ಗುರುವಾರ , ಜೂನ್ 17, 2021
21 °C
ಭಾರಿ ಅರಣ್ಯ ನಾಶ: ಮರಗಳ್ಳರ ಕೃತ್ಯ ಶಂಕೆ

ಶಿಶಿಲ, ಶಿರಾಡಿ ರಕ್ಷಿತಾರಣ್ಯದಲ್ಲಿ ಬೆಂಕಿ

ಪ್ರಜಾವಾಣಿ ವಾರ್ತೆ/ಸಿದ್ದಿಕ್‌ ನೀರಾಜೆ Updated:

ಅಕ್ಷರ ಗಾತ್ರ : | |

ಉಪ್ಪಿನಂಗಡಿ: ಸದಾ ಹಚ್ಚ ಹಸಿರಿನಿಂದ, ಹಸಿರು ಹಾಸಿದ ಬೆಟ್ಟದಂತೆ ಕಂಗೊಳಿಸುತ್ತಿದ್ದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿರುವ ಶಿಶಿಲದ ಗುಂಪಕಲ್ಲು ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿ ಹೋಗಿದೆ. ಮರದ ಮೇಲೆ, ಪೊದೆಯ ಗೊಟರಿನ ಕಡೆಯಿಂದ ಕೇಳಿ ಬರುತ್ತಿದ್ದ ಹಕ್ಕಿಗಳ ಕಲರವದ ಸದ್ದು ಇನ್ನಿಲ್ಲದಂತಾಗಿದೆ.ಕಾಡು ಸಂಪೂರ್ಣ ಸುಟ್ಟು, ಅರಣ್ಯದ ಒಳಗಡೆ ತುಂಬಾ ಬೂದಿ ಮುಚ್ಚಿದ ಕೆಂಡ ಬೆಂಕಿಯನ್ನು ಆಗಾಗ್ಗೆ ಹೊರ ಉಗುಳುತ್ತಿರುವ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಗೆ ಕಂಡುಬಂತು.

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಬರುವ ಶಿಶಿಲ, ಶಿಬಾಜೆ ಮತ್ತು ಶಿರಾಡಿ ರಕ್ಷಿತಾರಣ್ಯದಲ್ಲಿ ಕಳೆದ 4 ದಿನಗಳಿಂದ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ದಟ್ಟ ಮರಗಳಿಂದ ಮರೆಯಾಗಿದ್ದ ಬೆಟ್ಟ, ಗುಡ್ಡಗಳು ಉರಿದು ಹೋಗಿ ಕಲ್ಲು ಬಂಡೆಗಳು ಮಾತ್ರ ಕಾಣಲಾರಂಭಿಸಿದೆ. ಸದಾ ಹಸಿರು, ಮರಗಳಿಂದ ಕಂಗೊಳಿ­ಸುತ್ತಿದ್ದ ಶಿಶಿಲದ ಚಿಂಗಾಣಿಗುಡ್ಡೆ ತನ್ನ ಸೌಂದರ್ಯವನ್ನು ಸಂಪೂರ್ಣ ಕಳೆದುಕೊಂಡು ಬಯಲಾಗಿ ನಿಂತಿದೆ.ಶನಿವಾರ ರಾತ್ರಿ ಗುಂಪಕಲ್ಲು ಭಾಗದಿಂದ ಕಾಣಿಸಿಕೊಂಡ ಬೆಂಕಿ ತನ್ನ ಕೆನ್ನಾಲಗೆಯನ್ನು ವಿಸ್ತಾರವಾಗಿ ಹರಡುತ್ತಾ ಬಂದು ಚಿಂಗಾಣಿಗುಡ್ಡೆ, ಪಿಜಿನಪಾದೆ, ಮೀಯಾರು, ಬೂಡದಮಕ್ಕಿ, ಪಡಂತಾಜೆ ಮೊದಲಾದ ಪ್ರದೇಶವನ್ನು ಆವರಿಕೊಂಡು ಸುಟ್ಟು ಹಾಕಿದೆ. ಕಳೆದ 4 ದಿನಗಳಿಂದ ಹಗಲು ರಾತ್ರಿಯೆನ್ನದೆ ಉರಿಯುತ್ತಿರುವ ಬೆಂಕಿಗೆ ಸುಮಾರು 400ರಿಂದ 600 ಎಕರೆ ಅರಣ್ಯ ಪ್ರದೇಶದಲ್ಲಿ ಬೃಹತ್, ಉತ್ತಮ ಜಾತಿಯ ಮರಗಳು ಸುಟ್ಟು ಬೂದಿಯಾಗಿವೆ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.ಹಾವು, ಪ್ರಾಣಿ ಸಂಕುಲ ನಾಶ: ಕಾಡಿನಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿದ್ದರಿಂದ ಅಲ್ಲಿದ್ದ ಹಾವು, ಅದರ ಮೊಟ್ಟೆಗಳು ಸುಟ್ಟು ಬೆಂದು ಹೋಗಿದೆ. ಜತೆಗೆ ಜಿಂಕೆ, ಕಡವೆ, ಹುಲಿ ಮತ್ತು ಇತರ ಸಣ್ಣ ಪ್ರಾಣಿಗಳ ಮರಿಗಳು ಸುಟ್ಟು ಹೋಗಿರುವ ಮತ್ತು ಕೆಲವೊಂದು ತನ್ನ ತಾಯಿ ಬೆಂಕಿಯ ಹವೆಗೆ ಓಡಿ ಹೋಗುವಾಗ ಅದರ ಜೊತೆ ಓಡಿ ಹೋಗಲಾರದೆ ನೆಲೆ ಕಳೆದುಕೊಂಡಿರುವ ಸಾಧ್ಯತೆಗಳು ಇವೆ ಎಂದು ಅರಸಿನಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯ ಸುಂದರ ಗೌಡ ಅಭಿಪ್ರಾಯ­ಪಟ್ಟಿದ್ದಾರೆ.ಔಷಧೀಯ ಸಸ್ಯಗಳು ನಾಶ: ಈ ಭಾಗದ ಕಾಡಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಔಷಧೀಯ ಸಸ್ಯಗಳು ಇವೆ ಎನ್ನಲಾಗಿದ್ದು, ಇವುಗಳು ಸುಟ್ಟು ಹೋಗಿರುವು­ದರಿಂದ ಆಯುರ್ವೇದ ಕ್ಷೇತ್ರಕ್ಕೂ ಇದರಿಂದ ಭಾರಿ ನಷ್ಟ ಇದೆ ಎಂದು ಹೇಳಲಾಗಿದೆ. ಬೃಹತ್ ಪ್ರಮಾಣದಲ್ಲಿ ಕಾಡುತ್ಪತ್ತಿ­ಗಳಾದ ರಾಮಪತ್ರೆ, ಕೆತ್ತೆಪುಳಿ, ಸೀಗೆಕಾಯಿ, ಜಾಯಿಕಾಯಿ ಮೊದಲಾದ ಉತ್ಪನ್ನಗಳು ನಾಶವಾಗುವಂತಾಗಿದೆ.ಹೆಚ್ಚಿದ ತಾಪಮಾನ: ಕಳೆದ 4 ದಿನಗಳಿಂದ ಈ ಪ್ರದೇಶದಲ್ಲಿ ಈವರೆಗೆ ಕಾಣ­ದಂತಹ ಬಿರು ಬಿಸಿಲಿನ ತಾಪಮಾನ ಏರಿಕೆ ಆಗಿದೆ. ಹಗಲು ಮತ್ತು ರಾತ್ರಿಯಲ್ಲಿಯೂ ಬಿಸಿ ಗಾಳಿ ಬೀಸಲಾರಂಭಿಸಿದೆ. ಮನೆಯಿಂದ ಹೊರಗೆ ಇಳಿದು ಸಂಚರಿಸಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸಮಯಗಳಲ್ಲಿ ಸಹಜವಾಗಿ 20ರಿಂದ 25 ಡಿಗ್ರಿ ತಾಪಮಾನ ಇರುತ್ತದೆ. ಆದರೆ 4 ದಿನಗಳಿಂದ ಈ ಭಾಗದಲ್ಲಿ 35 ಡಿಗ್ರಿ ತಾಪಮಾನ ಇದೆ ಎಂದು ಗ್ರಾಮಸ್ಥರಾದ ರಾಜಾರಾಂ ಕಾರಂತ ಹೇಳಿದ್ದಾರೆ.ಕಾಳ್ಗಿಚ್ಚು ಅಲ್ಲ....ಕಾಡುಗಳ್ಳರ ಕೃತ್ಯ...!!

ಉಪ್ಪಿನಂಗಡಿ:
ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಕಾಳ್ಗಿಚ್ಚಿನಿಂದ ಅಲ್ಲ, ಇದು ಕಾಡಿನಿಂದ ಮರವನ್ನು ಕದ್ದು ಕಡಿದು ಸಾಗಾಟ ಮಾಡುವ ಕಾಡು ಕಳ್ಳರ ಕೃತ್ಯವಾಗಿದ್ದು, ಈ ಕೃತ್ಯದಲ್ಲಿ ಕಳ್ಳರ ಜತೆ ಇಲಾಖೆಯ ಸಿಬ್ಬಂದಿಗಳೂ ಶಾಮೀಲು ಆಗಿದ್ದಾರೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ. ಕಾಡಿನಿಂದ ಭಾರಿ ಪ್ರಮಾಣದಲ್ಲಿ ಮರಗಳನ್ನು ಕಡಿದು ಸಾಗಣೆ ನಡೆಸುವ ಕೃತ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಗ್ರಾಮಸ್ಥರು ಇದರ ವಿರುದ್ಧ ಇಲಾಖೆಗೆ ದೂರು ನೀಡುತ್ತಾರೆ. ಹೀಗಾಗಿ ಇದನ್ನು ಮರೆ ಮಾಚುವ ಸಲುವಾಗಿ ಅದರ ಬುಡವನ್ನು ಕಣ್ಮರೆ ಮಾಡುವ ಸಲುವಾಗಿ ಬೆಂಕಿ ಹಾಕಿ ಸುಟ್ಟು ಹಾಕುತ್ತಾರೆ. ಹೀಗೆ ಹೊತ್ತಿಕೊಳ್ಳುವ ಬೆಂಕಿ ಹರಡುತ್ತಾ ಹೋಗಿ ಈ ರೀತಿಯಲ್ಲಿ ಅನಾಹುತ ಸೃಷ್ಟಿಯಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.ಅಧಿಕಾರಿಗಳು ಬರಲೇ ಇಲ್ಲ...!!!

4 ದಿನಗಳಿಂದ ಕಾಡು ಹೊತ್ತಿ ಉರಿಯುತ್ತಿದ್ದರೂ, ಯಾವೊಬ್ಬ ಅಧಿಕಾರಿಯೂ ಇತ್ತ ಬಂದಿಲ್ಲ. ಗ್ರಾಮಸ್ಥರು ಸೇರಿಕೊಂಡು ಬೆಂಕಿ ನಂದಿಸುತ್ತಿದ್ದೇವೆ. ಈ ರೀತಿಯಾಗಿ ಅರಣ್ಯ ಉರಿಯುತ್ತಿದ್ದರೂ ಬಾರದೇ ಇರುವ ಇಲಾಖೆ ಅಧಿಕಾರಿಗಳ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಗ್ರಾಮಸ್ಥರಾದ ನಾವುಗಳು ಅಸಹಾಯಕರಾಗಿದ್ದೇವೆ. ಇಲಾಖೆಯ ಹಿರಿಯ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.