ಶಿಶುಮರಣ ನಿಯಂತ್ರಣ: ಸರ್ಕಾರದ ಜತೆ ಕೈಜೋಡಿಸಿ

7

ಶಿಶುಮರಣ ನಿಯಂತ್ರಣ: ಸರ್ಕಾರದ ಜತೆ ಕೈಜೋಡಿಸಿ

Published:
Updated:

ದಾವಣಗೆರೆ: ಶಿಶು ಮರಣ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಸಂಬಂಧ ನೀತಿ ನಿಯಮ ರೂಪಿಸುವ ನಿಟ್ಟಿನಲ್ಲಿ ಮಕ್ಕಳ ತಜ್ಞ ವೈದ್ಯರು ಸರ್ಕಾರದೊಂದಿಗೆ ಪಾತ್ರ ವಹಿಸುವ  ಅಗತ್ಯವಿದೆ ಎಂದು ನ್ಯಾಷನಲ್ ನಿಯೋನಾಟಾಲಜಿ ಫೋರಂ ಆಫ್ ಇಂಡಿಯಾದ ಅಧ್ಯಕ್ಷ ಡಾ.ಎಂ.ಕೆ.ಸಿ. ನಾಯರ್ ತಿಳಿಸಿದರು.ಭಾರತೀಯ ಮಕ್ಕಳ ತಜ್ಞರ ಅಕಾಡೆಮಿ (ಐಎಪಿ) ಜಿಲ್ಲಾ ಶಾಖೆ, ಜೆಜೆಎಂ ವೈದ್ಯ ಕಾಲೇಜು, ಎಸ್‌ಎಸ್ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಶನಿವಾರ ಆಯೋಜಿಸಿರುವ `ಪಿಡಿಕಾನ್-2012~ ರಾಜ್ಯಮಟ್ಟದ ಮಕ್ಕಳ ತಜ್ಞರ ವಾರ್ಷಿಕ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಭಾರತ ಪ್ರಕಾಶಿಸುತ್ತಿದೆ ಎಂದು ಹೇಳುತ್ತೇವೆ. ಆದರೆ, ಅಪೌಷ್ಟಿಕತೆ ತಾಂಡವವಾಡುತ್ತಿದೆ. ಈ ನಿಟ್ಟಿಯಲ್ಲಿ ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ ರಾಜ್ಯ ಶಾಖೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು. ಸಾಧ್ಯವಾದಷ್ಟು ಸಹಕಾರ ನೀಡಬೇಕು ಎಂದರು.ಶಿಶುಮರಣ ಪ್ರಮಾಣ ದಕ್ಷಿಣದ ರಾಜ್ಯಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕೇರಳ ಪ್ರಥಮ ಸ್ಥಾನದಲ್ಲಿದೆ. ಆಂಧ್ರಪ್ರದೇಶ, ತಮಿಳುನಾಡು, ಗೋವಾ ರಾಜ್ಯಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಶಿಶುಮರಣ ತಡೆಯುವ ನಿಟ್ಟಿನಲ್ಲಿ ಮಕ್ಕಳ ತಜ್ಞ ವೈದ್ಯರ ಜವಾಬ್ದಾರಿ ಮಹತ್ವದ್ದಾಗಿದೆ. ನಮ್ಮ ರಾಜ್ಯ ಕೇರಳದಲ್ಲಿನ ವೈದ್ಯರು, ಬಹಳಷ್ಟು ಸಮುದಾಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿ ದ್ದಾರೆ. ಇದು ಇತರ ರಾಜ್ಯದವರಿಗೆ ಮಾದರಿಯಾಗಬೇಕು ಎಂದರು.ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಗೆ ಮುಂದಿನ ವರ್ಷಗಳಲ್ಲಿ ಕರ್ನಾಟಕದವರು ಅಧ್ಯಕ್ಷರಾಗಲಿ ಎಂದು ಆಶಿಸಿದರು.ಐಎಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಡಾ.ಪಿ.ಎಸ್. ಸುರೇಶ್‌ಬಾಬು ಅವರಿಂದ ಅಧಿಕಾರ ಸ್ವೀಕರಿಸಿದ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ಮಾತನಾಡಿ, ಶಾಖೆ 1963ರಲ್ಲಿ ಆರಂಭವಾದಾಗ 12 ಮಂದಿ ಇದ್ದೆವು. ಇಂದು 20 ಸಾವಿರಕ್ಕೇರಿದೆ. ಎಲ್ಲರೂ ಒಟ್ಟುಗೂಡುವ ಮೂಲಕ, ಮಕ್ಕಳ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.ಅಪೌಷ್ಟಿಕತೆ, ಬೆಳವಣಿಗೆ ಕುಂಠಿತ, ಹದಿಹರೆಯದ ತೊಂದರೆಗಳು ಮೊದಲಾದವು ಪ್ರಸ್ತುತ ಬಹುದೊಡ್ಡ ಸಮಸ್ಯೆಗಳಾಗಿ ಕಾಡುತ್ತಿವೆ. ಉತ್ತರ ಕರ್ನಾಟಕದಲ್ಲಿ ಅಪೌಷ್ಟಿಕತೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ವೈದ್ಯರು ತಮ್ಮ ಕೆಲಸದ ಬಗ್ಗೆಯೇ ಯಾವಾಗಲೂ ಗಮನ ನೀಡದೇ ಸಮುದಾಯಕ್ಕೆ ಕೈಲಾದ ಸಹಾಯ ಮಾಡಬೇಕು. ಶಾಲೆಗಳಿಗೆ ಹೋಗಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಉತ್ತಮ ಪೋಷಣೆ ಬಗ್ಗೆ ಸಲಹೆ ಕೊಡಬೇಕು ಎಂದು ಸಲಹೆ ನೀಡಿದರು.ಶೆಣೈ ಸೇರಿ ಹಲವರಿಗೆ ಸನ್ಮಾನ

ಮುಂದಿನ ವರ್ಷದ ಅ. 9 ಮತ್ತು 10ರಂದು ಬೆಳಗಾವಿಯಲ್ಲಿ ರಾಜ್ಯಮಟ್ಟದ ಮಕ್ಕಳ ತಜ್ಞ ವೈದ್ಯರ ಸಮ್ಮೇಳನ ಆಯೋಜಿಸಲಾಗುವುದು ಎಂದು ಪ್ರಕಟಿಸಿದರು.ಕಾರ್ಯಕ್ರಮದಲ್ಲಿ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಶಾಖೆಯ ಮಾಜಿ ಅಧ್ಯಕ್ಷರಾದ ಮೈಸೂರಿನ ಡಾ.ಯು.ಜಿ. ಶೆಣೈ, ಡಾ.ಎಚ್. ಪರಮೇಶ್, ಡಾ.ವಿ.ಡಿ. ಪಾಟೀಲ್, ಡಾ.ಎಚ್. ವೀರಭದ್ರಪ್ಪ, ಡಾ.ಮಂಜುನಾಥ್, ಡಾ.ಬಾಣಾಪುರ್‌ಮಠ್, ಡಾ.ಎಲ್.ಎಚ್. ಬಿದ್ರಿ, ಡಾ.ದೊಡ್ಡೇಗೌಡ, ಡಾ.ಆರ್.ಟಿ. ಪಾಟೀಲ್, ಡಾ.ಸುಬ್ಬರಾವ್, ಡಾ.ಎಲ್.ಎಸ್. ಕುಲಕರ್ಣಿ, ಡಾ.ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು.ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್, ಅಧ್ಯಕ್ಷತೆ ವಹಿಸಿದ್ದ ಶಾಸಕ ಶಾಮನೂರು ಶಿವಶಂಕರಪ್ಪ, ಡಾ.ಪಿ.ಎಸ್. ಸುರೇಶ್‌ಬಾಬು ಮಾತನಾಡಿದರು. ಬಾಪೂಜಿ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ವಿದ್ಯಾಸಂಸ್ಥೆ ನಿರ್ದೇಶಕ ಎ.ಸಿ. ಜಯಣ್ಣ, ಪ್ರಾಂಶುಪಾಲ ಡಾ.ಮಂಜುನಾಥ ಆಲೂರು ಪಾಲ್ಗೊಂಡಿದ್ದರು.ರಶ್ಮಿ ಮತ್ತು ಸಂಗಡಿಗರು ಸ್ವಾಗತಿಸಿದರು. ಡಾ.ಬಿ.ಎಸ್. ಗುರುಪ್ರಸಾದ್ ಸ್ವಾಗತಿಸಿದರು. ಡಾ.ಎನ್.ಕೆ. ಕಾಳಪ್ಪನವರ್ ವರದಿ ಮಂಡಿಸಿದರು. ಜಿ.ಎಸ್. ಲತಾ ಹಾಗೂ ಟಿ.ಆರ್. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಡಾ.ಬಿ.ಎಸ್. ಪ್ರಸಾದ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry