಯಲ್ಲಿರುವ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ ಪ್ರಮುಖ ಯಾತ್ರಾ ಸ್ಥಳ. ಕುಮಟಾ-ಹೊನ್ನಾವರ ಮಾರ್ಗದಲ್ಲಿ ಕಂಡು ಬರುವ ಧಾರೇಶ್ವರದಲ್ಲಿ ಚಾಲುಕ್ಯ ಶೈಲಿಯ ಈಶ್ವರ ದೇವಾಲಯವಿದೆ. ದಾಂಡೇಲಿ ಸಮೀಪದ ಕವಳಾ ಗುಹೆಯಲ್ಲಿ ಸುಮಾರು 5 ಅಡಿ ಎತ್ತರದ ನಿಸರ್ಗ ನಿರ್ಮಿತ ಶಿವಲಿಂಗವಿದೆ. ಉಳವಿ ಚೆನ್ನಬಸವೇಶ್ವರ ದೇವಾಲಯವೂ ಹೆಸರುವಾಸಿ.ಸಿದ್ಧಾಪುರದಿಂದ 18 ಕಿಮಿ ದೂರದ ಇಟಗಿಯ ಶ್ರೀರಾಮೇಶ್ವರ ಒಂದು  ಪುಣ್ಯ ಕ್ಷೇತ್ರ. ಇಲ್ಲಿ ವಿರಾಜಮಾನವಾಗಿರುವ ಶಿವಲಿಂಗವು ಈಗ ಗೋಚರಿಸುವ ಶಿಲಾಮಯ ದೇವಾಲಯಕ್ಕಿಂತ ಬಹುಪ್ರಾಚೀನ ಎನ್ನುತ್ತಾರೆ.ಶಿರಸಿಯಿಂದ ಸುಮಾರು 15 ಕಿ.ಮೀ ದೂರದಲ್ಲಿದೆ ಬಾಳೆಗದ್ದೆ. ಇಲ್ಲಿಂದ 4 ಕಿಮೀ ಕಾಡಿನ ಮಧ್ಯೆ ಪ್ರವೇಶಿಸಿದರೆ ಪಾಂಡವರ ಹೊಳೆಯು ಕಂಡು ಬರುತ್ತದೆ. ಪಾಂಡವರು ಈ ಅರಣ್ಯದಲ್ಲಿದ್ದಾಗ ಪೂಜಿಸುತ್ತಿದ್ದ ಶಿವಲಿಂಗಗಳು ಇಲ್ಲಿದ್ದು ಸ್ವಾದಿ ಸಮೀಪದ ಸಹಸ್ರಲಿಂಗವನ್ನು ನೆನಪಿಸುತ್ತವೆ.ಆದರೆ ಸೂಕ್ತ ರಕ್ಷಣೆ ಇಲ್ಲದೆ ಲಿಂಗಗಳು ಹಾಗು ಭೀಮನ ಪಾದಗಳು ಸವೆಯುತ್ತಿವೆ. ಪಾಂಡವರು ಬಳಸುತ್ತಿದ್ದರು ಎಂದು ನಂಬಲಾದ ಒರಳುಕಲ್ಲುಗಳು ನೀರಿನ ರಭಸಕ್ಕೆ ಸವೆದು ಹತ್ತಾರು ಕೊರಕಲುಗಳು ಸೃಷ್ಟಿಯಾಗಿವೆ.ಶಿವ ಭಕ್ತರಿಗೆ ನೆಚ್ಚಿನ ತಾಣವಾದ ಶಾಲ್ಮಲಾ ನದಿಯ ಮಧ್ಯದ ಬಂಡೆಗಳ ಮೇಲೆ ಅಸಂಖ್ಯಾತ ಶಿವಲಿಂಗಗಳಿವೆ. ಇದೇ ಸಹಸ್ರಲಿಂಗ. ಸೋದೆಯ ದೊರೆ ಸದಾಶಿವರಾಯರ ಆಡಳಿತ ಕಾಲದಲ್ಲಿ ಈ ಲಿಂಗಗಳನ್ನು ನಿರ್ಮಿಸಲಾಯಿತು ಎನ್ನಲಾಗಿದೆ. ಆದರೆ ಪಾಂಡವರು ವನವಾಸದ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ಭೀಮ ಪ್ರತಿಷ್ಠಾಪಿದ ಶಿವಲಿಂಗವನ್ನು ಧರ್ಮರಾಯ ಪೂಜಿಸಿದನೆಂದು ವಿದ್ವಾಂಸರಾದ ಬಾಲಚಂದ್ರ ಶಾಸ್ತ್ರಿ ಅವರು ಅಭಿಪ್ರಾಯಪಡುತ್ತಾರೆ.ಶಿರಸಿಯಿಂದ 22 ಕಿ.ಮೀ ದೂರದಲ್ಲಿರುವ ಬನವಾಸಿ 6ನೇ ಶತಮಾನದಲ್ಲಿ ಆಳಿದ ಕನ್ನಡದ ಪ್ರಥಮ ಸಾಮ್ರೋಜ್ಯ ಸ್ಥಾಪಕರರಾದ ಕದಂಬ ದೊರೆಗಳ ರಾಜಧಾನಿ. ಇಲ್ಲಿದೆ ಆದಿ ಮಧುಕೇಶ್ವರ ದೇವಾಲಯ.ಯಲ್ಲಾಪುರದ ಹೊರವಲಯದಲ್ಲಿ ಕಲ್ಮಠವಿದೆ. ಕಲ್ಯಾಣ ಕ್ರಾಂತಿಯಾದಾಗ ಚನ್ನಬಸವೇಶ್ವರರು ತಮ್ಮ ಸಂಗಡಿಗರೊಂದಿಗೆ ಉಳವಿಗೆ ಹೋಗುವ ಮಾರ್ಗ ಮಧ್ಯೆ ಇಲ್ಲಿ ತಂಗಿದ್ದ ಉಲ್ಲೆೀಖವಿದೆ. ಇಲ್ಲಿಂದ 10 ಕಿಮೀ ದೂರದ ಇಡುಗುಂದಿಯಲ್ಲಿ ರಾಮಲಿಂಗೇಶ್ವರನ ಪುರಾತನ ದೇವಾಲಯವಿದೆ.ಇದಲ್ಲದೆ ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊಂಡು ಶಿವಮೊಗ್ಗ ಜಿಲ್ಲೆ ಆನವಟ್ಟಿ ಬಳಿ ಕೋಟಿಪುರದಲ್ಲಿ ಚಾಲುಕ್ಯ ಶೈಲಿಯ ಕೈಟಭೇಶ್ವರ ಮಂದಿರ, ಹಾವೇರಿ ಜಿಲ್ಲೆ ಹಾನಗಲ್‌ನ ತಾರಕೇಶ್ವರ ದೇವಾಲಯಗಳನ್ನೂ ನೋಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry