ಶಿವ ಶಿವ ಎಂದರೆ ಭಯವಿಲ್ಲ.. ಶಿವ ನಾಮಕೆ ಸಾಟಿ ಬೇರಿಲ್ಲ..

7

ಶಿವ ಶಿವ ಎಂದರೆ ಭಯವಿಲ್ಲ.. ಶಿವ ನಾಮಕೆ ಸಾಟಿ ಬೇರಿಲ್ಲ..

Published:
Updated:

ಹಾವೇರಿ: `ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ.. ಹೀಗೆ ಸೋಮವಾರ ಜಿಲ್ಲೆಯಲ್ಲಿ ಶಿವ ನಾಮಸ್ಮರಣೆ ಮಾಡುವ ಮಹಾಶಿವರಾತ್ರಿ ಹಬ್ಬವನ್ನು  ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.ಬೆಳಿಗ್ಗೆಯಿಂದಲೇ ಶಿವನ ದೇವಸ್ಥಾನ ಸೇರಿದಂತೆ ಬಸವೇಶ್ವರ, ವಿಘ್ನೇಶ, ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾರುದ್ರಾಭಿಷೇಕ ಪೂಜಾ ವಿಧಿ ವಿಧಾನಗಳು ಜರುಗಿದವು. ಕೆಲವೊಂದು ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ಶಿವ ನಾಮ ಸ್ಮರಣೆ ಸೇರಿದಂತೆ ಭಕ್ತಿ ಗೀತೆಗಳ ಹಾಡುಗಳನ್ನು ಹಾಕಲಾಗಿತ್ತು.ಹಾವೇರಿ ನಗರದ ಭ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವನ ದೇವಾಲಯ, ಬಸವೇಶ್ವರ ನಗರದ ವಿಘ್ನೇಶ ದೇವಾಲಯದ ಎದುರು ಪ್ರತಿಷ್ಠಾಪಿಸಲಾದ ಈಶ್ವರ ಮೂರ್ತಿ ಹಾಗೂ ಇತಿಹಾಸ ಪ್ರಸಿದ್ದ ಪುರಸಿದ್ದೆೀಶ್ವರ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜನರು ಕೂಡಾ ಶಿವನ ದೇವಸ್ಥಾನಗಳಿಗೆ ತೆರಳಿ ಪೂಜೆ ಪುನಸ್ಕಾರ ಸಲ್ಲಿಸಿದರಲ್ಲದೇ, ಭಕ್ತಿ ಭಾವದಿಂದ ಶಿವನ ಜಪ ಮಾಡಿದರು. ಸಮಯ ಕಳದಂತೆ ಶಿವನ ದೇವಸ್ಥಾನಗಳಲ್ಲಿ ಜಾತ್ರೆಯಂತೆ ಜನ ಜಮಾಯಿಸಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಶ್ರದ್ದಾ ಭಕ್ತಿಯಿಂದ ಕೀರ್ತನೆ, ಭಜನಾ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು.ಪುರಸಿದ್ದೆೀಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಒಂದೇ ದಿನಕ್ಕೆ ಮೂರು ಬಾರಿ ವಿಶೇಷ ಪೂಜೆ ಸಲ್ಲಿಸಲಾಯಿತಲ್ಲದೇ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳಿಂದ ಆರಾಧಿಸಲಾಯಿತು. ಬಸವೇಶ್ವರ ನಗರದ `ಸಿ~ ಬ್ಲಾಕ್‌ನಲ್ಲಿರುವ ಗಣೇಶ, ಆಂಜನೇಯ, ಬನ್ನಿ ಮಹಾಕಾಳಿ, ನವಗ್ರಹಗಳೊಂದಿಗೆ ಕಳೆದ ಶಿವರಾತ್ರಿಯಂದು ಪ್ರತಿಷ್ಠಾಪಿಸಲಾದ ಶಿವನ ಮೂರ್ತಿಗೆ ವಿಶೇಷ ಪೂಜೆ ಮಾಡಲಾಯಿತು.ನಂತರ ಇದೇ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನಗರದ ಹುಕ್ಕೇರಿಮಠದ ಸದಾಶಿವ ಶ್ರೀಗಳು ಭಾಗವಹಿಸಿ ಶಿವರಾತ್ರಿ ಮಹಿಮೆಯನ್ನು ಭಕ್ತಾದಿಗಳಿಗೆ ವಿವರಿಸಿದರಲ್ಲದೇ, ಶಿವರಾತ್ರಿಯ ದಿನದಂದು ಮಾಡುವ ಉಪವಾಸಕ್ಕೆ ವೈಜ್ಞಾನಿಕ ಕಾರಣವಿದೆ.

 

ವರ್ಷವೀಡಿ ಕೆಲಸ ಮಾಡುವ ದೇಹದ ಅಂಗಗಳಿಗೆ ಒಂದು ದಿನ ವಿಶ್ರಾಂತಿ ನೀಡುವುದೇ ಉಪವಾಸದ ಹಿಂದಿರುವ ಉದ್ದೇಶ ಎಂದ ಅವರು, ಉಪವಾಸ ದೇಹ ಹಾಗೂ ಮನಸ್ಸಿಗೂ ಒಳ್ಳೆಯದು ಎಂದರು. ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳ ಅಲ್ಲದೇ ಸಾವಿರಾರು ಜನರು ಭಾಗವಹಿಸಿದ್ದರು.ಜಾಗರಣೆ: ಹಗಲು ಹೊತ್ತಿನಲ್ಲಿ ಶಿವ ಪೂಜೆ, ಪುನಸ್ಕಾರ ಮಾಡಿದ ಜನರು, ಸಂಜೆ ಶಿವನಿಗೆ ಹಣ್ಣು ಹಂಪಗಳ ನೈವಿದ್ಯ ಹಿಡಿದು ತಾವು ಕೂಡಾ ಸೇವಿಸಿ ಉಪವಾಸಕ್ಕೆ ಅಂತ್ಯ ಹಾಡಿದರಲ್ಲದೇ, ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಹಾಗೂ ಬಸವೇಶ್ವರ ನಗರದ ಶಿವನ ಮೂರ್ತಿ ಎದುರು ಜನರು ಭಕ್ತಿ ಭಾವದಿಂದ ಶಿವನ ನಾಮ ಸ್ಮರಣೆಯ ಭಜನೆ, ಕೀರ್ತನೆಗಳನ್ನು ಹಾಡುತ್ತಾ ಜಾಗರಣೆ ಮಾಡಿದರು. ಪುರಸಿದ್ದೇಶ್ವರ ದೇವಸ್ಥಾನದ ಜಾಗರಣೆ ಕಾರ್ಯಕ್ರಮದಲ್ಲಿ ಐದನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry