ಮಂಗಳವಾರ, ಮೇ 17, 2022
27 °C

ಶಿಸ್ತಿನ ರಾಜಕಾರಣಿ ಕೆಎಚ್‌ಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ನಾಲ್ಕು ದಶಕಗಳ ಕಾಲ ಹಿರಿಯೂರು ತಾಲ್ಲೂಕಿನ ಮೇಲೆ ತಮ್ಮದೇ ರೀತಿಯಲ್ಲಿ ಹಿಡಿತ ಸಾಧಿಸಿದ್ದ ಕೆ.ಎಚ್. ರಂಗನಾಥ್ ಅವರು ದಕ್ಷತೆ, ನಿಷ್ಠುರತೆಗೆ ಹೆಸರಾದವರು. ರಾಜಕೀಯದಲ್ಲಿ ಶಿಸ್ತು, ಪ್ರಾಮಾಣಿಕತೆ ಮೆರೆದವರು.

ವಿದ್ಯಾರ್ಥಿ ದೆಸೆಯಲ್ಲಿಯೇ ಮಹಾತ್ಮ ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು, ಸೆರೆವಾಸ ಅನುಭವಿಸಿದ ಕೆ.ಎಚ್. ರಂಗನಾಥ್ ಅವರು, ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 1926ರ ಅಕ್ಟೋಬರ್ 20ರಂದು ಹರಿಹರಪ್ಪ ದಂಪತಿಗೆ ಎರಡನೇ ಮಗನಾಗಿ ಜನಿಸಿದ್ದರು. ಜಗಳೂರಿನಲ್ಲಿ ಪ್ರಾಥಮಿಕ, ಚಿತ್ರದುರ್ಗದಲ್ಲಿ ಪ್ರೌಢ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಮತ್ತು ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದರು. ವ್ಯಾಸಂಗದ ಜತೆಗೆ ಸಾಮಾಜಿಕ ಕಳಕಳಿಯ ಜತೆ, ದುರ್ಬಲರ ಸೇವೆ ಮಾಡಲು ರಾಜಕೀಯ ಕ್ಷೇತ್ರ ಸೂಕ್ತ ಎಂದು ಅವರು ಭಾವಿಸಿದ್ದರು. ಕಾನೂನು ಪದವಿ ನಂತರ ತಮ್ಮ ತಂದೆಯವರ ಆಪ್ತರಾಗಿದ್ದ ಹಿರಿಯ ರಾಜಕಾರಣಿ ಕೆ. ಕೆಂಚಪ್ಪ ಅವರ ಮಾರ್ಗದರ್ಶನದಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. ಕೆಂಚಪ್ಪ ಅವರ ಮಾರ್ಗದರ್ಶನ, ವಕೀಲಿ ವೃತ್ತಿಯಲ್ಲಿನ ಕಾನೂನು ಅರಿವು ರಂಗನಾಥ್ ಅವರನ್ನು ಸ್ಪಷ್ಟ ನಿಲುವಿನ ರಾಜಕಾರಣಿಯನ್ನಾಗಿ ಮಾಡಿತು ಎಂದು ಅವರ ನಾಲ್ಕು ದಶಕಗಳ ರಾಜಕೀಯ ಒಡನಾಡಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಬಿ. ಕೆಂಚಪ್ಪ ~ಪ್ರಜಾವಾಣಿ~ಗೆ ತಿಳಿಸಿದರು.

ರಂಗನಾಥ್ ಅವರು ಪ್ರಜಾ ಸೋಷಲಿಸ್ಟ್ ಪಕ್ಷದಿಂದ ರಾಜಕೀಯ ಆರಂಭಿಸಿದರು. ಪಿಎಸ್‌ಪಿ ಕಾಂಗ್ರೆಸ್ ಜತೆ ವಿಲೀನಗೊಂಡ ನಂತರ ಅಲ್ಲಿಯೇ ನೆಲೆ ನಿಂತರು. ಹಿರಿಯ ರಾಜಕಾರಣಿಗಳಾದ ಮುಲ್ಕಾ ಗೋವಿಂದ ರೆಡ್ಡಿ, ಎಸ್.ಎಂ. ಕೃಷ್ಣ, ಜಿ.ವಿ. ಅಂಜನಪ್ಪ, ಶಿವಾನಂದಸ್ವಾಮಿ, ಬಿ.ಎಲ್. ಗೌಡ ಅವರು ರಂಗನಾಥರ ಒಡನಾಡಿಗಳು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ 1962 ಮತ್ತು 1967ರಲ್ಲಿ ಸತತವಾಗಿ ಎರಡು ಬಾರಿ ಪಿಎಸ್‌ಪಿ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು 1969ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಹಿರಿಯೂರು ರಂಗನಾಥ್ ಅವರಿಗೆ ರಾಜಕೀಯ ನೆಲೆ ಕಲ್ಪಿಸಿದ್ದರೆ, ಇಡೀ ರಾಜ್ಯದಲ್ಲಿ ಯಾವುದೇ ಊರಿಗೆ ಹೋದರೂ ಹಿರಿಯೂರು ಎಂದಾಕ್ಷಣ, ರಂಗನಾಥ್ ಅವರ ಊರಲ್ಲವೇ ಎಂದು ಜನ ಕೇಳುವಷ್ಟು ಪ್ರಸಿದ್ಧಿಯನ್ನು ಅವರು ತಂದುಕೊಟ್ಟಿದ್ದರು ಎಂದು ಕೆಂಚಪ್ಪ ಸ್ಮರಿಸುತ್ತಾರೆ.

ಅಶಿಸ್ತನ್ನು ರಂಗನಾಥ್ ಎಂದೂ ಸಹಿಸುತ್ತಿರಲಿಲ್ಲ. ಅವರಲ್ಲಿಗೆ ಏನೇ ಕೆಲಸಕ್ಕೆ ಹೋಗುವುದಿದ್ದರೂ ಶಿಸ್ತಾಗಿರಬೇಕಿತ್ತು. ಇಲ್ಲವಾದರೆ ಗದರಿಸಿ ಕಳಿಸುತ್ತಿದ್ದರು. ಆದರೆ, ಕ್ಷಣಹೊತ್ತು ಬಿಟ್ಟು ಮತ್ತೆ ಕರೆಸಿ ಸಮಾಧಾನಪಡಿಸಿ, ಬುದ್ಧಿವಾದ ಹೇಳುತ್ತಿದ್ದರು. ಯಾವುದೇ ಪಕ್ಷದ ರಾಜಕಾರಣಿಗಳಿರಲಿ, ಯಾವ ಮಟ್ಟದ ಅಧಿಕಾರಿಗಳೇ ಇರಲಿ, ರಂಗನಾಥ್ ಹೇಳಿದ ಮಾತೆಂದರೆ ತೆಗೆದು ಹಾಕುತ್ತಿರಲಿಲ್ಲ. ಅವರ ತೀರ್ಮಾನಗಳೇ ಆ ರೀತಿ ಇರುತ್ತಿದ್ದವು. ಒಮ್ಮೆ ತೀರ್ಮಾನ ಮಾಡಿದರೆ ಯಾವುದೇ ಕಾರಣಕ್ಕೂ ಬದಲಾಯಿಸುತ್ತಿರಲಿಲ್ಲ.

ಲೋಕಸಭಾ ಸದಸ್ಯರಾಗಿದ್ದ ಅವಧಿ ಬಿಟ್ಟರೆ ಉಳಿದ ಅವಧಿಯಲ್ಲಿ ಸಚಿವರಾಗಿ, ವಿಧಾನಸಭಾ ಅಧ್ಯಕ್ಷರಾಗಿ ಸರ್ಕಾರದ, ಸದನದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದ ಖ್ಯಾತಿ ರಂಗನಾಥ್ ಅವರದ್ದು. ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವ ಸ್ವಭಾವ ಅವರದ್ದಾಗಿರಲಿಲ್ಲ. ಆದರೆ, ತಪ್ಪನ್ನು ನೇರವಾಗಿ ಖಂಡಿಸುವ ಪ್ರವೃತ್ತಿ ಅವರಿಗೆ ರಕ್ತಗತವಾಗಿ ಬಂದಿತ್ತು. ಯಾವುದೇ ರಾಜಕೀಯ ಪಕ್ಷದ ಮುಖಂಡರಿರಲಿ ರಂಗನಾಥ್ ಅವರ ಜತೆ ಮಾತನಾಡುವಾಗ ತುಂಬಾ ಯೋಚಿಸಿ ಮಾತನಾಡುತ್ತಿದ್ದರು. ಅವರ ಅತಿಯಾದ ಶಿಸ್ತು ಒಮ್ಮಮ್ಮೆ ವಿರೋಧಿಗಳಿಗೆ ಅಹಂಕಾರದಂತೆ ಕಂಡಿದ್ದರೂ ಅಚ್ಚರಿಯಿಲ್ಲ.

ಚಪ್ಪಲಿ ಕತೆ: ರಂಗನಾಥರು ಹಿರಿಯೂರಿನ ಪ್ರವಾಸಿ ಮಂದಿರದಲ್ಲಿದ್ದಾರೆಂದರೆ ಅವರನ್ನು ಕಾಣಲು ಹೋಗುವವರು ಚಪ್ಪಲಿಯನ್ನು ಕೊಠಡಿಯ ಹೊರಗೆ ಬಿಟ್ಟು ಹೋಗಬೇಕಿತ್ತು. ಅವರ ರಾಜಕೀಯ ವಿರೋಧಿಗಳು ಚಪ್ಪಲಿ ಬಿಟ್ಟು ಹೋಗಲು, ಇವರೇನು ದೇವರೆ? ಪ್ರವಾಸಿಮಂದಿರ ದೇಗುಲವೇ ಎಂದು ವ್ಯಂಗ್ಯವಾಗಿ ಆಡಿಕೊಳ್ಳುತ್ತಿದ್ದರು. ಈ ಬಗ್ಗೆ ಒಮ್ಮೆ `ಪ್ರಜಾವಾಣಿ~ ಪ್ರಶ್ನೆ ಮಾಡಿದ ಸಂದರ್ಭದಲ್ಲಿ, ತಮ್ಮನ್ನು ಕಾಣಲು ಬರುವವರಲ್ಲಿ ಹಳ್ಳಿಯವರೇ ಹೆಚ್ಚು. ಚಪ್ಪಲಿಗೆ ಏನಾದರೂ ಕೊಳೆ ಅಂಟಿದ್ದರೆ, ಅದರಿಂದ ಪ್ರವಾಸಿ ಮಂದಿರ ಕೊಳೆಯಾಗುತ್ತದೆ. ಮನೆಯಲ್ಲಿ ಚಪ್ಪಲಿಯನ್ನು ಹೊರಗೆ ಬಿಡುವುದಿಲ್ಲವೇ? ಕೆಲವರಿಗೆ ಟೀಕೆ ಮಾಡುವುದೇ ಕೆಲಸ, ಎಂದಿದ್ದರು. ರಂಗನಾಥ್ ಎಂದೂ ಹಣದ ಹಿಂದೆ ಹೋದವರಲ್ಲ. ಮಂತ್ರಿ ಸ್ಥಾನ ಕೊಡಿ ಎಂದು ವಶೀಲಿ ಮಾಡಿದವರಲ್ಲ. ಬದುಕಿನ ಕೊನೆಯ ಕ್ಷಣದವರೆಗೂ ತತ್ವ-ಸಿದ್ಧಾಂತ ಬಿಟ್ಟು ರಾಜಕಾರಣ ಮಾಡಲಿಲ್ಲ. ಮುಖದಲ್ಲಿ ಸಿಡುಕು ಎದ್ದು ಕಾಣುತ್ತಿದ್ದರೂ, ಅಂತರಂಗದಲ್ಲಿ ಕರುಣಾಮಯಿ.

ಬಿಡುವು ಸಿಕ್ಕಾಗಲೆಲ್ಲ ಓದುವ ಹವ್ಯಾಸವಿಟ್ಟುಕೊಂಡಿದ್ದ ಅವರು, ತಮ್ಮನ್ನು ಮಾತನಾಡಿಸಲು ಬಂದವರನ್ನು ಈ ಪುಸ್ತಕದ ಹೆಸರು ಕೇಳಿದ್ದೀಯಾ? ಒಮ್ಮೆ ಅದನ್ನು ಓದಬೇಕು. ಒಳ್ಳೆಯ ಪುಸ್ತಕ ಓದಲಿಕ್ಕೂ ಸಂಸ್ಕಾರ ಬೇಕು ಎನ್ನುತ್ತಿದ್ದರು. ರಂಗನಾಥ್ ಸಾವಿನಿಂದ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸಜ್ಜನರೊಬ್ಬರನ್ನು ಕಳೆದುಕೊಂಡಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.