ಶಿವ ಶಕ್ತಿ!

7

ಶಿವ ಶಕ್ತಿ!

Published:
Updated:

ಮಂದ ಬೆಳಕಿನ ಹಳೆಯ ಕಟ್ಟಡವದು. ದೂಳು ಹಿಡಿದ ವಸ್ತುಗಳು, ರಾಶಿಯಾಗಿ ಪೇರಿಸಿಟ್ಟ ಚೀಲಗಳು. ಅವುಗಳ ಮಧ್ಯೆ ನಾಯಕ ನಾಯಕ ಎತ್ತರಕ್ಕೆ ಜಿಗಿದು ರೌಡಿಗೆ ಒದೆಯುತ್ತಾನೆ.ನಾಯಕನ ಪವರ್ ಫುಲ್ ಹೊಡೆತಕ್ಕೆ ರೌಡಿ ಸುಮಾರು ಹತ್ತು ಅಡಿಗಳಷ್ಟು ದೂರ ಹಾರಿ ಬೀಳುತ್ತಾನೆ. `ಟೇಕ್ ಓಕೆ~ ಎಂದು ಮುಖವರಳಿಸಿದರು ನಿರ್ದೇಶಕ ಓಂ ಪ್ರಕಾಶ್‌ರಾವ್.

 

ಅದು ಶಿವರಾಜ್‌ಕುಮಾರ್ ನಟನೆಯ `ಶಿವ~ ಚಿತ್ರದ ಸಾಹಸಮಯ ದೃಶ್ಯದ ಚಿತ್ರೀಕರಣದ ಸಂದರ್ಭ. ಯಾವುದೋ ರಾಜ್ಯದಿಂದ ಮಕ್ಕಳನ್ನು ಅಪಹರಿಸಿ ತಂದು ಅವರನ್ನು ಭಿಕ್ಷಾಟನೆಗೆ ನೂಕುವ ಬೃಹತ್ ಜಾಲವದು. ಹೀಗೆ ಭಿಕ್ಷಾಟನೆಗೆ ಹೋಗುವ ಮಕ್ಕಳನ್ನು ರಕ್ಷಿಸಲು ಸಾಮಾಜಿಕ ಕಾಳಜಿಯುಳ್ಳ ನಾಯಕ ಮುಂದಾಗುತ್ತಾನೆ.ಆಗ ರೌಡಿಗಳು ಮತ್ತು ನಾಯಕನ ನಡುವೆ ಹೊಡೆದಾಟ ನಡೆಯುತ್ತದೆ.ಶಿವರಾಜ್‌ಕುಮಾರ್ ಮಂದ ಬೆಳಕಿನ ಸೆಟ್‌ನಲ್ಲಿ ಗೂಂಡಾಗಳೊಂದಿಗೆ ಫೈಟ್ ಮಾಡುವ ಸನ್ನಿವೇಶವನ್ನು ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಯಿತು.ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ ನಿರ್ದೇಶಕ ಓಂಪ್ರಕಾಶ್‌ರಾವ್, ಶಿವರಾಜ್‌ಕುಮಾರ್, ನಿರ್ಮಾಪಕ ಶ್ರೀಕಾಂತ್ ಮತ್ತು ಸಾಹಸ ನಿರ್ದೇಶಕ ಪಳನಿರಾಜ್ ಜೊತೆ ಚಿತ್ರೀಕರಣದ ಅನುಭವವನ್ನು ಹಂಚಿಕೊಳ್ಳಲು ಮುಂದಾದರು. ಈ ಫೈಟಿಂಗ್‌ನಲ್ಲಿ ಗಿಮಿಕ್ ಜೊತೆಯಲ್ಲಿ ಸಾಕಷ್ಟು ಪವರ್ ಸೇರಿಸಿದ್ದೇನೆ ಎಂದರು ಶಿವರಾಜ್‌ಕುಮಾರ್. ವಿಶೇಷವೆಂದರೆ ಈ ಹೊಡೆದಾಟದ ದೃಶ್ಯದ ಕೆಲವು ಭಾಗವನ್ನು ಸ್ವತಃ ಶಿವರಾಜ್‌ಕುಮಾರ್ ಸಂಯೋಜಿಸಿದ್ದಾರೆ.`ಇದು ಎಂದಿನ ಕಮರ್ಷಿಯಲ್ ಸ್ವರೂಪದ ಆದರೆ ಸ್ಟೈಲಿಶ್ ಆಗಿರುವ ಚಿತ್ರ~ ಎಂದರು ಶಿವಣ್ಣ. ಎಲ್ಲಾ ಪಾತ್ರಗಳೂ ಚಿತ್ರದ ಕಥೆ ಜೊತೆ ಒಟ್ಟಿಗೆ ಸಾಗುವುದು ಇದರ ವಿಶೇಷತೆ.

 

ನಿರ್ದೇಶಕ ಓಂ ಪ್ರಕಾಶ್‌ರಾವ್ ಸಾಕಷ್ಟು ಬದಲಾಗಿದ್ದಾರೆ. ಅವರೊಂದಿಗೆ ಮಾಡಿದ `ಸಿಂಹದ ಮರಿ~ ಚಿತ್ರಕ್ಕೂ ಈ ಚಿತ್ರಕ್ಕೂ ವ್ಯತ್ಯಾಸಗಳಿರುವುದೇ ಇದಕ್ಕೆ ಸಾಕ್ಷಿ ಎಂಬ ಮೆಚ್ಚುಗೆ ಅವರದು.ಕೆಲವು ಸನ್ನಿವೇಶಗಳನ್ನು ಅದ್ಭುತವಾಗಿ ಹೆಣೆದಿದ್ದಾರೆ. ನಾಯಕನ ಪಾತ್ರದಲ್ಲೇ ಹಾಸ್ಯ ಬೆರೆತಿರುವುದರಿಂದ ಹಾಸ್ಯಕ್ಕಾಗಿ ಪ್ರತ್ಯೇಕ ಪಾತ್ರಗಳನ್ನು ಸೃಷ್ಟಿಸುವ ಗೋಜಿಗೆ ಹೋಗಿಲ್ಲ ಎಂದರು.ಶೇಕಡಾ 40ರಷ್ಟು ಭಾಗದ ಚಿತ್ರೀಕರಣ ಮುಗಿಸಿದ ತೃಪ್ತಿ ಓಂ ಪ್ರಕಾಶ್‌ರಾವ್ ಮುಖದಲ್ಲಿ ಕಾಣುತ್ತಿತ್ತು. ಚಿತ್ರದ ಬಗ್ಗೆ ಹೇಳಲು ಹೊರಟ ಓಂಪ್ರಕಾಶ್ ಸಮಾಜದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಕ್ಕಳ ಅಪಹರಣ, ಭಿಕ್ಷಾಟನೆ ಬಗ್ಗೆ ಮಾತಿಗಿಳಿದರು. ಶಿವಣ್ಣ ಕೂಡ ಇದಕ್ಕೆ ದನಿಗೂಡಿಸಿದರು.ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿ ಶಿವಣ್ಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಕಣ್ಣ ಮುಂದೆ ನಡೆಯುವ ಅನ್ಯಾಯಗಳನ್ನು ಸಹಿಸದೆ ಅವುಗಳನ್ನು ಸರಿಪಡಿಸಲು ಹೋರಾಡುತ್ತಾರೆ. ನಾಯಕಿ ರಾಗಿಣಿ ಮೊಬೈಲ್ ಫೋನ್ ಕಂಪೆನಿಯೊಂದರ ಉದ್ಯೋಗಿಯಾಗಿ ನಟಿಸಿದ್ದಾರೆ ಎಂದು ಓಂ ಪ್ರಕಾಶ್ ವಿವರಿಸಿದರು.ಶಿವಣ್ಣ ಮತ್ತು ಓಂಪ್ರಕಾಶ್‌ರಾವ್ ಇಬ್ಬರ ಮಾತು ಹಲವು ಬಾರಿ ಎ.ಕೆ.47 ಚಿತ್ರದ ಸುತ್ತ ಗಿರಕಿ ಹೊಡೆಯಿತು. ಇಬ್ಬರೂ ಆಗಿನ ಅನುಭವಗಳ ಫ್ಲ್ಯಾಶ್‌ಬ್ಯಾಕ್ ತೆರೆದಿಟ್ಟರು.

ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಯುರೋಪ್‌ಗೆ ಹಾರಲಿದೆ. ಚಿತ್ರದ ಪ್ರಮೋಷನ್‌ಗೆ ಮೊದಲು ಮಂಗಳೂರಿಗೆ ಹೋಗುವ ಆಶಯವನ್ನು ಶಿವಣ್ಣ ಹೇಳಿಕೊಂಡರು. ಯಾರೂ ಚಿತ್ರದ ಪ್ರಮೋಷನ್‌ಗೆ ಮಂಗಳೂರಿಗೆ ಹೋಗುತ್ತಿಲ್ಲ. ಇದರ ಬಗ್ಗೆ ಅಲ್ಲಿನ ಜನರಿಗೂ ಬೇಸರವಿದೆ. ಹೀಗಾಗಿ ಪ್ರಚಾರಕ್ಕೆ ಮೊದಲು ಮಂಗಳೂರಿಗೆ ಹೋಗುವುದಾಗಿ ಹೇಳಿದರು.ಡಿಸೆಂಬರ್ ಅಂತ್ಯಕ್ಕೆ ಚಿತ್ರೀಕರಣ ಮುಗಿಸಿ ಶಿವರಾತ್ರಿಯಂದು `ಶಿವ~ನನ್ನು ತೆರೆಗೆ ತರುವುದು ಚಿತ್ರತಂಡದ ಉದ್ದೇಶ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry