ಮಂಗಳವಾರ, ಏಪ್ರಿಲ್ 13, 2021
23 °C

ಶಿಶು ಸಾವಿನ ಸಂಖ್ಯೆ ಹೆಚ್ಚಳ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಶು ಸಾವಿನ ಸಂಖ್ಯೆ ಹೆಚ್ಚಳ: ಆತಂಕ

ಬೆಂಗಳೂರು:  `ಶಿಶು ಸಾವಿನ ಸಂಖ್ಯೆಗಳು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚಾಗುತ್ತಿವೆ~ ಎಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ ನಿರ್ದೇಶಕ ಸೆಲ್ವ ಕುಮಾರ್ ಅವರು ಆತಂಕ ವ್ಯಕ್ತಪಡಿಸಿದರು.ಕೇಂದ್ರ ಮತ್ತು ಪ್ರಸಾರ ಸಚಿವಾಲಯದ ಹಾಡು ಮತ್ತು ನಾಟಕ ವಿಭಾಗ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬುಧವಾರ ಕೇಂದ್ರೀಯ ಸದನದ ಸಭಾಂಗಣದಲ್ಲಿ ಏರ್ಪಡಿಸಿದ್ದ  ಸಾರ್ವಜನಿಕರಿಗೆ ಆರೋಗ್ಯದ ಬಗೆಗೆ ಜಾಗೃತಿ ಮೂಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.`ರಾಜ್ಯದಲ್ಲಿ ವರ್ಷದಲ್ಲಿ ಒಟ್ಟು 10 ಲಕ್ಷ ಶಿಶುಗಳು ಜನಿಸಿದರೆ, ಅದರಲ್ಲಿ 35 ಸಾವಿರ ಶಿಶುಗಳು ವರ್ಷ ತುಂಬುವುದರೊಳಗೆ  ಸಾವನ್ನಪ್ಪುತ್ತಿರುವುದು ಆತಂಕಪಡುವ ವಿಷಯವಾಗಿದೆ. ನಮ್ಮ ರಾಜ್ಯಕ್ಕೆ ಹೋಲಿಸಿದರೆ ಕೇರಳದಲ್ಲಿ ಶಿಶುಗಳ ಸಾವಿನ ಸಂಖ್ಯೆ 12,000~ ಎಂದರು.`ಶಿಶುಗಳ ಮತ್ತು ತಾಯಂದಿರ ಅಧಿಕ ಪ್ರಮಾಣದ ಸಾವಿನ ಸಂಖ್ಯೆಯನ್ನು ಇದುವರೆಗೂ ನಿಲ್ಲಿಸಲಾಗಿಲ್ಲ.  ಇದಕ್ಕೆ ಬಹುತೇಕ ಕಾರಣ ಸಮಾಜದಲ್ಲಿನ ಜನರ ಅಭಿಪ್ರಾಯ ಮತ್ತು ಮೂಢನಂಬಿಕೆಗಳನ್ನು ಬದಲಾಯಿಸಲಾಗಿಲ್ಲ ಎಂಬುದಾಗಿದೆ. ಶಿಶು ಮತ್ತು ತಾಯಿಯ ಆರೋಗ್ಯ ರಕ್ಷಣೆ ಕಾರ್ಯವು ಎಷ್ಟು ಮುಖ್ಯವಾಗಿದೆ ಎಂಬುದು ನಮಗಿನ್ನೂ ತಿಳಿದಿಲ್ಲ~ ಎಂದು ವಿಷಾದಿಸಿದರು.`ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ ವರದಿಯಂತೆ 2011 ರ ನವಜಾತ ಶಿಶುಗಳ ಮರಣ ಪ್ರಮಾಣದಂತೆ ರಾಜ್ಯದಲ್ಲಿ  1000 ಶಿಶುಗಳಲ್ಲಿ  31 ಶಿಶುಗಳು ಒಂದು ವರ್ಷವಾಗುವ ಮೊದಲೇ ಮರಣ ಹೊಂದಿವೆ.ಹಾಗೆಯೇ ಬಾಣಂತಿಯರ ಮರಣ ಪ್ರಮಾಣದಲ್ಲಿಯೂ ಅಧಿಕತೆ ಕಂಡುಬಂದಿದ್ದು ಒಂದು ಲಕ್ಷದಲ್ಲಿ 125 ಬಾಣಂತಿಯರು ಸಾವನ್ನಪ್ಪಿದ್ದಾರೆ. ಆದರೆ, ಈ ವರ್ಷದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕ್ರಮವಾಗಿ 25 ಕ್ಕೆ ಮತ್ತು ಬಾಣಂತಿಯರ ಮರಣ ಪ್ರಮಾಣವನ್ನು 100 ಕ್ಕೆ ಇಳಿಸುವ ಗುರಿಯನ್ನು ಹೊಂದಲಾಗಿದೆ~ ಎಂದು ವಿವರಿಸಿದರು.`ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಇಂದು ಅವಶ್ಯಕವಾಗಿದೆ. ಬಾಣಂತಿಯರಿಗೆ ಮಗು ಹುಟ್ಟಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಿಸಿದರೆ ಶಿಶುವಿಗೆ ಯಾವುದೇ ಪ್ರತಿ ಸೋಂಕು ತಗುಲದಂತೆ ಮತ್ತು ಬೇರೆ ಯಾವ ರೋಗವು ಹರಡದಂತೆ ರಕ್ಷಣೆಯನ್ನು ಮಾಡುತ್ತದೆ ಎಂಬ ಜಾಗೃತಿಯನ್ನು ಅವರಿಗೆ ಮೂಡಿಸಬೇಕು. ಆಶಾ ಕಾರ್ಯಕರ್ತೆಯರು ಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು~ ಎಂದರು.`ಬಾಣಂತಿಯರ ಮರಣ ಪ್ರಮಾಣವು ಹೆಚ್ಚಾಗಲು ಅವರಲ್ಲಿನ ರಕ್ತಹೀನತೆಯೇ ಪ್ರಮುಖ ಕಾರಣವಾಗಿದೆ. ಸರ್ಕಾರವು ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲವಿರುವ ಮಾತ್ರೆಗಳನ್ನು ವಿತರಿಸಬೇಕು~ ಎಂದು ಹೇಳಿದರು.

ಎರಡು ದಿನದ ಕಾರ್ಯಾಗಾರದಲ್ಲಿ ಜಾನಪದ ಕಲಾವಿದರು ಸಾರ್ವಜನಿಕರಿಗೆ ಡೊಳ್ಳು ಕುಣಿತ, ವೀರಗಾಸೆ, ಗೀಗಿ ಪದಗಳ ಮೂಲಕ ಜಾಗೃತಿ ಮೂಡಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.